ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ಸಿಕ್ಕಿಲ್ಲ ಅಧ್ಯಕ್ಷ ಸ್ಥಾನ: ಕಸಾಪ‌ ಅಭ್ಯರ್ಥಿ ಸರಸ್ವತಿ ಚಿಮ್ಮಲಗಿ ಬೇಸರ

ಕನ್ನಡ ಸಾಹಿತ್ಯ ಪರಿಷತ್‌ ಅಭ್ಯರ್ಥಿ ಸರಸ್ವತಿ ಚಿಮ್ಮಲಗಿ ಬೇಸರ
Last Updated 15 ಏಪ್ರಿಲ್ 2021, 13:13 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ 105 ವರ್ಷ ತುಂಬಿದೆ. ಆದರೆ, ಈವರೆಗೂ ಒಬ್ಬ ಮಹಿಳೆಯೂ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಅಲಂಕರಿಸದೇ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ. ಹೀಗಾಗಿ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಸರಸ್ವತಿ ಚಿಮ್ಮಲಗಿ ತಿಳಿಸಿದರು.

‘ರಾಜ್ಯದಲ್ಲಿ ಮೂರು ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಅದರಲ್ಲಿ 80 ಸಾವಿರ ಸ್ತ್ರೀ ಮತದಾರರಿದ್ದಾರೆ. ಮಹಿಳಾ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮಹಿಳೆಯರನ್ನು ಈಗಲೂ ದ್ವಿತೀಯ ದರ್ಜೆ ಪ್ರಜೆಯಾಗಿ ನೋಡುತ್ತಿರುವುದು ಕಂಡು ಬರುತ್ತಿದೆ. ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ತನ್ನ ಶಕ್ತಿ, ಸಾಮರ್ಥ್ಯವನ್ನು ಮಹಿಳೆಯರು ತೋರಿಸಿದ್ದಾರೆ. ಸ್ತ್ರೀ ಮನಸ್ಸು ಮಾಡಿದರೆ ಆಗದ ಕೆಲಸವೇ ಇಲ್ಲ’ ಎಂದರು.

‘ನಾನು ಅಧ್ಯಕ್ಷೆಯಾದರೆ, ಸಾಹಿತ್ಯ ಕ್ಷೇತ್ರದ ಎಲ್ಲಾ ಹಂತಗಳಲ್ಲೂ ಮಹಿಳೆಯರಿಗೆ ಸಮಾನ ಆದ್ಯತೆ ಕಲ್ಪಿಸುತ್ತೇನೆ. ತಾಲ್ಲೂಕು ಅಧ್ಯಕ್ಷರ ಆಯ್ಕೆಯನ್ನು ಮತದಾನದ ಮೂಲಕ ನಡೆಯುವಂತೆ ತಿದ್ದುಪಡಿ ತರುತ್ತೇನೆ. ಐದು ವರ್ಷದ ಅವಧಿಯಲ್ಲಿ ಎರಡು ಸಾಮಾನ್ಯ, ಎರಡು ಮಹಿಳಾ ಹಾಗೂ ಒಂದು ಅಖಿಲ ಭಾರತ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು’ ಎಂದು ತಿಳಿಸಿದರು.

‘ಗಡಿ ಸಮಸ್ಯೆಗಳ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ. ರಾಜ್ಯಮಟ್ಟದಿಂದ ಹಳ್ಳಿಯವರೆಗೂ ಸಾಹಿತ್ಯ ಸರಸ್ವತಿ ತೇರನ್ನು ಕೊಂಡೊಯ್ಯಲಾಗುವುದು. ಗಡಿನಾಡು ಸಮ್ಮೇಳನ ಆಯೋಜಿಸಿ ಕನ್ನಡ ಜಾಗೃತಿ ಮೂಡಿಸಲಾಗುವುದು. ನಾಲ್ಕು ವಿಭಾಗಗಳಲ್ಲಿ ಮಹಿಳೆ ಹಾಗೂ ದಲಿತ ವಿಶೇಷ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

ಮಲ್ಲಿಕಾರ್ಜುನ ಕಾಡಕೋಳ, ‘ಅಭ್ಯರ್ಥಿ ಸರಸ್ವತಿ ಅವರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕ ಬೆಂಬಲ ದೊರೆಯುತ್ತಿದೆ. ರಾಜ್ಯದಾದ್ಯಂತ ಸಂಚರಿಸಿ ಮತದಾರರನ್ನು ತಲುಪಲು ಮುಂದಾಗುತ್ತಿದ್ದೇವೆ. ಉತ್ತಮ ಅಭ್ಯರ್ಥಿಯಾಗಿದ್ದು, ಮತದಾರರು ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.

ಪರಿಸರ ಕಾರ್ಯಕರ್ತ ಡಾ.ಎಚ್.ಕೆ.ಎಸ್.ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT