ಶನಿವಾರ, ಮಾರ್ಚ್ 25, 2023
22 °C
ಟ್ಯಾಕ್ಸಿ, ಟ್ರಾವೆಲ್ಸ್‌, ಆಟೊ ಬಾಡಿಗೆ ದರ ಇಳಿಕೆಯಾಗುವುದು ಅನುಮಾನ

ಚಿತ್ರದುರ್ಗ: ಹೆಚ್ಚಿದ ಬಾಡಿಗೆ ಬರೆ ಪ್ರಯಾಣಿಕರಿಗೆ ತೊಂದರೆ

ಕೆ.ಎಸ್.ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲೆಯಲ್ಲಿ ಟ್ಯಾಕ್ಸಿ, ಟ್ರಾವೆಲ್ಸ್‌, ಆಟೊ ಬಾಡಿಗೆ ಹೆಚ್ಚಾಗಿ ಹಲವು ದಿನಗಳಾಗಿವೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಕೋವಿಡ್‌ ನಂತರ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಜೇಬಿಗೆ ಕತ್ತರಿ ಬಿದ್ದಿದೆ.

ನಗರ ಸೇರಿ ಜಿಲ್ಲೆಯ ಬಹುತೇಕ ಪ್ರಯಾಣಿಕರು ದೂರದ ಊರು, ಶುಭ ಕಾರ್ಯಕ್ರಮ, ಧಾರ್ಮಿಕ ಕ್ಷೇತ್ರಗಳು, ಯಾತ್ರೆ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಟ್ಯಾಕ್ಸಿ, ಟ್ರಾವೆಲ್ಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ, ‍ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿದ ನಂತರ ಬಾಡಿಗೆ ದರವೂ ಹೆಚ್ಚಾಗಿದ್ದು, ದರ ಕೇಳಿ ಕೆಲವರು ಬಸ್‌ಗಳಲ್ಲಿ ಸಂಚರಿಸಿರುವ ಉದಾಹರಣೆಗಳಿವೆ. ಈಗ ಸರ್ಕಾರ ದರ ಕಡಿಮೆಗೊಳಿಸಿದ್ದರೂ ಟ್ಯಾಕ್ಸಿ, ಟ್ರಾವೆಲ್ಸ್‌ ಬಾಡಿಗೆ ದರ ಇಳಿಕೆ ಆಗುವುದು ಅನುಮಾನ.

ಟ್ಯಾಕ್ಸಿ ಬಾಡಿಗೆ ದರ ಕಡಿಮೆ ಮಾಡುವಂತೆ ಪ್ರಯಾಣಿಕರು ಚೌಕಾಸಿ ಮಾಡಲು ಮುಂದಾಗುತ್ತಿದ್ದಾರೆ. ಆದರೆ, ಮಾಲೀಕರು ಇದಕ್ಕೆ ಬಿಲ್‌ಕುಲ್‌ ಒಪ್ಪುತ್ತಿಲ್ಲ. ಇದರಿಂದಾಗಿ ಬಾಡಿಗೆ ಸಿಗದೆಯೇ ಚಾಲಕರು ತೊಂದರೆಗೆ ಸಿಲುಕಿದ್ದಾರೆ. ತುಂಬಾ ಪರಿಚಯಸ್ಥರ ಬಳಿ ಮನವೊಲಿಸಿ ನಿಗದಿತ ದರಕ್ಕಿಂತ ಒಂದು ರೂಪಾಯಿ ಕಡಿಮೆ ಮಾಡಿ ಬಾಡಿಗೆ ಹೋದವರು ಇದ್ದಾರೆ. ದರ ಕಡಿಮೆ ಮಾಡದೆಯೇ ಇರುವ ಮಾಲೀಕರಿಗೂ ಇದರಿಂದ ಪೆಟ್ಟುಬಿದ್ದಿದೆ.

ಬಾಡಿಗೆಗಳು ಇಲ್ಲದಂತಹ ಸಮಯದಲ್ಲಿ ಕೆಲ ಚಾಲಕರು ಒಂದಿಷ್ಟು ಹೆಚ್ಚುವರಿ ಹಣದ ಆಸೆಗಾಗಿ ಸುತ್ತಾಡಿಸಿ ಕಿಲೋಮೀಟರ್‌ ಹೆಚ್ಚಿಸಿದ್ದಾರೆ. ಇದರಿಂದ ನಿಗದಿತ ಅವಧಿ ಮುಗಿದ ಬಳಿಕ ₹ 500ರ ಜತೆಗೆ ₹ 300 ಹೆಚ್ಚುವರಿಯಾಗಿ ಚಾಲಕರಿಗೆ ಪ್ರಯಾಣಿಕರು ನೀಡಬೇಕು. ಇದು ಇಬ್ಬರ ನಡುವೆ ಸಂಘರ್ಷಕ್ಕೂ ಕಾರಣವಾಗಿದೆ. ಕೊನೆಗೆ ಊರಿಗೆ ಮರಳಿದಾಗ ಮಾಲೀಕರು ಪ್ರಯಾಣಿಕರ ವಿಶ್ವಾಸ ಉಳಿಸಿಕೊಳ್ಳಲು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ಟ್ಯಾಕ್ಸಿ, ಟ್ರಾವೆಲ್ಸ್‌ ಸಂಬಂಧ ನಿಗದಿಗೊಳಿಸಿರುವ ನಗರದ ಜಿಲ್ಲಾಧಿಕಾರಿ ವೃತ್ತದ ಬಳಿ ವಾಹನಗಳನ್ನು ನಿಲ್ಲಿಸಲಾಗುತ್ತದೆ. 80ಕ್ಕೂ ಅಧಿಕ ವಾಹನಗಳು ಇಲ್ಲಿ ನಿತ್ಯ ನಿಲ್ಲುತ್ತವೆ. ಲಾಕ್‌ಡೌನ್‌ ತೆರವು ಬಳಿಕ ಈಗಷ್ಟೇ ಉದ್ಯಮ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೂ ಬಾಡಿಗೆಗೆ ಹೋಗುತ್ತಿರುವುದು 20 ವಾಹನಗಳು ಮಾತ್ರ. ಇದಕ್ಕೆ ಪ್ರಮುಖ ಕಾರಣ ದರ ಹೆಚ್ಚಳ.

‘ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಾಗಲಿ ಅಥವಾ ಕಡಿಮೆಯಾಗಲಿ. ಈಗಿರುವ ದರವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಯಾವಾಗ ಬೇಕಾದರೂ ದರ ಪುನಃ ಹೆಚ್ಚಳವಾಗಬಹುದು. ಇನ್ನು ಮಾಲೀಕರು ಗಿಟ್ಟುವುದಾದರೆ ಬಾಡಿಗೆ ಕಳಿಸುತ್ತಾರೆ. ಇಲ್ಲದಿದ್ದರೆ, ಕಳಿಸುವುದಿಲ್ಲ. ಚಾಲಕರಿಗೆ ವೇತನದ ರೂಪದಲ್ಲಿ ತಿಂಗಳಿಗೆ ₹ 2 ಸಾವಿರ ನೀಡುತ್ತಿದ್ದಾರೆ. ಇದರಿಂದ ಬದುಕು ಸಾಗದು. ಬಾಡಿಗೆ ಇದ್ದಲ್ಲಿ ಚಾಲಕರಿಗೆ ಕನಿಷ್ಠ ₹ 500 ಆದರೂ ಸಿಗುತ್ತದೆ. ಹೀಗಾಗಿ ಯಾವ ಕಾರು ಹೊರಡುತ್ತದೋ ಅದಕ್ಕೆ ಕೆಲವರು ಅವಲಂಬಿತರಾಗಿದ್ದಾರೆ’ ಎನ್ನುತ್ತಾರೆ ಲಘುವಾಹನ (ಟ್ಯಾಕ್ಸಿ) ಚಾಲಕರ ಮತ್ತು ಮಾಲೀಕರ ಸಂಘದ ನಿಂಗೇಶ್‌ ಗೌಡ.

ಆಟೊ ಸವಾರಿ; ದುಬಾರಿ
ಜಿಲ್ಲೆಯಲ್ಲಿ ಪ್ರಯಾಣಿಕರ ಹಿತ ಕಾಯಬೇಕಿದ್ದ ‘ಮೀಟರ್’ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗದ ಕಾರಣ ಪ್ರಯಾಣಿಕರಿಗೆ ಅಸಹಾಯಕ ಸ್ಥಿತಿ ಉಂಟಾಗಿದೆ. ಚಾಲಕರು ಕೇಳಿದಷ್ಟು ಬಾಡಿಗೆ ಕೊಟ್ಟು ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ಮೀಟರ್ ವ್ಯವಸ್ಥೆ ಇಲ್ಲವೇ ಎಂದು ಹೊರ ಜಿಲ್ಲೆಗಳಿಂದ ಬರುವ ಪ್ರಯಾಣಿಕರು ಸಾಮಾನ್ಯವಾಗಿ ಚಾಲಕರನ್ನು ಪ್ರಶ್ನಿಸುತ್ತಾರೆ. ಆದರೆ, ಕೊನೆಗೆ ಮೀಟರ್ ಇಲ್ಲದ ಆಟೊವನ್ನೇ ಹತ್ತುತ್ತಾರೆ. ಮೂರು ಕಿ.ಮೀಗಿಂತಲೂ ಹೆಚ್ಚು ದೂರವಿದ್ದರೆ, ಚಾಲಕರು ₹ 70ಕ್ಕಿಂತ ಹೆಚ್ಚು ಕೇಳಿದರೆ, ಅದರಲ್ಲೇ ₹ 10 ಚೌಕಾಸಿ ಮಾಡಿ ಹತ್ತುವವರೂ ಇದ್ದಾರೆ.

2010ರಿಂದ ಈಚೆಗೆ ಮೂರ‍್ನಾಲ್ಕು ಬಾರಿ ಆಟೊ ಬಾಡಿಗೆ ದರ ಪರಿಷ್ಕರಣೆಯಾಗಿದೆ. ರಾಜ್ಯದ ಇತರೆ ನಗರಗಳಂತೆ ಚಿತ್ರದುರ್ಗ ಬೆಳೆದಿಲ್ಲ. ಈ ಕಾರಣದಿಂದಾಗಿ ಮೀಟರ್ ಇಲ್ಲದೆಯೇ ದರ ನಿಗದಿಪಡಿಸಿ ಎಂಬ ಕೂಗು ಕೆಲ ಆಟೊ ಚಾಲಕರಿಂದ ಕೇಳಿಬಂದಿದೆ. 1.6 ಕಿ.ಮೀ. ಪ್ರಯಾಣಕ್ಕೆ ದಶಕದೊಳಗೆ ₹ 15ರಿಂದ 20ಕ್ಕೆ ಏರಿಕೆಯಾಗಿದೆ. 2020ರಲ್ಲಿ ಕನಿಷ್ಠ ₹ 20 ಇತ್ತು. ಆದರೀಗ ₹ 30, ₹ 40ರಂತೆ ಚಾಲಕರೇ ನಿಗದಿ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಆಟೊ ಮೀಟರ್‌ ಚಾಲ್ತಿಯಲ್ಲಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವ ಅಧಿಕಾರ ಆರ್‌ಟಿಒ ಅಧಿಕಾರಿಗಳಿಗೆ ಇದೆ. ಮೀಟರ್‌ ಅಳವಡಿಸದಿದ್ದರೆ ಅಂತಹ ಆಟೊಗಳಿಗೆ ದಂಡ ವಿಧಿಸುವ, ಪರವಾನಗಿಯನ್ನೇ ರದ್ದುಪಡಿಸುವ ಅಧಿಕಾರವೂ ಅವರಿಗಿದೆ. ಆದರೆ, ಅವರು ಆ ಕೆಲಸ ಮಾಡುವುದನ್ನು ಮರೆತು ಬಹಳ ವರ್ಷಗಳಾಗಿವೆ ಎಂಬುದು ಸಾರ್ವಜನಿಕರ ಆಕ್ರೋಶ. ಇದಕ್ಕೆ ಪುಷ್ಟಿ ಎಂಬಂತೆ ನಗರದಲ್ಲಿ ಸಾಕಷ್ಟು ಆಟೊಗಳಲ್ಲಿ ಮೀಟರ್‌ ಇಲ್ಲದೆಯೇ ರಾಜಾರೋಷವಾಗಿ ತಿರುಗಾಡುವುದನ್ನು ಕಾಣಬಹುದು.

ಪೊಲೀಸರಿಗೆ ಸವಾಲು
ನಿಗದಿತ ಪ್ರಯಾಣಿಕರಿಗಿಂತಲೂ ಹೆಚ್ಚು ಜನರನ್ನು ಆಟೊಗಳಲ್ಲಿ ಕೂರಿಸುವಂತಿಲ್ಲ. ಆದರೆ, ಇದು ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಉಲ್ಲಂಘನೆ ಆಗುತ್ತಿದೆ. ಪೊಲೀಸರು ಪ್ರಶ್ನಿಸಿದರೆ ಅಥವಾ ಪ್ರಕರಣ ದಾಖಲಿಸುವುದಾಗಿ ಹೇಳಿದರೆ ಆಟೊಗಳ ಚಾಲಕರು ಜಗಳಕ್ಕೆ ನಿಲ್ಲುತ್ತಾರೆ.

‘ಕೋವಿಡ್‌ನಿಂದಾಗಿ ಕೆಲ ತಿಂಗಳು ದುಡಿಮೆ ಇಲ್ಲದೆಯೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಬಡ ಚಾಲಕರ ಮೇಲೆ ಗದಪ್ರಹಾರ ಮಾಡಬೇಡಿ’ ಎಂದು ಮನವಿ ಮಾಡಿಕೊಂಡಿರುವ ಚಾಲಕರ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ಪ್ರಕರಣ ದಾಖಲಿಸುವ ಬದಲು ಪೊಲೀಸರು ದಂಡ ವಿಧಿಸಿ ಎಚ್ಚರಿಕೆ ನೀಡುತ್ತಿದ್ದಾರೆ.

ಆಟೊ ಬದಲು ಬೈಕ್‌ನಲ್ಲಿ ಶಾಲೆಗೆ
ಹಿರಿಯೂರು:
ನಗರದ ಶಾಲೆಗಳಿಗೆ ಬರಲು ತಾಲ್ಲೂಕಿನ ಕೆಲ ಗ್ರಾಮಗಳಿಂದ ವಿದ್ಯಾರ್ಥಿಗಳು ಆಟೊಗಳಲ್ಲಿ ಬರುತ್ತಿದ್ದರು. ಆದರೀಗ ಪೋಷಕರು ತಮ್ಮ ಮಕ್ಕಳನ್ನು ಬೈಕ್‌ನಲ್ಲಿ ಶಾಲೆಗಳಿಗೆ ಕರೆದುಕೊಂಡು ಬರುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಬಾಡಿಗೆ ದರ ದುಪ್ಪಟ್ಟು ಹೆಚ್ಚಳ ಮಾಡಿರುವುದು.

‘ನಮ್ಮೂರಿನಿಂದ 15–20 ಮಕ್ಕಳು ಒಂದೇ ವ್ಯಾನಿನಲ್ಲಿ ಹಿರಿಯೂರಿನ ಮೋಕ್ಷಗುಂಡಂ ಶಾಲೆಗೆ ಹೋಗುತ್ತಿದ್ದರು. ಮುಂಚೆ ತಿಂಗಳಿಗೆ ₹ 500 ಕೊಡುತ್ತಿದ್ದೆವು. ಈಗ ತಿಂಗಳಿಗೆ ₹ 1ಸಾವಿರ ಕೇಳುತ್ತಿದ್ದಾರೆ. ಶಾಲೆ ಆರಂಭವಾಗಿ ಒಂದು ವಾರವಾಗಿದ್ದು, ಮನೆಯವರೇ ಬೈಕಿನಲ್ಲಿ ಬಿಡುತ್ತಿದ್ದಾರೆ. ಕೋವಿಡ್‌ ನಂತರ ಬಡವರು, ಮಧ್ಯಮ ವರ್ಗದವರು ಮಕ್ಕಳನ್ನು ಓದಿಸುವುದು ದೊಡ್ಡ ಸವಾಲಾಗಿದೆ’ ಎನ್ನುತ್ತಾರೆ ಹುಚ್ಚವ್ವನಹಳ್ಳಿಯ ಪಿ.ಜಿ. ಗಂಗಾ ರಂಗೇಗೌಡ.

‘ನನ್ನ ಎರಡು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ನಿತ್ಯ ಆಟೊದಲ್ಲಿ ಮೋಕ್ಷಗುಂಡಂ ಶಾಲೆಗೆ ಹೋಗುತ್ತಿದ್ದರು. ತಿಂಗಳಿಗೆ ₹ 1,600 ಕೊಡುತ್ತಿದ್ದೆವು. ಸದ್ಯಕ್ಕೆ ನನ್ನ ಪತಿಯೇ ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ’ ಎನ್ನುತ್ತಾರೆ ಶ್ರೀನಿವಾಸ ಬಡಾವಣೆಯ ಕವಿತಾ ಚಂದ್ರಹಾಸ್.

‘ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಆಟೊ ಚಾಲಕರು 2 ವರ್ಷದಿಂದ ದುಡಿಮೆ ಇಲ್ಲದೆ ಕಂಗಾಲಾಗಿದ್ದು, ಮಕ್ಕಳನ್ನು ಕರೆದೊಯ್ಯಲು ಹೆಚ್ಚಿನ ದರ ಕೇಳುತ್ತಿದ್ದಾರೆ. ಅದರಲ್ಲಿ ತಪ್ಪಿದೆ ಅನಿಸುತ್ತಿಲ್ಲ. ಅವರ ಬದುಕೂ ನಡೆಯಬೇಕು. ನಾವೂ ಉಳಿಯಬೇಕು. ಹೀಗಾಗಿ ಸರ್ಕಾರ ಇಂಧನ ಹಾಗೂ ನಿತ್ಯ ಬಳಕೆ ವಸ್ತುಗಳ ಬೆಲೆ ಇಳಿಸಬೇಕು’ ಎನ್ನುತ್ತಾರೆ ಅವರು.

‘ನಮ್ಮ ಶಾಲೆಯ ಬಸ್ಸಿನಲ್ಲಿ ಸುಮಾರು 45 ಕಿ.ಮೀ. ದೂರದ ಹಳ್ಳಿಗಳಿಂದ ಮಕ್ಕಳನ್ನು ಕರೆತರುತ್ತೇವೆ. ನಗರ ಪ್ರದೇಶದ ಮಕ್ಕಳಿಗೆ ತಿಂಗಳಿಗೆ ₹ 1 ಸಾವಿರ, ಗ್ರಾಮೀಣ ಪ್ರದೇಶದ ಮಕ್ಕಳಿಂದ ₹ 1,200 ವಾಹನ ಶುಲ್ಕ ಪಡೆಯುತ್ತಿದ್ದೇವೆ. ಬಸ್‌ಗೆ ವಿಮೆಯಾಗಿ ವರ್ಷಕ್ಕೆ ₹ 60 ಸಾವಿರ ಕಟ್ಟಬೇಕು. ಚಾಲಕನಿಗೆ ತಿಂಗಳಿಗೆ ₹ 10 ಸಾವಿರ ವೇತನ ನೀಡಬೇಕು. ಒಂದು ಲೀಟರ್ ಡೀಸೆಲ್ ಹೆಚ್ಚೆಂದರೆ 4ರಿಂದ 5 ಕಿ.ಮೀ. ದೂರ ಕ್ರಮಿಸಬಹುದು. ಶಾಲೆ ನಡೆಸುವುದೇ ತುಂಬಾ ಕಷ್ಟ ಎನ್ನುವಂತ ಪರಿಸ್ಥಿತಿ ಎದುರಾಗಿದೆ’ ಎನ್ನುತ್ತಾರೆ ಮೋಕ್ಷಗುಂಡಂ ಶಾಲೆಯ ಕಾರ್ಯದರ್ಶಿ ಕೆ.ಆರ್. ವೀರಭದ್ರಯ್ಯ.

ಆಟೊ, ಟೆಂಪೊ ಬಾಡಿಗೆ ದುಬಾರಿ
ಚಳ್ಳಕೆರೆ:
ಬಾಗಿಲು ಮುಚ್ಚಿದ್ದ ಶಾಲಾ–ಕಾಲೇಜುಗಳು ಆರಂಭವಾಗಿವೆ. ಆದರೆ, ಸರ್ಕಾರಿ, ಖಾಸಗಿ ಬಸ್ ಹಾಗೂ ಶಾಲಾ ವಾಹನಗಳು ಪೂರ್ಣ ಪ್ರಮಾಣದಲ್ಲಿ ಸಂಚರಿಸುತ್ತಿಲ್ಲ. ಹೀಗಾಗಿ ನಗರ ಪ್ರದೇಶದ ಶಾಲಾ–ಕಾಲೇಜಿಗೆ ಹೋಗುವ ತಾಲ್ಲೂಕಿನ ದೊಡ್ಡೇರಿ, ನನ್ನಿವಾಳ, ದುರ್ಗಾವರ, ಮೀರಾಸಾಬಿ ಹಳ್ಳಿ, ಸೋಮಗುದ್ದು, ನಗರಂಗೆರೆ ಚಿಕ್ಕಮಧುರೆ, ದೇವರ ಮರಿಕುಂಟೆ, ರೆಡ್ಡಿಹಳ್ಳಿ, ವಿಡಪನ ಕುಂಟೆ ಇತರ ಗ್ರಾಮದ ಮಕ್ಕಳಿಗೆ ಆಟೊ, ಟೆಂಪೊ ಪ್ರಯಾಣ ಅನಿವಾರ್ಯ ಆಗಿದೆ. ಆದರೆ, ಬಾಡಿಗೆ ದರ ದುಬಾರಿಯಾಗಿದೆ.

ನಗರಕ್ಕೆ ನಿತ್ಯ ಸಂಚಾರ ನಡೆಸುವ ಆಟೊ-ಟೆಂಪೊ ಬಾಡಿಗೆಯೂ ಇತ್ತೀಚೆಗೆ ದುಪ್ಪಟ್ಟಾಗಿದೆ. ಇಂಧನದ ಬೆಲೆ ಏರಿಕೆ ಮತ್ತು ಇಳಿಕೆಯಲ್ಲಿ ಸರ್ಕಾರಗಳು ಕಣ್ಣಾಮುಚ್ಚಾಲೆ ಆಟ ಆಡುತ್ತಿವೆ. ಇಂಧನದ ಬೆಲೆ ಗಗನಕ್ಕೆ ಏರಿಸಿ, ಈಗ ₹ 12ರಿಂದ ₹ 17ರವರೆಗೂ ಇಳಿಕೆ ಮಾಡಿದೆ. ಆದರೂ ಜನರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಏರಿಕೆಯಾದ ಬಾಡಿಗೆ ದರ ಇಳಿಕೆಯಾಗುವ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.

‘ಒಂದೂವರೆ ವರ್ಷ ಮನೆಯಲ್ಲಿ ಮಕ್ಕಳನ್ನು ನಿಭಾಯಿಸುವುದು ತುಂಬಾ ಕಷ್ಟವಾಯಿತು. ಶಾಲೆ ಶುರುವಾದರೇ ಸಾಕು ಹೇಗಾದರೂ ಮಾಡಿ ಕಳುಹಿಸಬೇಕು ಎನಿಸಿತು. ಹೀಗಾಗಿ ಶಾಲೆ ಬಾಗಿಲು ತೆರೆಯುವುದನ್ನೇ ಕಾಯುತ್ತಿದ್ದೆವು. ಆದರೀಗ ತರಗತಿಗಳು ನಡೆಯುತ್ತಿವೆ. ಆಟೊ ಮತ್ತು ಟೆಂಪೊದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಚಾಲಕರು ದುಬಾರಿ ಬಾಡಿಗೆ ಪಡೆಯುತ್ತಿದ್ದಾರೆ. ಇದು ಜೀವನ ನಿರ್ವಹಣೆಯ ಮೇಲೂ ಪೆಟ್ಟು ನೀಡಿದೆ’ ಎನ್ನುತ್ತಾರೆ ಮೀರಾಸಾಬಿಹಳ್ಳಿಯ ರಂಗಸ್ವಾಮಿ.

‘ಸರ್ಕಾರ ತಿಂಗಳಲ್ಲಿ ನಾಲ್ಕೈದು ಬಾರಿ ಇಂಧನ ಬೆಲೆ ಹೆಚ್ಚಳ ಮಾಡಿ ಕೇವಲ ಎಂಟು-ಹತ್ತು ರೂಪಾಯಿ ಇಳಿಸಿದೆ. ಇದು ಯಾರಿಗೆ ಲಾಭ. ದಿನವಿಡಿ ಆಟೊ ಓಡಿಸಿದರೂ ಕೊನೆಗೆ ಉಳಿಯುವುದು ಕೇವಲ ₹ 200ರಿಂದ ₹ 250 ಮಾತ್ರ. ಕೂಲಿ ಕಾರ್ಮಿಕರಿಗಿಂತಲೂ ಕಡಿಮೆ ದುಡಿಮೆ ನಮ್ಮದು. ಹೀಗಿರುವಾಗ ಕುಟುಂಬ ನಿರ್ವಹಣೆ ಹೇಗೆ ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ ಚಾಲಕ ತಿಪ್ಪೇಸ್ವಾಮಿ.

*

ಆಟೊ ಚಾಲಕರಿಗೆ ನಿಯಮ ಪಾಲಿಸುವಂತೆ ಸಾಕಷ್ಟು ಬಾರಿ ಹೇಳಲಾಗಿದೆ. ಆದರೂ ಕೆಲವೆಡೆ ಉಲ್ಲಂಘನೆ ಆಗುತ್ತಿದೆ. ಕಾರಣ ಕೇಳಿದರೆ ಕೋವಿಡ್‌ನಿಂದಾಗಿ ದುಡಿಮೆ ಇಲ್ಲ ಎಂಬ ನೆಪ ಹೇಳುತ್ತಿದ್ದಾರೆ. ನಿಯಮಾನುಸಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ.
-ಜಿ. ರಾಧಿಕಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

*

ಸಾರ್ವಜನಿಕರ ಸಂಪರ್ಕ ಹೆಚ್ಚಿದ್ದರೆ ಮಾತ್ರ ಬಾಡಿಗೆಗಳು ದೊರೆಯುತ್ತವೆ. ಈಗಷ್ಟೇ ಉದ್ಯಮ ನಿಧಾನವಾಗಿ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಇನ್ನೂ ಎರಡು ವಾಹನಗಳನ್ನು ಖರೀದಿಸಬೇಕು ಎಂಬ ಉತ್ಸಾಹ ಮೂಡಿದೆ.
-ರಾಮು, ಟ್ಯಾಕ್ಸಿ ಮಾಲೀಕ

*

ಸದ್ಯ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಆದರೆ, ಇಂಧನ ಬೆಲೆ ಏರಿಕೆಯ ಕಾರಣದಿಂದ ಆಟೊ ಕಂತು ಕಟ್ಟಲು ಕೂಡ ಸಾಧ್ಯವಾಗುತ್ತಿಲ್ಲ. ಬೀದಿಗೆ ಬಿದ್ದಿರುವ ನಮ್ಮ ಬದುಕು ಸರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ.
-ವಿ. ತಿಪ್ಪೇಶ್, ಆಟೊ ಚಾಲಕ, ಹಿರಿಯೂರು

*

ಚಾಲಕರು, ಮಾಲೀಕರ ಬದುಕು ನಡೆಯಬೇಕು ಎಂದರೆ ಈಗ ಹೆಚ್ಚಿಸಿರುವ ದರಕ್ಕೆ ಆಟೊ ಓಡಿಸಬೇಕು. ಇಲ್ಲದಿದ್ದರೆ, ತಿಂಗಳ ಕಂತು ಕಟ್ಟಲು ಆಗುವುದಿಲ್ಲ. ಸಾಲ ನೀಡಿದವರು ಆಟೊ ವಶಕ್ಕೆ ಪಡಿಸಿಕೊಳ್ಳುವ ಭಯವೂ ಕಾಡುತ್ತಿದೆ.
-ಮೂರ್ತಿ, ಅಧ್ಯಕ್ಷ ಆಲೂರು–ಹಿರಿಯೂರು ಆಟೊ ಚಾಲಕರ ಸಂಘ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.