ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಅಸ್ತಿತ್ವ ನಿರಾಕರಿಸುವುದು ತಪ್ಪು: ಸ್ವಾಮೀಜಿ

ಗುರುಭಿಕ್ಷಾ ವಂದನಾ, ಶತಚಂಡಿಕಾ ಯಾಗದ ಧರ್ಮಸಭೆ: ವಿವಿಧ ಮಠಾಧೀಶರು ಭಾಗಿ
Last Updated 23 ಮೇ 2022, 2:57 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ದೇವರ ಅಸ್ತಿತ್ವವನ್ನು ನಿರಾಕರಿಸುವ, ಪ್ರಶ್ನಿಸುವ ಅಧಿಕಾರ ಯಾವ ಬುದ್ಧಿಜೀವಿಗೂ ಇಲ್ಲ. ದೇವರ ಮೇಲೆ ನಂಬಿಕೆ ಇಲ್ಲದಿದ್ದರೆ ಅವರಷ್ಟಕ್ಕೆ ಅವರಿರಬೇಕು. ಮತ್ತೊಬ್ಬರನಂಬಿಕೆಗೆ ಗಾಸಿಗೊಳಿಸುವ ಪ್ರಯತ್ನ ಮಾಡಬಾರದು’ ಎಂದು ಹರಿಹರಪುರದಶಾರದಾ ಲಕ್ಷ್ಮೀನರಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗೋನೂರು ಸಮೀಪದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಗುರುಭಿಕ್ಷಾ ವಂದನಾ ಹಾಗೂ ಶತಚಂಡಿಕಾ ಯಾಗದ ಭಾನುವಾರದ ಧರ್ಮಸಭೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ದೇವರು ಎಂಬುದು ನಂಬಿಕೆ. ಪ್ರತಿಯೊಬ್ಬರೂ ದೇವರನ್ನು ಕಾಣುತ್ತಾರೆ. ದೇವರ ದರ್ಶನವಾಗದ ಕೆಲವರು
ಅಸ್ತಿತ್ವ ಪ್ರಶ್ನಿಸುವ ಪ್ರಯತ್ನಕ್ಕೆ ಕೈಹಾಕುತ್ತಾರೆ. ಇದರ ಬದಲು ಅವರು ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡರೆ ಸಾಕು’ ಎಂದು ಸಲಹೆ ನೀಡಿದರು.

‘ವೇದ, ಉಪನಿಷತ್ತುಗಳ ಸಾರವನ್ನು ಅಳವಡಿಸಿಕೊಳ್ಳುತ್ತಿಲ್ಲ. ಅವುಗಳ ಪಠಣಕ್ಕೆ ಮಾತ್ರ ಸೀಮಿತವಾಗಿದ್ದೇವೆ. ಇದರಿಂದ ಸಣ್ಣ ವೈಮನಸುಗಳು ಸೃಷ್ಟಿಯಾಗುತ್ತಿವೆ. ದೋಷಪೂರಿತ ಚಿಂತನೆಗಳಿಂದ ಏಕತೆಯ ಸೂತ್ರ ಮರೆಯುತ್ತಿದ್ದೇವೆ. ಏಕತೆಯ ಸೂತ್ರ ಕಾಪಾಡಿದರೆ ಭಾರತೀಯ ಸಂಸ್ಕೃತಿ ಶಕ್ತಿಶಾಲಿಯಾಗಿ ಉಳಿಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ‘ಗುರುಕುಲದಲ್ಲಿ ಶಿಕ್ಷಣ ಪಡೆದವರು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಆಧುನಿಕ ಶಿಕ್ಷಣ ಪಡೆದವರು ದೇಶಕ್ಕೆ ಮಾರಕವಾಗುತ್ತಿದ್ದಾರೆ. ವೇದಜ್ಞಾನ ಬಲ್ಲವ ವೈದಿಕ, ಪುರದ ಹಿತ ಕಾಪಾಡುವವ ಪುರೋಹಿತ. ಆದರೆ, ಇದನ್ನು ತಪ್ಪಾಗಿ ಅರ್ಥೈಸಲಾಗಿದೆ. ಅಗೋಚರ ಶಕ್ತಿ ನಮ್ಮೆಲ್ಲರನ್ನು ರಕ್ಷಿಸುತ್ತಿದೆ’ ಎಂದರು.

ವಿಧಾನಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌, ‘ಶಾಲೆಗಳಲ್ಲಿ ವಿದ್ಯೆ ಸಿಗುತ್ತಿದೆ. ಆದರೆ, ಸಂಸ್ಕಾರ ದೊರೆಯುತ್ತಿಲ್ಲ. ವಿದೇಶಿ ಚಿಂತನೆ ಪ್ರೇರಿತ ಶಿಕ್ಷಣವನ್ನು ಮಕ್ಕಳು ಪಡೆಯುತ್ತಿದ್ದಾರೆ. ಇಂತಹ ಮಕ್ಕಳಿಗೆ ಸಂಸ್ಕಾರ ನೀಡುವ ಅಗತ್ಯವಿದೆ. ದೇಗುಲಗಳು ಸಮಾಜ ಕಟ್ಟುವ ಹಾಗೂ ಸಂಸ್ಕಾರ ನೀಡುವ ಕೇಂದ್ರಗಳಾಗಬೇಕು’ ಎಂದು ಹೇಳಿದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್‌. ಮಂಜುನಾಥ್‌, ನಿವೃತ್ತ ಎಂಜಿನಿಯರ್‌ ಎಂ.ರವೀಂದ್ರಪ್ಪ, ರಾಜರಾಜೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್‌ ಅಧ್ಯಕ್ಷ ನಾಗರಾಜ್‌ ಭಟ್‌, ಶಿರಸಿ ಸ್ವರ್ಣವಲ್ಲಿ ಮಠದ ಆಸ್ಥಾನ ವಿದ್ವಾಂಸ ಬಾಲಚಂದ್ರಶಾಸ್ತ್ರಿ ಇದ್ದರು.

***

ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಿತ್ರದುರ್ಗ ಜಿಲ್ಲೆಗೆ ರಾಜರಾಜೇಶ್ವರಿ ದೇಗುಲ ಹೊಸ ಮೆರುಗು ತಂದಿದೆ. ಹತ್ತು ವರ್ಷದ ಶ್ರಮಕ್ಕೆ ಸಾರ್ಥಕತೆ ಸಿಕ್ಕಿದೆ. ಸಮಯ ಸಿಕ್ಕಾಗಲೆಲ್ಲ ದೇಗುಲಕ್ಕೆ ಬರುತ್ತೇನೆ.

–ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ

ದೇವರ ಅನುಗ್ರಹ ಹಾಗೂ ಗುರುಗಳ ಆಶೀರ್ವಾದದಿಂದ ಭವ್ಯ ದೇಗುಲು ನಿರ್ಮಾಣ ಸಾಧ್ಯವಾಗಿದೆ. ಲೋಕಕಲ್ಯಾಣದ ಇಂತಹ ಪ್ರಯತ್ನಗಳು ಶ್ಲಾಘನೀಯ.

–ಪಿ.ಎಸ್‌. ಮಂಜುನಾಥ್‌, ಅಧ್ಯಕ್ಷರು, ಬ್ರಾಹ್ಮಣ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT