ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಸರ್ಕಾರಿ ಭೂಮಿ ಅತಿಕ್ರಮಣ ಹೆಚ್ಚಳ

ಕಣ್ಮುಚ್ಚಿ ಕುಳಿತ ಕಂದಾಯ, ಅರಣ್ಯ ಇಲಾಖೆಗಳು– ಸಾರ್ವಜನಿಕರ ಆರೋಪ
Last Updated 6 ಜನವರಿ 2021, 3:22 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಹಲವೆಡೆ ನೂರಾರು ಹೆಕ್ಟೇರ್‌ ಸರ್ಕಾರಿ ಜಮೀನು ಹಾಗೂ ಅರಣ್ಯ ಭೂಮಿ ಎಗ್ಗಿಲ್ಲದಂತೆ ಅತಿಕ್ರಮಣ ಆಗುತ್ತಿದೆ.

ಅರಣ್ಯ ಭೂಮಿ ಕೃಷಿಕರಿಗೆ ಸಾಗುವಳಿ ಪತ್ರ ವಿತರಣೆ ಮಾಡಲಾಗುವುದೆಂದು ಹಿಂದಿನ ಸರ್ಕಾರ ಪ್ರಚಾರ ಮಾಡಿದ್ದರಿಂದಾಗಿ ಕಾಯ್ದಿರಿಸಿದ ಕುದುರು ಕಣಿವೆ, ಲಕ್ಕಿಹಳ್ಳಿ ಅರಣ್ಯ ಪ್ರದೇಶ, ಕೈನಡು, ನೀರಗುಂದ ಸೇರಿ ಇನ್ನಿತರ ಗ್ರಾಮಗಳಲ್ಲಿ ಕಾವಲು ಹಾಗೂ ಸರ್ಕಾರಿ ಜಮೀನು ಸಾಕಷ್ಟು ಒತ್ತುವರಿಯಾಗಿತ್ತು. ಈಗ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿ ಆಗುತ್ತಿದೆ.

ಕೆಲವು ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ಕಾಲ ಕಾಲಕ್ಕೆ ಮಳೆ– ಬೆಳೆ ಸಮೃದ್ಧವಾಗಿ ಆಗದ ಕಾರಣ ಕೃಷಿ ವಲಯದಲ್ಲಿ ದುಡಿಯುತ್ತಿದ್ದವರಿಗೆ ಕೆಲಸ ಇಲ್ಲದಂತಾಗಿತ್ತು. ಇದರಿಂದಾಗಿ ಉದ್ಯೋಗ ಅರಸಿ ತಾಲ್ಲೂಕಿನ ಸಾವಿರಾರು ಜನರು ಬೆಂಗಳೂರು, ಮಂಗಳೂರು, ಮುಂಬೈ ಸೇರಿದಂತೆ ಇನ್ನಿತರ ನಗರಗಳಿಗೆ ವಲಸೆ ಹೋಗಿದ್ದರು. ಕೊರೊನಾ ಸೋಂಕಿನ ಭೀತಿಯಿಂದ ವಲಸೆ ಹೋಗಿದ್ದವರು ಮರಳಿ ಸ್ವಗ್ರಾಮಕ್ಕೆ ಬಂದಿದ್ದಾರೆ.

ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಮಳೆ, ಬೆಳೆ ಚೆನ್ನಾಗಿ ಆಗುತ್ತಿದೆ. ಇದರಿಂದ ಕೋವಿಡ್‌– 19 ಭೀತಿಯಿಂದ ವಾಪಸ್‌ ಬಂದವರಲ್ಲಿ ಹಲವರು ಸ್ವಗ್ರಾಮದಲ್ಲಿಯೇ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಇದರಿಂದ ಕೃಷಿ ಮಾಡಲು ತಮ್ಮ ಗ್ರಾಮಕ್ಕೆ ಹೊಂದಿಕೊಂಡಂತಿರುವ ಅರಣ್ಯ ಭೂಮಿ ಹಾಗೂ ಸರ್ಕಾರಿ ಗೋಮಾಳ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಅಕ್ರಮ ನಡೆಯುತ್ತಿದ್ದರೂ ಕಂದಾಯ ಹಾಗೂ ಅರಣ್ಯ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಈಗಾಗಲೇ ಅರಣ್ಯ ನಾಶದಿಂದ ನೀರಿನಲ್ಲಿ ಖನಿಜಾಂಶಗಳ ಕೊರತೆ ಹೆಚ್ಚಾಗುತ್ತಿದೆ. ಆಹಾರ ಪದಾರ್ಥಗಳಲ್ಲಿ ಪೌಷ್ಟಿಕಾಂಶ ಇಲ್ಲದಂತಾಗುತ್ತಿದೆ. ಜಾಗತಿಕ ತಾಪಮಾನ ತೀವ್ರವಾಗುತ್ತಿದೆ. ಗಾಳಿಯಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತಿದೆ.

ಇಂತಹ ವಿಪತ್ತಿನಿಂದ ಪಾರಾಗಬೇಕಾದರೆ ಅರಣ್ಯ ಭೂಮಿ ಸಂರಕ್ಷಿಸಿ, ಗಿಡಮರಗಳನ್ನು ಯಥೇಚ್ಛಚವಾಗಿ ಬೆಳೆಸಬೇಕು. 2006ರ ಅರಣ್ಯ ಕಾಯ್ದೆ ನಿಯಮ ಹಾಗೂ 1995ರ ಸುಪ್ರೀಂಕೋರ್ಟ್‌ನ ಅರಣ್ಯ ರಕ್ಷಣೆ ಆದೇಶ ಉಲ್ಲಂಘಿಸಿ ಭೂಮಿ ಅತಿಕ್ರಮ ಮಾಡಿಕೊಂಡಿರುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬುದು ಪರಿಸರ ಪ್ರಿಯರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT