ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಬರಡು ನೆಲದಲ್ಲಿ ಗೋಡಂಬಿ ಘಮ

ಉತ್ತಮ ಆದಾಯ ಪಡೆಯುತ್ತಿರುವ ಹಿರಿಯೂರು ಗ್ರಾಮದ ರೈತ ಕುಟುಂಬ
Last Updated 4 ಜನವರಿ 2023, 5:16 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಅಡಿಕೆ ತೋಟ ಮಾಡಲು ಹೊರಟ ಕುಟುಂಬವೊಂದು ಜಮೀನಿನಲ್ಲಿ ನೀರಿನ ಸೆಲೆ ಕಾಣದೆ ಮುಂದೆ ಯಾವ ಬೆಳೆ ಬೆಳೆಯಬೇಕು ಎಂಬ ಚಿಂತೆಗೀಡಾಗಿತ್ತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಮಾರ್ಗದರ್ಶಕರ ಸಲಹೆಯಂತೆ ಗೋಡಂಬಿ ಸಸಿಗಳನ್ನು ನಾಟಿ ಮಾಡಿ, ಇದೀಗ ಉತ್ತಮ ಆದಾಯ ಪಡೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಸಮೀಪದ ಹಿರಿಯೂರು ಗ್ರಾಮದ ರೈತರಾದ ವಿರೂಪಾಕ್ಷಯ್ಯ ಹಾಗೂ ಅವರ ಮಗ ಲೋಕೇಶ್‌ ಅವರೇ ಗೋಡಂಬಿ ಬೆಳೆದು ಲಾಭದ ಮುಖ ನೋಡುತ್ತಿದ್ದಾರೆ.

ತಮ್ಮ 10 ಎಕರೆ ಜಮೀನಿನ ಸುತ್ತಮುತ್ತಲಿನ ತೋಟಗಳಲ್ಲಿ ರೈತರು ಅಡಿಕೆ ಬೆಳೆದಿದ್ದು ನೋಡಿ, ತಾವೂ ಅಡಿಕೆ ಬೆಳೆಯುವ ಉದ್ದೇಶದಿಂದ ಸುಮಾರು 20 ಕೊಳವೆ ಬಾವಿಗಳನ್ನು ತೋಡಿಸಿದರು. ಆದರೆ, ಯಾವುದರಲ್ಲೂ ನೀರಿನ ಸೆಲೆ ಸಿಗದೆ ನಿರಾಸೆಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಮಾರ್ಗದರ್ಶಕರು ಈ ಜಮೀನಿನಲ್ಲಿ ಗೋಡಂಬಿ ಸಸಿಗಳನ್ನು ನಾಟಿ ಮಾಡಲು ಸಲಹೆ ನೀಡಿದರು. ನಾಲ್ಕು ವರ್ಷಗಳ ನಂತರ ಒಂದು ಗಿಡ ಕನಿಷ್ಠ ₹ 1,000 ಆದಾಯ ನೀಡುತ್ತದೆ ಎಂದು ಪ್ರೋತ್ಸಾಹಿಸಿದರು.

ನೀರಿನ ಕೊರತೆಯಿಂದಾಗಿ ಮೆಕ್ಕೆಜೋಳವನ್ನು ಬಿಟ್ಟು ಬೇರೆ ಯಾವುದೇ ತೋಟ ಮಾಡುವ ಸಾಹಸಕ್ಕೆ ಕೈಹಾಕದೆ ಧರ್ಮಸ್ಥಳ ಸಂಸ್ಥೆಯಿಂದ ನೀಡಿದ 100 ಗೋಡಂಬಿ ಸಸಿಗಳನ್ನು ನಾಟಿ ಮಾಡಿದರು. ನಂತರ, ಹೊಳಲ್ಕೆರೆಯ ತೋಟಗಾರಿಕಾ ಇಲಾಖೆಯಿಂದ 200 ಗೋಡಂಬಿ ಸಸಿಗಳನ್ನು ಉಚಿತವಾಗಿ ಪಡೆದು ನಾಟಿ ಮಾಡಿದರು.

‘ಆರು ವರ್ಷಗಳ ಹಿಂದೆ ಎರಡು ಅಡಿ ಆಳ ಮತ್ತು ಎರಡು ಅಡಿ ಅಗಲದ ಗುಂಡಿಗಳನ್ನು ತೆಗೆದು, ಪ್ರತಿ ಗುಣಿಗೆ ಒಂದು ಪುಟ್ಟಿಯಷ್ಟು ಕೊಟ್ಟಿಗೆ ಗೊಬ್ಬರ ಹಾಕಿ, ಸಸಿಗಳನ್ನು ನಾಟಿ ಮಾಡಿದೆವು. ವಾರಕ್ಕೊಮ್ಮೆ ಟ್ರ್ಯಾಕ್ಟರ್‌ನಲ್ಲಿ ಡ್ರಂಗಳನ್ನು ಇಟ್ಟುಕೊಂಡು ಗಿಡವೊಂದಕ್ಕೆ ಎರಡು ಕೊಡ ನೀರನ್ನು ಹಾಕಿದೆವು. 300 ಸಸಿಗಳಲ್ಲಿ ಸುಮಾರು 70 ಸಸಿಗಳು ಬಿಸಿಲು ಹಾಗೂ ದನಕರುಗಳ ಹಾವಳಿಯಿಂದ ಹಾಳಾದವು. ಉಳಿದ 230 ಸಸಿಗಳು ಉತ್ತಮವಾಗಿ ಬಂದವು. ಮಳೆಗಾಲದಲ್ಲಿ ಸಸಿಗಳಿಗೆ ಗುಣಿ ಮಾಡಿ ಒಂದೊಂದು ಪುಟ್ಟಿಯಷ್ಟು ಕೊಟ್ಟಿಗೆ ಗೊಬ್ಬರವನ್ನು ನೀಡುತ್ತಿದ್ದೆವು. ಎರಡು ಮತ್ತು ಮೂರನೇ ವರ್ಷಕ್ಕೆ ಗಿಡಗಳಲ್ಲಿ ಹೂವು ಬಿಡಲಾರಂಭಿಸಿತು. ಆದರೆ, ಮೊದಲ ಎರಡು ವರ್ಷಗಳಲ್ಲಿ ಫಸಲು ಬರಲು ಬಿಡದೆ ಹೂವುಗಳನ್ನು ಕಿತ್ತುಹಾಕಿ ಗಿಡಗಳು ಸಮೃದ್ಧವಾಗಿ ಬೆಳೆ ಅನುವು ಮಾಡಿಕೊಟ್ಟೆವು’ ಎಂದು ಗೋಡಂಬಿ ಸಸಿ ಬೆಳೆಸಿದ ರೀತಿಯನ್ನು ವಿವರಿಸಿದರು ಲೋಕೇಶ್‌.

‘ನಾಲ್ಕನೇ ವರ್ಷ ಗಿಡಗಳ ತುಂಬ ಸಮೃದ್ಧವಾದ ಹೂವುಗಳು ಬಿಟ್ಟವು. ಈಚುಗಳು ಉತ್ತಮವಾಗಿ ಬೆಳೆದು ಹಣ್ಣಿಗೆ ಬಂದವು. ಹಣ್ಣಗಳು ಗಿಡದಲ್ಲೇ ಒಣಗಿ ಉದುರಲಾರಂಭಿಸಿದವು. ಉದುರಿದ ಹಣ್ಣುಗಳನ್ನು ತಂದು ಅವುಗಳ ತೊಗಟೆ ಬಿಡಿಸಿ, ಮೂರ್ನಾಲ್ಕು ದಿನಗಳ ಕಾಲ ಒಣಗಿಸಿದೆವು. ಮೊದಲ ವರ್ಷ 80 ಕೆ.ಜಿ.ಯಷ್ಟು ಗೋಡಂಬಿ ಬಂತು. ಅದನ್ನು ಕೆ.ಜಿ.ಗೆ ₹ 50ರಂತೆ ಸ್ಥಳೀಯ ವ್ಯಾಪಾರಿಗಳಿಗೆ ಮರಾಟ ಮಾಡಿದೆವು’.

‘5ನೇ ವರ್ಷದಲ್ಲಿ 8 ಕ್ವಿಂಟಲ್‌ನಷ್ಟು ಗೋಡಂಬಿ ಬೆಳೆದೆವು. ಆಗಲೂ ಬೆಲೆ ₹ 50 ಇತ್ತು. ಕಳೆದ ಫೆಬ್ರುವರಿಯಲ್ಲಿ 7 ಕ್ವಿಂಟಲ್‌ನಷ್ಟು ಗೋಡಂಬಿ ಸಿಕ್ಕಿದೆ. ಈ ಬಾರಿ ಕ್ವಿಂಟಲ್‌ಗೆ ₹ 11,000ದಂತೆ ದಾವಣಗೆರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆವು’ ಎನ್ನುತ್ತಾರೆ ಲೋಕೇಶ್‌.

‘ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಎಲ್ಲ ಮರಗಳಲ್ಲಿ ಹೂವು ಸೊಂಪಾಗಿ ಬಿಟ್ಟಿದೆ. ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ, ಈ ವರ್ಷ ಸುಮರು 15 ಕ್ವಿಂಟಲ್‌ನಷ್ಟು ಇಳುವರಿ ಬರುವ ನಿರೀಕ್ಷೆ ಇದೆ. ಉತ್ತಮ ಬೆಲೆ ಸಿಕ್ಕರೆ, ಸುಮಾರು ₹ 1.65 ಲಕ್ಷ ಆದಾಯದ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 7829126606

***

ಖರ್ಚು ಮತ್ತು ಆದಾಯ

ಆರಂಭದಲ್ಲಿ ಗುಣಿ ತೆಗೆಸಿದ್ದು, ಗೊಬ್ಬರ, ನೀರು ಹಾಕಿದ್ದು ಹಾಗೂ ವರ್ಷದಲ್ಲಿ ಎರಡು ಬಾರಿ ಔಷಧ ಸಿಂಪರಣೆಗೆ ₹ 50,000 ಖರ್ಚು ಮಾಡಿದ್ದೇವೆ. ಇದಕ್ಕೂ ಮೊದಲು ಬೆಳೆಯುತ್ತಿದ್ದ ಮೆಕ್ಕೆಜೋಳದಿಂದ ವರ್ಷದಲ್ಲಿ ಖರ್ಚು ಕಳೆದು ಎಕರೆಗೆ ₹ 12,000ದಿಂದ ₹ 15,000 ಆದಾಯ ಬರುತ್ತಿತ್ತು. ಈಗ ಗೋಡಂಬಿ ಹಾಕಿರುವುದರಿಂದ ವರ್ಷಕ್ಕೆ ಎಕರೆಗೆ ಕನಿಷ್ಠ ₹ 60,000ರಿಂದ ₹ 65,000 ಆದಾಯ ಗಳಿಸುತ್ತಿದ್ದೇವೆ.

‘ಗ್ರಾಮದ ಗೌಡ್ರ ಕುಮಾರ್‌ ಅವರೂ 100 ಸಸಿಗಳನ್ನು ನಾಟಿ ಮಾಡಿದ್ದು, 80 ಮರಗಳಿವೆ. ಅವರ ಜಮೀನಿನಲ್ಲೂ ಉತ್ತಮ ಇಳುವರಿ ಬರುತ್ತಿದೆ. ನಮ್ಮ ತೋಟವನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಕೆಲವು ರೈತರು ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಿದ್ದಾರೆ. ನೀರು ಕಡಿಮೆ ಇರುವ ರೈತರು ಚಿಂತೆಗೀಡಾಗದೆ, ಇಂತಹ ಕಡಿಮೆ ನೀರಿನ ಕೃಷಿ ಮಾಡಿದರೆ ಆದಾಯ ಹೆಚ್ಚಾಗುತ್ತದೆ’ ಎಂದು ಲೋಕೇಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT