ಭಾನುವಾರ, ಸೆಪ್ಟೆಂಬರ್ 26, 2021
28 °C
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರಳಿ

ರಾಜ್ಯದಲ್ಲಿ ನಾಲ್ಕು ದಿನ ಯಾತ್ರೆ: ಆ.18ಕ್ಕೆ ಸಚಿವರಿಂದ ಜನಾಶೀರ್ವಾದ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ. ಮುರಳಿ

ಚಿತ್ರದುರ್ಗ: ರಾಜ್ಯದಿಂದ ಆಯ್ಕೆಯಾದ ಕೇಂದ್ರದ ನಾಲ್ವರು ಸಚಿವರ ಜನಾಶೀರ್ವಾದ ಯಾತ್ರೆಯೂ ಆ. 18ರಂದು ಜಿಲ್ಲೆ ಪ್ರವೇಶಿಸಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರಳಿ ತಿಳಿಸಿದರು.

‘ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ನೇತೃತ್ವದ ಸಚಿವರ ತಂಡ 17ರಂದು ಜವಗೊಂಡನಹಳ್ಳಿಯಿಂದ ಹಿರಿಯೂರು ನಗರಕ್ಕೆ ಬರಲಿದೆ. ನಿವೃತ್ತ ಸೈನಿಕ ಟಿ. ಪ್ರಭಾಕರ್ ಮನೆಯಲ್ಲಿ ಭೋಜನ ಕೂಟ ನಡೆಯಲಿದೆ. ನಂತರ ಹಿರಿಯೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘18ರಂದು ಬೆಳಿಗ್ಗೆ 8ಕ್ಕೆ ತೇರುಮಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭವಾಗಲಿದೆ. ಅಲ್ಲಿಯ ಟಿ.ಬಿ. ವೃತ್ತದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಐಮಂಗಲಕ್ಕೆ ಬರಲಿರುವ ತಂಡ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಸಂಬಂಧ ಪರಿಶೀಲನೆ ನಡೆಸಲಿದೆ. ಬೆಳಿಗ್ಗೆ 10ಕ್ಕೆ ಚಳ್ಳಕೆರೆ ಗೇಟ್ ಮೂಲಕ ಚಿತ್ರದುರ್ಗ ಪ್ರವೇಶಿಸಲಿದೆ’ ಎಂದರು.

ಜಿಲ್ಲಾ ಆಸ್ಪತ್ರೆಯ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಪ್ರಗತಿ ಕುರಿತು ಮಾಹಿತಿ ಪಡೆಯಲಿದ್ದಾರೆ. ಮದಕರಿನಾಯಕ, ಡಾ.ಬಿ.ಆರ್. ಅಂಬೇಡ್ಕರ್, ಒನಕೆ ಓಬವ್ವ ಪ್ರತಿಮೆಗೆ ಮಾಲಾರ್ಪಣೆ ಮಾಡಿ 11ಕ್ಕೆ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ 45 ನಿಮಿಷದ ಬಹಿರಂಗ ಸಮಾವೇಶ ನಡೆಸಲಿದ್ದಾರೆ. ಜಿಲ್ಲೆಯ ಶಾಸಕರು, ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

‘ಸಮಾವೇಶದ ನಂತರ ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಸಂಗೊಳ್ಳಿರಾಯಣ್ಣ, ಕನಕದಾಸರ ಪತ್ರಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ಯಾದವ ಗುರುಪೀಠ, ಮುರುಘಾಮಠ, ಭೋವಿ ಗುರುಪೀಠದಲ್ಲಿ ಸ್ವಾಮೀಜಿಗಳ ಆಶೀರ್ವಾದ ಪಡೆಯಲಿದ್ದಾರೆ. ಮಾದಾರ ಚನ್ನಯ್ಯ ಮಠದಲ್ಲಿ ಭೋಜನ ಸ್ವೀಕರಿಸಿ, ಸಿರಿಗೆರೆ ಮಠಕ್ಕೆ ಯಾತ್ರೆ ತೆರಳಲಿದೆ’ ಎಂದು ತಿಳಿಸಿದರು.

ಶ್ರೀಗಳ ಭೇಟಿಯ ನಂತರ ಅಂದು ಸಂಜೆ ಭರಮಸಾಗರ ತಲುಪಲಿದೆ. ಬಿಜೆಪಿ ಮಂಡಲದ ಸಮಾರಂಭ ಪೂರ್ಣಗೊಳಿಸಿ, ದಾವಣಗೆರೆಗೆ ತೆರಳಲಿದೆ. 19ಕ್ಕೆ ಹಾವೇರಿ, ಗದಗ ಪ್ರವಾಸ ನಡೆಸಲಿದ್ದಾರೆ ಎಂದರು.

ಮುಖಂಡರಾದ ಜಯಪಾಲಯ್ಯ, ಸಂಪತ್, ಕಲ್ಲೇಶ್, ಶಶಿಧರ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ ಇದ್ದರು.

ಯುವ ಸಂಕಲ್ಪ ರ್‍ಯಾಲಿ

75ನೇ ಸ್ವಾತಂತ್ರೋತ್ಸವದ ಅಂಗವಾಗಿ ಬಿಜೆಪಿ ಯುವ ಮೋರ್ಚಾದ ಜಿಲ್ಲೆಯ 9 ಮಂಡಲಗಳಲ್ಲಿ ಆ. 15ರಿಂದ 365 ದಿನ 75 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ. ಹನುಮಂತೇಗೌಡ ತಿಳಿಸಿದರು.

15ರಂದು ಬೆಳಿಗ್ಗೆ 6ಕ್ಕೆ ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ 75 ಸೈಕಲ್‍ಗಳಿಂದ 75 ಕಿ.ಮೀ ಸೈಕಲ್ ರ್‍ಯಾಲಿಗೆ ಚಾಲನೆ ನೀಡಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು