ಭಾನುವಾರ, ಸೆಪ್ಟೆಂಬರ್ 26, 2021
28 °C
ಪರಶುರಾಂಪುರ ನಾಡಕಚೇರಿ: ಶಿಥಿಲ ಕಟ್ಟಡ; ಕೊರತೆಗಳ ಕೂಪ

ಸರ್ಕಾರಿ ಕಡತ ರಕ್ಷಿಸಲು ತಾಡಪಾಲೇ ಗತಿ

ತಿಮ್ಮಯ್ಯ ಜೆ. ಪರಶುರಾಂಪುರ Updated:

ಅಕ್ಷರ ಗಾತ್ರ : | |

Prajavani

ಪರಶುರಾಂಪುರ: ಜಿಲ್ಲೆಯಲ್ಲಿಯೇ ಅತಿ ದೊಡ್ಡ ಹೋಬಳಿ ಕೇಂದ್ರವಾದ ಪರಶುರಾಂಪುರವು 52ಕ್ಕೂ ಹೆಚ್ಚು ಹಳ್ಳಿಗಳು 19 ಪಿರ್ಕಾಗಳನ್ನು ಒಳಗೊಂಡಿವೆ. ಆದರೆ, ನಾಡಕಚೇರಿ ಮಾತ್ರ ಶಿಥಿಲವಾಗಿದೆ. ಇಲ್ಲಿನ ಕಡತ ರಕ್ಷಿಸಲು ಸಿಬ್ಬಂದಿ ತಾಡಪಾಲು ಮೊರೆ ಹೋಗಿರುವುದು ಮೂಲಸೌಲಭ್ಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ.

ಪ್ರತಿದಿನ ಸಾವಿರಾರು ಜನರು ಇಲ್ಲಿನ ನಾಡಕಚೇರಿಗೆ ಒಂದಲ್ಲ ಒಂದು ಕೆಲಸಕ್ಕೆ ಬರುತ್ತಾರೆ. ಹಲವು ದಾಖಲೆಗಳು ಇಲ್ಲಿ ಇರುತ್ತವೆ. ಆದರೆ, ಈ ಅಮೂಲ್ಯ ದಾಖಲೆಗಳು ಮಳೆ ಬಂದರೆ ತೋಯ್ದ ಹೋಗುತ್ತವೆ ಎಂಬ ಭೀತಿ ಇಲ್ಲಿಯ ಸಿಬ್ಬಂದಿಯನ್ನು ಕಾಡುತ್ತಿದೆ. ಇಲ್ಲಿಯ ಶಿಥಿಲ ಕಟ್ಟಡದಿಂದ ಮುಕ್ತಿ ಎಂದು? ಸುಸಜ್ಜಿತ ಕಟ್ಟಡಕ್ಕೆ ಹೋಗುವುದು ಯಾವಾಗ ಎಂದು ಅವರು ಎದುರು ನೋಡುತ್ತಿದ್ದಾರೆ.

ಹೋಬಳಿಗೆ ಸೇರಿದ ಸಾವಿರಾರು ವಿದ್ಯಾರ್ಥಿಗಳು ಜಾತಿ, ಆದಾಯ ಪ್ರಮಾಣ ಪತ್ರ ಮಾಡಿಸಲು ಇಲ್ಲಿಗೆ ದಾಖಲೆ ನೀಡುತ್ತಾರೆ. ಹಿಂದಿನ ಕಾಲದ ಕೈಬರಹದ ಪಾಣಿ, ಪಟ್ಟ, ಜಮೀನಿಗೆ ಸಂಬಧಿಸಿದ ದಾಖಲೆಗಳು ಇಲ್ಲಿದ್ದು, ಅವುಗಳನ್ನು ರಕ್ಷಿಸಬೇಕಿದೆ. ಇಲ್ಲಿಯ ಸಿಬ್ಬಂದಿಯೇ ತಾತ್ಕಾಲಿಕವಾಗಿ ತಾಡಪಾಲು ವ್ಯವಸ್ಥೆಯನ್ನು ಕಲ್ಪಿಸಿಕೊಂಡಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶೀಘ್ರದಲ್ಲಿ ನೂತನ ಕಟ್ಟಡವನ್ನು ಕಲ್ಪಿಸಬೇಕು ಎಂದು ಸ್ಥಳೀಯರಾದ ಸುರೇಶ, ನವೀನ, ಅನಿಲ, ಮೌನೇಶ, ರಾಜಣ್ಣ, ನಾಗರಾಜ ಒತ್ತಾಯಿಸಿದ್ದಾರೆ.

‘60 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಕಟ್ಟಡವು ಮೊದಲು ಆರೋಗ್ಯ ಕೇಂದ್ರದ ಸಿಬ್ಬಂದಿಯ ವಸತಿಗೃಹವಾಗಿತ್ತು. 1989ರಲ್ಲಿ ನಾಡ ಕಚೇರಿ ಆರಂಭವಾದಾಗ ಈಗಿರುವ ಕಟ್ಟಡವನ್ನು ನಾಡ ಕಚೇರಿಗೆ ಬಿಟ್ಟು ಕೊಡಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಅದೇ ಕಟ್ಟಡದಲ್ಲಿದೆ. ಇಲ್ಲಿ ಸಾರ್ವಜನಿಕರಿಗೆ ಶೌಚಾಲಯದ ವ್ಯವಸ್ಥೆಯಿಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಜೊತೆಗೆ 19 ಪಿರ್ಕಾ (ವೃತ್ತ)ಗಳಿದ್ದು ಅದರಲ್ಲಿ ಕೇವಲ 9 ಮಂದಿ ಮಾತ್ರ ವಿ.ಎ.ಗಳು ಕೆಲಸ ಮಾಡುತ್ತಿದ್ದಾರೆ. 10 ವೃತ್ತಗಳ ವಿ.ಎ ಹುದ್ದೆಗಳು ಖಾಲಿ ಇವೆ. ಇಲ್ಲಿ ಕೆಲಸಗಳು ಸಹ ಬೇಗ ಆಗುವುದಿಲ್ಲ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ತಾಲ್ಲೂಕು ಬೋರ್ಡ್ ಹೆಸರಿನಲ್ಲಿ 6 ಎಕರೆ ಜಮೀನು ಇದ್ದು ಅಲ್ಲಿ ಹೊಸ ಕಟ್ಟಡ ಕಟ್ಟಿದರೆ ಮುಂದೆ ತಾಲ್ಲೂಕು ಕೇಂದ್ರವಾಗುವ ಹೋಬಳಿ ಆಗಿರುವುದರಿಂದ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸಬೇಕು’ ಎಂಬುದು ಹೋಬಳಿಯ ಜನರ
ಒತ್ತಾಯವಾಗಿದೆ.

....

ನಾಡಕಚೇರಿ ಕಟ್ಟಡ ಶಿಥಿಲವಾಗಿದ್ದು ಮಳೆ ಬಂದರೆ ಚಾವಣಿ ಸೋರುತ್ತಿದೆ. ದಾಖಲೆಗಳು ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರೊಬ್ಬರೂ ಇದರ ಬಗ್ಗೆ ಗಮನಹರಿಸುತ್ತಿಲ್ಲ. ಪ್ರಸನ್ನಕುಮಾರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ

.....

ಈಗಾಗಲೇ ಲೋಕೋಪಯೋಗಿ ಇಲಾಖೆಯವರು ಬಂದು ಹೊಸ ಕಟ್ಟಡ ನಿರ್ಮಾಣ ಮಾಡಲು ಯೋಜನೆ ತಯಾರಿಸುವುದಾಗಿ ಹೇಳಿದ್ದಾರೆ. ಅನುದಾನ ಬಂದ ಕೂಡಲೇ ನೂತನ ಕಟ್ಟಡ ನಿರ್ಮಾಣ ಮಾಡಲಾಗುವುದು. – ವಸಂತಕುಮಾರ, ಉಪ ತಹಶೀಲ್ದಾರ್, ಪರಶುರಾಂಪುರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು