ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಜಿಲ್ಲೆಯ ನ್ಯಾಯಾಲಯಗಳಿಗೆ ಹೆಚ್ಚಿದ ಭದ್ರತೆ

ಮೆಟಲ್‌ ಡಿಟೆಕ್ಟರ್‌ ಅಳವಡಿಕೆ, ಪ್ರವೇಶ, ನಿರ್ಗಮನಕ್ಕೆ ಒಂದೇ ಬಾಗಿಲು
Last Updated 25 ಆಗಸ್ಟ್ 2021, 9:39 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ನ್ಯಾಯಾಲಯಗಳ ಭದ್ರತೆಯನ್ನು ಹೆಚ್ಚಿಸಲಾಗುತ್ತಿದ್ದು, ಪ್ರವೇಶ ದ್ವಾರದಲ್ಲಿ ಮೆಟಲ್‌ ಡಿಟೆಕ್ಟರ್‌ ಅಳವಡಿಸಲಾಗುತ್ತಿದೆ. ನ್ಯಾಯಾಲಯದ ಮೇಲೆ ನಿಗಾ ವಹಿಸಿದ ಪೊಲೀಸರು, ಪ್ರವೇಶ ಹಾಗೂ ನಿರ್ಗಮನಕ್ಕೆ ಒಂದೇ ಬಾಗಿಲಲ್ಲಿ ಅವಕಾಶ ಕಲ್ಪಿಸಿದ್ದಾರೆ.

ರಾಜ್ಯ ಗುಪ್ತವಾರ್ತೆಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಿಂದ ಬಂದಿರುವ ಸೂಚನೆಯ ಮೇರೆಗೆ ಭದ್ರತಾ ಕ್ರಮಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಜಿಲ್ಲಾ ನ್ಯಾಯಾಲಯದಲ್ಲಿ ಮೆಟೆಲ್‌ ಡಿಟೆಕ್ಟರ್‌ ಅಳವಡಿಸಲಾಗಿದೆ. ಶ್ವಾನದಳ ಮತ್ತು ಬಾಂಬ್‌ ಪತ್ತೆ ದಳ ವಾರಕ್ಕೊಮ್ಮೆ ನ್ಯಾಯಾಲಯ ಪರಿಶೀಲಿಸಿ ವರದಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಜಾರ್ಖಂಡನ ಧನ್‌ಬಾದ್‌ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರೊಬ್ಬರಿಗೆ ಈಚೆಗೆ ಆಟೊ ಗುದ್ದಿಸಿ ಕೊಲೆ ಮಾಡಲಾಗಿದೆ. ಇದರ ಬೆನ್ನಲ್ಲೇ ಜಿಲ್ಲೆಯ ನ್ಯಾಯಾಲಯಗಳ ಭದ್ರತಾ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ನ್ಯಾಯಾಧೀಶರು, ನ್ಯಾಯಾಲಯದ ಅಧಿಕಾರಿ, ಸಿಬ್ಬಂದಿ ಹಾಗೂ ವಕೀಲರ ರಕ್ಷಣೆಗೆ ಒತ್ತು ನೀಡುವಂತೆ ಪೊಲೀಸ್‌ ಇಲಾಖೆಗೆ ಸರ್ಕಾರ ಸೂಚನೆ ನೀಡಿದೆ.

ಜಿಲ್ಲಾ ನ್ಯಾಯಾಲಯದ ಪ್ರವೇಶ ದ್ವಾರದಲ್ಲಿ ಮೆಟೆಲ್‌ ಡಿಟೆಕ್ಟರ್‌ ಕಾಣಿಸಿಕೊಂಡಿದೆ. ನ್ಯಾಯಾಲಯ ಪ್ರವೇಶಿಸುವ ಪ್ರತಿಯೊಬ್ಬರೂ ಇಲ್ಲಿ ಸಾಗಬೇಕು. ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ ತಕ್ಷಣ ಮಾಹಿತಿ ನೀಡುತ್ತದೆ. ಸ್ಥಳದಲ್ಲೇ ಇರುವ ಪೊಲೀಸರು ವ್ಯಕ್ತಿಯನ್ನು ಪರಿಶೀಲನೆ ಮಾಡಲಿದ್ದಾರೆ. ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ, ವಕೀಲರು ಹಾಗೂ ಕಕ್ಷಿದಾರರಿಗೆ ತೊಂದರೆಯಾಗದಂತೆ ಭದ್ರತೆ ಕಲ್ಪಿಸಲಾಗಿದೆ.

ನ್ಯಾಯಾಲಯ ಪರಿಶೀಲನೆ ನಡೆಸಿದ ಪೊಲೀಸರು ಕೈಗೊಳ್ಳಬೇಕಿರುವ ಭದ್ರತಾ ಕ್ರಮಗಳ ಬಗ್ಗೆ ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ನ್ಯಾಯಾಧೀಶರು ಹಾಗೂ ವಕೀಲರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ನ್ಯಾಯಾಲಯದ ಪಶ್ಚಿಮ ದಿಕ್ಕಿನ ದ್ವಾರವನ್ನು ಮುಚ್ಚಲಾಗಿದೆ. ಒಂದೇ ಬಾಗಿಲು ಮೂಲಕ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲಾ ನ್ಯಾಯಾಲಯದ ಕಟ್ಟಡದಲ್ಲಿ ಒಂಬತ್ತು ನ್ಯಾಯಾಲಯಗಳಿವೆ. ಕೊರೊನಾ ಸೋಂಕು, ಲಾಕ್‌ಡೌನ್‌ ಕಾರಣಕ್ಕೆ ಕಲಾಪಕ್ಕೆ ತೊಂದರೆ ಉಂಟಾಗಿತ್ತು. ಆನ್‌ಲೈನ್‌, ವಿಡಿಯೊ ಸಂವಾದದ ಮೂಲಕ ನಡೆಯುತ್ತಿದ್ದ ಕಲಾಪಗಳಿಗೆ ಈಗ ಮುಕ್ತ ಅವಕಾಶ ಸಿಕ್ಕಿದೆ. ನ್ಯಾಯಾಲಯಕ್ಕೆ ಭೇಟಿ ನೀಡುವ ಕಕ್ಷಿದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ಭದ್ರತಾ ಕ್ರಮಗಳಿಗೆ ಎಲ್ಲರೂ ಹೊಂದಿಕೊಳ್ಳಬೇಕಾಗಿದೆ.

ನ್ಯಾಯಾಲಯದ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಹಗಲು ಮತ್ತು ರಾತ್ರಿ ನಿತ್ಯ ಮೂರು ಪಾಳಿಯಲ್ಲಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ನ್ಯಾಯಾಲಯದ ಹೊರ ಆವರಣದ ಪ್ರವೇಶದ್ವಾರದಲ್ಲಿ ಪೊಲೀಸ್‌ ಚೌಕಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಚೌಕಿ ಸ್ಥಾಪನೆಗೆ ಒಪ್ಪಿಗೆ
ನೀಡಿದ್ದಾರೆ.

ಶ್ವಾನದಳ, ಬಾಂಬ್‌ ಪತ್ತೆ ದಳ ವಾರಕ್ಕೊಮ್ಮೆ ನ್ಯಾಯಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ. ಕಟ್ಟಡದ ಹೊರ ಆವರಣ, ಪಾರ್ಕಿಂಗ್‌ ಸ್ಥಳ, ಕಲಾಪ ನಡೆಯುವ ಸಭಾಂಗಣ, ಕಚೇರಿ, ಶೌಚಾಲಯ ಸೇರಿ ಎಲ್ಲೆಡೆ ಪರಿಶೀಲಿಸಲಾಗುತ್ತಿದೆ. ಇಂತಹ ಭದ್ರತಾ ಕ್ರಮಗಳು ಕಕ್ಷಿದಾರರು, ವಕೀಲರಲ್ಲಿಯೂ ಭರವಸೆ
ಮೂಡಿಸಿವೆ.

ಸುಪ್ರೀಂಕೋರ್ಟ್‌ ನಿರ್ದೇಶನ: ಎಸ್‌ಪಿ

‘ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ನ್ಯಾಯಾಲಯದ ಭದ್ರತೆ ಪರಿಷ್ಕರಿಸಲಾಗುತ್ತಿದೆ. ಪೊಲೀಸ್‌ ಮಹಾನಿರ್ದೇಶಕರ ಕಚೇರಿಯ ಸೂಚನೆಯಂತೆ ಭದ್ರತೆ ಒದಗಿಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.

‘ನ್ಯಾಯಾಧೀಶರಿಗೆ ರಕ್ಷಣೆ ಒದಗಿಸುವ ಉದ್ದೇಶದಿಂದ ನ್ಯಾಯಾಲಯ ಹಾಗೂ ವಸತಿಗೃಹದಲ್ಲಿ ಭದ್ರತೆ ಹೆಚ್ಚಿಸಲಾಗುತ್ತಿದೆ. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಎಲ್ಲ ನ್ಯಾಯಾಲಯಗಳಲ್ಲಿ ನೂತನ ವ್ಯವಸ್ಥೆ ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

* ನ್ಯಾಯಾಲಯದ ಭದ್ರತೆ ಹೆಚ್ಚಿಸಿದ್ದು ಸ್ವಾಗತಾರ್ಹ, ವಕೀಲರ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚಿಸಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.

-ಸಿ.ಶಿವು ಯಾದವ, ಅಧ್ಯಕ್ಷ, ವಕೀಲರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT