ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗಕ್ಕೆ ಕೊನೆಗೂ ದಕ್ಕಿತು ಕೋವಿಡ್ ಚಿಕಿತ್ಸಾ ಕೇಂದ್ರ

ಜಿಲ್ಲೆಯಲ್ಲಿ ಪ್ರಥಮವಾಗಿ ಮೊಳಕಾಲ್ಮುರಿನಲ್ಲಿ ಆರಂಭ, 43 ಹಾಸಿಗೆಗಳ ವ್ಯವಸ್ಥೆ
Last Updated 4 ಅಕ್ಟೋಬರ್ 2020, 3:41 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಹಲವು ಮನವಿಗಳ ಬಳಿಕ ಕೊನೆಗೂ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ‘ಮೀಸಲು ಕೋವಿಡ್ ಚಿಕಿತ್ಸಾ ಕೇಂದ್ರ’ ಆರಂಭವಾಗಿದ್ದು, ಕೋವಿಡ್ ಸೋಂಕಿಗೆ ಒಳಗಾದವರು ತುಸು ನಿಟ್ಟುಸಿರು ಬಿಡುವಂತಾಗಿದೆ.

ತಾಲ್ಲೂಕಿನಲ್ಲಿ ರಾಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾತ್ರ ಕೋವಿಡ್ ಕೇರ್ ಕೇಂದ್ರ ಆರಂಭಿಸಲಾಗಿತ್ತು. ಇಲ್ಲಿ ಹಾಸಿಗೆಗಳ ಕೊರತೆ ಇತ್ತು. ಜತೆಗೆ ರೋಗದ ಪ್ರಥಮ ಹಂತಕ್ಕೆ ಹಾಗೂ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿತ್ತು. ಮಕ್ಕಳು ಹಾಗೂ ವೃದ್ಧರಿಗೆ ಚಿಕಿತ್ಸೆ ಲಭ್ಯವಿರಲಿಲ್ಲ. ತಾಲ್ಲೂಕಿನಲ್ಲಿ ಕೆಲ ದಿನಗಳಿಂದ ರೋಗಿಗಳ ಸಂಖ್ಯೆ ವ್ಯಾಪಕವಾಗಿ ಹೆಚ್ಚಿದ ಕಾರಣ ಚಿಕಿತ್ಸೆಗೆ ತೀವ್ರ ತೊಂದರೆಯಾಗಿತ್ತು.

ತಾಲ್ಲೂಕು ಕೇಂದ್ರದಲ್ಲಿ ಚಿಕಿತ್ಸೆ ಲಭ್ಯವಿಲ್ಲದೇ ತೀವ್ರ ತೊಂದರೆಯಾಗಿತ್ತು. ಮುಖ್ಯಶಿಕ್ಷಕರೊಬ್ಬರು ಚಿಕಿತ್ಸೆ ಸಿಗದೆ ಆಸ್ಪತ್ರೆ ಆವರಣದಲ್ಲಿ ಆ.13ರಂದು ಮೃತಪಟ್ಟಿದ್ದರು. ಇದರಿಂದಾಗಿ ಜನರು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ರೋಗಿಗಳನ್ನು ಬೇರೆ ಕಡೆ ಕಳಿಸಲು ಆಂಬುಲೆನ್ಸ್ ಸೌಲಭ್ಯ ಸಹ ಇರಲಿಲ್ಲ. ಸಮಸ್ಯೆ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಆ.14ರಂದು ವಿಶೇಷ ವರದಿ ಪ್ರಕಟವಾಗಿತ್ತು.

ತಡವಾಗಿ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ‘ಮೀಸಲು ಕೋವಿಡ್ ಕೇಂದ್ರ ಸ್ಥಾಪನೆ’ಗೆ ಕ್ರಮ ಕೈಗೊಂಡಿದೆ. ಇಲ್ಲಿ ಸದ್ಯಕ್ಕೆ 37 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ 27 ಹಾಸಿಗೆಗಳನ್ನು ಸೋಂಕಿತರಿಗೆ ಹಾಗೂ 10 ಹಾಸಿಗೆಗಳನ್ನು ಸೋಂಕು ಶಂಕಿತರಿಗೆ ಹಾಗೂ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದವರಿಗೆ ಮೀಸಲಿಡಲಾಗಿದೆ.

‘ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ
ಯಲ್ಲಿ ಕೋವಿಡ್ ಆಸ್ಪತ್ರೆ ಆರಂಭಿಸಿರು
ವುದು ಜಿಲ್ಲೆಯಲ್ಲಿ ಇದೇ ಪ್ರಥಮ. ಸೆ.1ರಿಂದ ಸೇವೆ ಆರಂಭವಾಗಿದೆ. ಇಲ್ಲಿವರೆಗೆ 72 ಮಂದಿ ದಾಖಲಾಗಿದ್ದು, 7 ಜನ ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಅಭಿನವ್ ಮಾಹಿತಿ ನೀಡಿದರು.

‘ಕೇಂದ್ರಕ್ಕೆ ಬಂದು ಹೋಗಲು ಪ್ರತ್ಯೇಕ ಮಾರ್ಗಗಳನ್ನು ಮಾಡಲಾಗಿದೆ. ಕೇಂದ್ರ ಸರ್ಕಾರದ ಮೆನು ಪ್ರಕಾರ ಗುಣಮಟ್ಟ ಊಟ, ತಿಂಡಿ ನೀಡಲಾಗುತ್ತಿದೆ. ರೋಗಿಗಳು ಗುಣಮುಖರಾಗಿ ಮನೆಗೆ ಹೋಗುವಾಗ ವ್ಯವಸ್ಥೆಯನ್ನು ಶ್ಲಾಘಿಸಿ ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಲಭ್ಯವಿರುವ 20 ಸ್ಟಾಫ್‌ ನರ್ಸ್ ಹಾಗೂ 30 ‘ಡಿ’ ಗ್ರೂಪ್ ಸಿಬ್ಬಂದಿಯನ್ನು ಪಾಳಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಎಲ್ಲ 43 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ಸೌಲಭ್ಯ ಕಲ್ಪಿಸಲಾಗಿದೆ. ಕೋವಿಡ್‌ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಗುವ ಎಲ್ಲ ವೈದ್ಯಕೀಯ ಸೌಲಭ್ಯಗಳೂ ಈ ಕೇಂದ್ರದಲ್ಲಿ ಲಭ್ಯ ಇವೆ. ಎಲ್ಲ ವಯಸ್ಸಿನ ಸೋಂಕಿತರನ್ನೂ ದಾಖಲಿಸಿಕೊಳ್ಳಲಾಗುತ್ತಿದೆ. ವಯೋಸಹಜ ರೋಗಗಳಿಂದ ಬಳಲುತ್ತಿರುವವರನ್ನು ಮಾತ್ರ ಚಿತ್ರದುರ್ಗ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇಂದ್ರ ಆರಂಭಕ್ಕೂ ಮುನ್ನ ಕೊರೊನಾ ಸೋಂಕಿತರನ್ನು ಚಿತ್ರದುರ್ಗ, ಬಳ್ಳಾರಿ, ರಾಂಪುರ, ನಾಯಕನಹಟ್ಟಿ ಕೇಂದ್ರಗಳಿಗೆ ಕಳುಹಿಸಲಾಗುತ್ತಿತ್ತು. ಅದು ಈಗ ತಪ್ಪಿದೆ. ಜತೆಗೆ ಕೋವಿಡ್‌–19 ಸೋಂಕಿತರಿಗಾಗಿ ಒಂದು ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಪರೀಕ್ಷೆ ಮಾಡುವ ಕಿಟ್‌ಗಳಿಗೆ ಕೊರತೆಯಿಲ್ಲ. ನಿತ್ಯ 30ಕ್ಕೂ ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಸಿಬ್ಬಂದಿ ಮುಷ್ಕರದಿಂದ ತುಸು ತೊಂದರೆಯಾಗಿದೆ’ ಎಂದು ಅಭಿನವ್ ಸ್ಪಷ್ಟಪಡಿಸಿದರು.‌

ಆರೋಗ್ಯ ಸಚಿವನಾದರೂ ನಾನು ಪ್ರಥಮವಾಗಿ ಮೊಳಕಾಲ್ಮುರಿನ ಶಾಸಕ. ಕೊರೊನಾ ಸೇರಿ ಇಲಾಖೆ ಎಲ್ಲ ಸೌಲಭ್ಯವನ್ನು ಕ್ಷೇತ್ರಕ್ಕೆ ಮುಟ್ಟಿಸಲು ಸದಾ ಕ್ರಮ ಕೈಗೊಳ್ಳುತ್ತೇನೆ. ಬಿ.ಶ್ರೀರಾಮುಲು,ಆರೋಗ್ಯ ಸಚಿವ

ಚಿಕಿತ್ಸಾ ಕೇಂದ್ರವಿಲ್ಲದೆ ತೊಂದರೆಯಾಗಿದ್ದು ನಿಜ. ಕೋವಿಡ್ ಕೇಂದ್ರ ಆರಂಭದ ನಂತರ ಜನರು ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ.ಡಾ.ಪಿ.ಎಂ.ಮಂಜುನಾಥ್, ಆರೋಗ್ಯ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT