ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿಮಾತು: ಸಮಗ್ರ ಕೃಷಿಯ ಸುಸ್ಥಿರ ಬದುಕು

ಎನ್‌.ಗೌರೀಪುರದಲ್ಲಿ ಸೀಬೆ ಘಮಲ ಶ್ವೇತಾ ಕುಮಾರಿಗೆ ಪತಿ ಸುರೇಶ್‌ ಸಾಥ್‌
Published 20 ಮಾರ್ಚ್ 2024, 9:17 IST
Last Updated 20 ಮಾರ್ಚ್ 2024, 9:17 IST
ಅಕ್ಷರ ಗಾತ್ರ

ಚಿತ್ರದುರ್ಗ: ಅರ್ಧ ಎಕರೆಗೆ ಒಂದು ಗುಂಟೆ ಕಡಿಮೆ ಇರುವ ಕೃಷಿ ಭೂಮಿಯಲ್ಲಿ ಏನು ಬೆಳೆಯಲು ಸಾಧ್ಯ ಎಂಬ ಪ್ರಶ್ನೆಗೆ ಪ್ರಯೋಗಿಕವಾಗಿಯೇ ಉತ್ತರ ನೀಡಿದ್ದಾರೆ ರೈತ ಮಹಿಳೆ ಆರ್‌.ಶ್ವೇತಾ ಕುಮಾರಿ. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಎನ್‌.ಗೌರೀಪುರದಲ್ಲಿ ಕೃಷಿ ಮಾಡಿ ಬರಗಾಲದಲ್ಲೂ ಅವರು ಯಶಸ್ಸು ಕಂಡಿದ್ದಾರೆ.

19 ಗುಂಟೆಯಲ್ಲಿ ತಾವು ಬೆಳೆದಿರುವ ಬೆಳೆಗಳ ಪಟ್ಟಿಯನ್ನೇ ಕೊಡುತ್ತಾರೆ ಎಂಟನೇ ತರಗತಿ ಓದಿರುವ ಶ್ವೇತಾ ಕುಮಾರಿ. ಅಷ್ಟೇ ಅಲ್ಲ, ಆ ಬೆಳೆಗಳಿಂದ ಬರುವ ಆದಾಯ, ಖರ್ಚು ಎಲ್ಲ ಲೆಕ್ಕಾಚಾರ ಒಪ್ಪಿಸಿ ಬಿಡುತ್ತಾರೆ. ಏಕೆ ಗೊತ್ತಾ? ಅವರು 4 ವರ್ಷದಿಂದ ಈ ಚಿಕ್ಕ ಜಮೀನಿನಲ್ಲಿ ಕೃಷಿ ಮಾಡುತ್ತಾ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.

ಮೂಲತಃ ತಳಕು ಸಮೀಪದ ಚಿಕ್ಕಹಳ್ಳಿಯ ಶ್ವೇತಾ, ಅಡುಗೆ ಕೆಲಸ ಮಾಡುತ್ತಿದ್ದ ಎನ್‌.ಗೌರೀಪುರದ ಆರ್‌.ಸುರೇಶ್‌ ಗಾಂಧಿ ಅವರನ್ನು ವಿವಾಹವಾಗುತ್ತಾರೆ. ಕೋವಿಡ್‌ ಸಮಯದಲ್ಲಿನ 19 ಗುಂಟೆಯಲ್ಲಿ ಕೃಷಿ ಮಾಡುವ ನಿರ್ಧಾರ ದಂಪತಿಯ ಜೀವನಕ್ಕೆ ಹೊಸ ದಿಕ್ಕು ತೋರಿದೆ.

ಪ್ರಾರಂಭದಲ್ಲೇ ಕೊಳವೆಬಾವಿ ವಿಫಲವಾದರೂ ಧೃತಿಗೆಡದೆ ಕೃಷಿಗೆ ಸಿದ್ಧತೆ ನಡೆಸುತ್ತಾರೆ. ಈ ವೇಳೆ ಬೋರ್‌ವೆಲ್‌ ಮಣ್ಣಿನಲ್ಲಿ ನೀರಿನ ತೇವಾಂಶ ಕಂಡು ಧೈರ್ಯದಿಂದ ಮೋಟಾರ್‌ ಇಳಿಸಿದಾಗ ಲಭ್ಯವಾದ ಮುಕ್ಕಾಲು ಇಂಚು ನೀರಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ.

180 ಸೀಬೆ ಹಣ್ಣಿನ ಗಿಡ, 70 ಎಳೆ ನೀರು ತೆಂಗು, ಬದುವಿನಲ್ಲಿ ಸೀಗೆ ಸೊಪ್ಪು ಬೆಳೆದಿದ್ದಾರೆ. ಅಷ್ಟೇ ಅಲ್ಲದೆ ನಿತ್ಯ ಆದಾಯಕ್ಕೆ ಮೆಣಸಿನ ಕಾಯಿ, ಟೊಮೆಟೊ, ಸೊಪ್ಪು ಬೆಳೆಯುತ್ತಾರೆ. ಜತೆಗೆ ಮಾವು, ನೇರಳೆ, ಸಪೋಟ, ಅಂಜೂರ, ಪಪ್ಪಾಯಿ, ದ್ರಾಕ್ಷಿ, ಬಾಳೆ, ಆ್ಯಪಲ್‌ ಬಾರೆ, ಹೂವು ಹಾಕಿದ್ದಾರೆ. ಜೇನು ಕೃಷಿ ಮಾಡಲು ಸಹ ಸಿದ್ಧತೆ ನಡೆಸಿದ್ದಾರೆ. ಕೃಷಿಗೆ ಪೂರಕವಾದ ಹೈನುಗಾರಿಕೆಯೂ ಇದೆ. ಒಂದು ಆಕಳು, 10 ಟಗರು ಇವೆ. 

ಪ್ರಾರಂಭದಲ್ಲಿ ಹಲವು ಏಳು ಬೀಳು ಕಂಡರೂ ಅಂತಿಮವಾಗಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರ ಬದುಕು ನಡೆಸುತ್ತಿದ್ದಾರೆ. ‘ನಗರದಲ್ಲಿ ತಿಂಗಳ ಪೂರ್ತಿ ದುಡಿದರೂ ಸಹ ನೆಮ್ಮದಿ ಇರುವುದಿಲ್ಲ. 19 ಗುಂಟೆಯಲ್ಲೇ ನೆಮ್ಮದಿ ಕಂಡುಕೊಂಡಿದ್ದೇವೆ’ ಎನ್ನುತ್ತಾರೆ ಶ್ವೇತಾ.

ವಾರದ ದುಡಿಮೆಯಾಗಿ ಸೀಬೆ ಹಣ್ಣು ಕೈ ಹಿಡಿದಿದೆ. ನಾಯಕನಹಟ್ಟಿ ವ್ಯಾಪಾರಿಗಳು ಹಣ್ಣು ಖರೀದಿಸುತ್ತಾರೆ. ಜತೆಗೆ ಸೊಪ್ಪು, ತರಕಾರಿ, ಹೈನುಗಾರಿಕೆ ದಿನದ ಆದಾಯವಾಗಿದೆ. ಹನಿ ನೀರಾವರಿ ಪದ್ಧತಿ ಬೇಸಿಗೆಯಲ್ಲಿ ಬೆಳೆ ಉಳಿಸಿಕೊಳ್ಳಲು ಸಹಕಾರಿಯಾಗಿದೆ.

‘ಕಡಿಮೆ ಗಿಡಗಳಿದ್ದರೆ ಆರೈಕೆ ಸುಲಭ ಮತ್ತು ಪರಿಣಾಮಕಾರಿ’ ಎಂಬ ತತ್ವ ಆಳವಡಿಸಿಕೊಂಡಿದ್ದಾರೆ. ಹಾಗೆಯೇ, ಪ್ರತಿ ಕೆಜಿ ಸೀಬೆಗೆ ₹ 25ರಿಂದ 30 ಸಿಕ್ಕರೆ ಸಾಕು ಲಾಭ ಬರುತ್ತದೆ ಎಂಬ ಲೆಕ್ಕಾಚಾರ ನೀಡುತ್ತಾರೆ. ಸಮಗ್ರ ಕೃಷಿ ಪದ್ಧತಿಯಲ್ಲಿ ನಷ್ಟದ ಮಾತೇ ಬರುವುದಿಲ್ಲ. ಎಳೆ ನೀರು ತೆಂಗಿನ ಮರ ಫಲಕ್ಕೆ ಬಂದರೆ ಹೆಚ್ಚಿನ ಆದಾಯ ನಿರೀಕ್ಷಿಸಬಹುದು ಎಂಬುದು ಶ್ವೇತಾ ಅವರ ಲೆಕ್ಕಾಚಾರ.

ಹೈನುಗಾರಿಕೆ ಪ್ರತ್ಯಕ್ಷ, ಪರೋಕ್ಷ ಲಾಭ ನೀಡುತ್ತದೆ. ಸಗಣಿಯನ್ನು ಬೆಳೆಗೆ ಗೊಬ್ಬರವಾಗಿ ಬಳಸುತ್ತೇವೆ. ಪ್ರತಿ ತಿಂಗಳು ಟಗರು ಮಾರಾಟ ಮಾಡುವುದರಿಂದ ತಿಂಗಳಿಗೆ ನಿಗದಿತ ಆದಾಯ ಕಂಡುಕೊಂಡಿದ್ದಾರೆ.

ಸಮೃದ್ಧವಾಗಿರುವ ಸೀಬೆ ಗಿಡ
ಸಮೃದ್ಧವಾಗಿರುವ ಸೀಬೆ ಗಿಡ
ಆರ್‌.ಶ್ವೇತಾ ಕುಮಾರಿ
ಆರ್‌.ಶ್ವೇತಾ ಕುಮಾರಿ
ಆರ್‌.ಸುರೇಶ್‌ ಗಾಂಧಿ
ಆರ್‌.ಸುರೇಶ್‌ ಗಾಂಧಿ

ಅಲ್ಪ ಭೂಮಿಯಲ್ಲೇ ಭೂಮಿ ತಾಯಿ ನಂಬಿ ಕೃಷಿ ಮಾಡುತ್ತಿ‌ದ್ದೇವೆ. ಎಲ್ಲ ಕೆಲಸವನ್ನು ನಾವೇ ಮಾಡಿಕೊಳ್ಳುತ್ತೇವೆ. ಕೂಲಿಯವರನ್ನು ಯಾವುದಕ್ಕೂ ಆಶ್ರಯಿಸಿಲ್ಲ. ಕೃಷಿ ಬದುಕಿನ ಯಶಸ್ಸಿನ ಹಿಂದೆ ಪತಿ ಸುರೇಶ್‌ ಸಹಕಾರ ಹೆಚ್ಚಿದೆ

–ಆರ್‌.ಶ್ವೇತಾ ಕುಮಾರಿ ರೈತ ಮಹಿಳೆ

ಶಿಸ್ತುಬದ್ಧವಾಗಿ ಕೃಷಿ ಮಾಡಿದರೆ ನಿಜಕ್ಕೂ ಬದುಕಿಗೆ ನೆಮ್ಮದಿ ಸಿಗುತ್ತದೆ ಎಂಬುದಕ್ಕೆ ನಮ್ಮ ಕುಟುಂಬವೇ ಸಾಕ್ಷಿ. ಸಮಗ್ರ ಕೃಷಿ ವರ್ಷ ಪೂರ್ತಿ ಲಾಭ ನೀಡುತ್ತದೆ. ಜೇನು ಕೃಷಿ ಮಾಡಲು ಸಿದ್ಧತೆ ನಡೆಸಲಾಗಿದೆ

––ಆರ್‌.ಸುರೇಶ್‌ ಗಾಂಧಿ ಪತಿ

ನೀರಿನ ಮಿತ ಬಳಕೆ

ರಾತ್ರಿ ಮತ್ತು ಬೆಳಿಗ್ಗೆ ಮಾತ್ರ ಬರುವ ಮುಕ್ಕಾಲು ಇಂಚು ಕೊಳವೆಬಾವಿ ನೀರನ್ನು ಕೃಷಿಗೆ ಆಶ್ರಯಿಸಿದ್ದಾರೆ. ಕಳೆದ ವರ್ಷ ಮಳೆಗಾಲದಲ್ಲಿ ಮಳೆ ನೀರಿನಲ್ಲೇ ಕೃಷಿ ಅಗತ್ಯ ಬಿದ್ದಾಗ ಕೊಳವೆಬಾವಿ ನೀರು ಬಳಕೆ ಮಾಡಿದ್ದಾರೆ. ಮಣ್ಣಿಗೆ ಸೊಪ್ಪು ಕಳೆಗಿಡಗಳನ್ನು ಮುಚ್ಚಿಗೆ ಮಾಡುತ್ತಾರೆ. ಬೆಳೆ ತ್ಯಾಜ್ಯವನ್ನು ಮಣ್ಣಿಗೆ ಹರಗಿಸಿ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ವೃದ್ಧಿಸಿದ್ದಾರೆ. ಹೀಗಾಗಿ ನೀರಿನ ಬಳಕೆಯೂ ಮಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT