ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು: ತರಕಾರಿ ಬೆಳೆಯಿಂದ ಆರ್ಥಿಕ ಶಕ್ತಿ

ವರ್ಷಕ್ಕೆ 2–3 ಬೆಳೆ ಬೆಳೆಯುವ ರೈತ ಕುಟುಂಬ
Last Updated 12 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ರೈತರು ವರ್ಷದ ಸಣ್ಣ ಪುಟ್ಟ ಖರ್ಚುಗಳನ್ನು ಸರಿದೂಗಿಸಲು ಕೃಷಿಯಲ್ಲಿ ಹೊಸ ಪ್ರಯೋಗ ನಡೆಸುವುದು ಸಾಮಾನ್ಯ. ಇಲ್ಲೊಂದು ರೈತ ಕುಟುಂಬ ಕಳೆದ 7 ವರ್ಷಗಳಿಂದ ಜಮೀನಿನ ಸ್ವಲ್ಪ ಭಾಗವನ್ನು ತರಕಾರಿ ಬೆಳೆಗೆ ಮೀಸಲಿಟ್ಟು ವರ್ಷದಲ್ಲಿ ಎರಡು–ಮೂರು ಬೆಳೆ ಬೆಳೆದು, ಆರ್ಥಿಕ ಸ್ಥಿತಿಯನ್ನು ಸರಿದೂಗಿಸುತ್ತಿದ್ದಾರೆ.

ಸಮೀಪದ ಅಯ್ಯನಹಳ್ಳಿ ಗ್ರಾಮದ ರೈತ ಮಲ್ಲೇಶ ನಾಯ್ಕ ಹಾಗೂ ಮಕ್ಕಳಾದ ಸುನಿಲ್–ಅನಿಲ್ ಇಂಥ ಪ್ರಯೋಗ ಮಾಡಿದವರು. ತಮ್ಮ ಮೂರೂವರೆ ಎಕರೆ ಭೂಮಿಯಲ್ಲಿ 2 ಎಕರೆ ಭೂಮಿಯನ್ನು ನಾಲ್ಕು ಭಾಗವಾಗಿ ಮಾಡಿಕೊಂಡು ಒಂದೊಂದು ಭಾಗದಲ್ಲಿ ಒಂದೊಂದು ಬಗೆಯ ತರಕಾರಿ ಬೆಳೆಸುತ್ತಾರೆ. ಮಳೆಗಾಲ ಹಾಗೂ ಬೇಸಿಗೆಯಲ್ಲಿ ಟೊಮೊಟೊ, ಬದನೆ, ಮೆಣಸಿನಕಾಯಿ ಬೆಳೆಯುತ್ತಾರೆ.

ಅಕ್ಟೋಬರ್‌ ತಿಂಗಳಿನ ಎರಡನೇ ವಾರದಲ್ಲಿ ಮುಕ್ಕಾಲು ಎಕರೆ ಪ್ರದೇಶದಲ್ಲಿ 3 ಅಡಿ ಅಂತರದ ಸಾಲಿನಲ್ಲಿ ಒಂದುವರೆ ಅಡಿ ಅಂತರದಲ್ಲಿ ಸುಮಾರು 8000 ಟೊಮೊಟೊ ಸಸಿಗಳನ್ನು ನಾಟಿ ಮಾಡಿದ್ದಾರೆ. ಗಿಡಗಳು ಬೆಳೆದ ನಂತರ, 6–8 ಅಡಿ ಅಂತರದಲ್ಲಿ 6 ಅಡಿ ಎತ್ತರದ ಗೂಟಗಳನ್ನು ನೆಟ್ಟು, ಸಸಿಗಳನ್ನು ಗೂಟಗಳಿಗೆ ಆಧಾರವಾಗಿ ಗಿಡ ನಿಲ್ಲುವಂತೆ ಮಾಡಿಕೊಂಡು ಸೆಣಬಿನ ದಾರಗಳಿಂದ ಕಟ್ಟಿದ್ದಾರೆ. ಎರಡು ದಿನಗಳಿಗೊಮ್ಮೆ ಕೊಳವೆ ಬಾವಿಯ ನೀರು ಹಾಯಿಸಲಾಗುತ್ತಿದೆ.

ಕೃಷಿ ಹೊಂಡ: ಸರ್ಕಾರದಿಂದ ಸಹಾಯ ಪಡೆದು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಅದರಲ್ಲಿ ನೀರು ಸಂಗ್ರಹ ಮಾಡಿ ನೀರನ್ನು ಹಾಯಿಸಲಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಕೊಳವೆ ಬಾವಿಯಲ್ಲಿ ಉತ್ತಮ ನೀರು ಬರುತ್ತಿದೆ ಎನ್ನುತ್ತಾರೆ ರೈತ ಮಲ್ಲೇಶ್‌ ನಾಯ್ಕ.

ಸಸಿಗಳನ್ನು ನಾಟಿ ಮಾಡುವ ಮೊದಲು ಡಿಎಪಿ ಹಾಗೂ ಕೊಟ್ಟಿಗೆ ಗೊಬ್ಬರವನ್ನು ತಳಗೊಬ್ಬರವಾಗಿ ನೀಡಲಾಗಿದೆ. ಸಸಿಗಳನ್ನು ಮಾಯಕೊಂಡದ ಫಾರಂನಿಂದ ತರಲಾಗಿದೆ. ತಳಗೊಬ್ಬರ, ಮೇಲು ಗೊಬ್ಬರ, ಔಷಧಗಳಿಗಾಗಿ ಈವರೆಗೆ ₹ 35,000–40,000 ಖರ್ಚು ಮಾಡಲಾಗಿದೆ. ಮನೆಯಲ್ಲಿ ಎತ್ತಿನ ಬೇಸಾಯ ಇರುವುದರಿಂದ ಬೇಸಾಯದ ಕೂಲಿಯೂ ಉಳಿಯುತ್ತಿದೆ. ‘ಈಗ ವಾರದಲ್ಲಿ ಮೂರು ದಿನ ಕೊಯ್ಲು ಮಾಡುತ್ತಿದ್ದೇವೆ. ಇದಕ್ಕಾಗಿ ಐದಾರು ಜನರನ್ನು ಕೂಲಿಯಾಗಿ ತೆಗೆದುಕೊಳ್ಳುತ್ತಿದ್ದೇವೆ. ಒಬ್ಬರಿಗೆ ₹ 150 ಕೂಲಿ ಕೊಡುತ್ತಿದ್ದೇವೆ. ಜತೆಗೆ ನಾವು ಸಹ ಕೊಯ್ಲು ಮಾಡಿದ ಟೊಮೊಟೊವನ್ನು ಬಾಕ್ಸ್‌ಗಳಿಗೆ ವಿಂಗಡಣೆ ಮಾಡಿ ತುಂಬುತ್ತೇವೆ’ ಎನ್ನುತ್ತಾರೆ ಸುನಿಲ್‌.

ಹೀರೇಕಾಯಿ ಬಳ್ಳಿ ಹಾಳಾದ ನಂತರ ರಾಗಿಯನ್ನು ಬಿತ್ತನೆ ಮಾಡಲಾಗಿದೆ. ರಾಗಿ ಕೊಯ್ಲು ಮಾಡಿದ ನಂತರ ಮೆಣಸಿನಕಾಯಿ, ಇನ್ನೊಂದು ಭಾಗದಲ್ಲಿ ಬದನೆ ಕಾಯಿಯನ್ನು ಹಾಕಲಾಗುವುದು. ಈ ವರ್ಷ ಈ ಭಾಗದಲ್ಲಿ ಉತ್ತಮ ಮಳೆಯಾಗಿ, ಎರಡು ಮೂರು ಬಾರಿ ಹಳ್ಳಗಳು ಹರಿದಿದ್ದರಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಳೆದ ಬಾರಿಯಷ್ಟು ಇರಲಾರದು ಎಂಬ ನಂಬಿಕೆ ಇದೆ ಎನ್ನುತ್ತಾರೆ ಮಲ್ಲೇಶ ನಾಯ್ಕ.

600 ಬಾಕ್ಸ್‌ ಟೊಮೊಟೊ ಕೊಯ್ಲು
ಕೊಯ್ಲು ಮಾಡಿದ ಟೊಮೊಟೊವನ್ನು ದಾವಣಗೆರೆ ಮಾರುಕಟ್ಟೆಗೆ ನಾವೇ ತೆಗೆದುಕೊಂಡು ಹೋಗುತ್ತೇವೆ. ಆರಂಭದಲ್ಲಿ ಬಾಕ್ಸ್‌ ಒಂದಕ್ಕೆ ₹ 250ರಂತೆ ಮಾರಾಟ ಮಾಡಿದ್ದೆವು. ಆದರೆ, ಎರಡು ವಾರಗಳಿಂದ ಬೆಲೆ ಕುಸಿತ ಆಗಿದ್ದು, ಬಾಕ್ಸ್‌ ಒಂದನ್ನು ₹ 150ರಂತೆ ಮಾರಾಟ ಮಾಡುತ್ತಿದ್ದೇವೆ. ಕೆಲವು ಸಂದರ್ಭದಲ್ಲಿ ಸಮೀಪದ ಚಿಕ್ಕಜಾಜೂರು, ಹೊಳಲ್ಕೆರೆ, ಸಂತೆಬೆನ್ನೂರು ಸಂತೆಗಳಿಗೆ ಹೊಯ್ದು, ಅಲ್ಲಿನ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತದೆ. ಬೆಲೆ ಸಿಕ್ಕಾಗ ಖುಷಿಯಾಗುತ್ತದೆ. ಆದರೆ, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಆವಕವಾದಾಗ ಬೆಲೆ ಕುಸಿತ ಆಗುತ್ತದೆ.

ನಾಟಿ ಮಾಡಿ 75 ದಿನಗಳಿಗೆ ಕಾಯಿ ಕೊಯ್ಲಿಗೆ ಬರುತ್ತದೆ. ಒಂದು ಬಾರಿಗೆ 75ರಿಂದ 80 ಬಾಕ್ಸ್‌ಗಳಷ್ಟು ಕಾಯಿಗಳು ಸಿಗುತ್ತವೆ. ಈವರೆಗೆ ಸುಮಾರು 600 ಬಾಕ್ಸ್‌ಗಳಷ್ಟು ಟೊಮೊಟೊ ಕೊಯ್ಲು ಮಾಡಿ ಮಾರಿದ್ದೇವೆ. ಇದರಲ್ಲಿ 250ಕ್ಕೂ ಹೆಚ್ಚು ಬಾಕ್ಸ್‌ಗಳನ್ನು ₹ 250ರಂತೆ ಮಾರಾಟ ಮಾಡಲಾಗಿದೆ. ಸುಮಾರು ಫೆಬ್ರುವರಿ ತಿಂಗಳವರೆಗೆ ಕೊಯ್ಲು ಮಾಡಬಹುದು. ಖರ್ಚು ಕಳೆದು ₹ 55 ಸಾವಿರದಿಂದ ₹ 60 ಸಾವಿರದವರೆಗೆ ನಿವ್ವಳ ಲಾಭ ಸಿಗುವು ನಿರೀಕ್ಷೆ ಇದೆ ಎನ್ನುತ್ತಾರೆ ಸುನಿಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT