ಗುರುವಾರ , ಜೂನ್ 30, 2022
27 °C
ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗಾಗಿ ವಿಶೇಷ ವಾರ್ಡ್

ಮಕ್ಕಳ ಪೌಷ್ಟಿಕ ಆಹಾರ ಕೇಂದ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರ ಆರಂಭಿಸಲಾಗಿದ್ದು, ಪೋಷಕರು ಮಕ್ಕಳನ್ನು ದಾಖಲಿಸಬಹುದು ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಪೋಷಣೆಗಾಗಿ ಇಲ್ಲಿ 5 ಬೆಡ್‌ಗಳ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದೆ. ಅಪೌಷ್ಟಿಕ ಮಕ್ಕಳನ್ನು ಇಲ್ಲಿಗೆ ದಾಖಲಿಸಿದರೆ ಮಗು ಹಾಗೂ ಅವರ ಪೋಷಕರಿಗೆ ನಿತ್ಯ ಪೌಷ್ಟಿಕ ಆಹಾರ ನೀಡಲಾಗುವುದು. 14 ದಿನ ಇಲ್ಲಿ ಇರಬೇಕಿದ್ದು, ಅವರ ದುಡಿಮೆಗೆ ತೊಂದರೆ ಆಗಬಾರದು ಎಂದು ಪೋಷಕರಿಗೆ ₹289 ದಿನದ ಭತ್ಯೆಯನ್ನೂ ನೀಡಲಾಗುವುದು. ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಿ ಇಲ್ಲಿಗೆ ದಾಖಲಿಸಬೇಕು’ ಎಂದರು.

‘2008ರಲ್ಲಿ ಶಾಸಕನಾಗಿದ್ದಾಗ ಆಸ್ಪತ್ರೆಯ ಹಳೆ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಲಾಗಿತ್ತು. ಈಗ ಮತ್ತೆ ₹ 31 ಕೋಟಿ ವೆಚ್ಚದಲ್ಲಿ ತಾಯಿ ಮಗು ಆಸ್ಪತ್ರೆ ಸೇರಿ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಮಕ್ಕಳ ತಜ್ಞ ಡಾ.ಬಿ. ಮಂಜುನಾಥ್ ಮಾತನಾಡಿ, ‘1979ರಲ್ಲಿ ದಾವಣಗೆರೆಯ ವೈದ್ಯೆ ನಿರ್ಮಲಾ ಕೇಸರಿ ಅವರು ಮಕ್ಕಳಿಗಾಗಿ ಪೌಷ್ಠಿಕ ಕೇಂದ್ರ ಆರಂಭಿಸಿದ್ದರು. ಈಗ ಸರ್ಕಾರ ಆಯ್ದ ಆಸ್ಪತ್ರೆಗಳಲ್ಲಿ ಪೌಷ್ಠಿಕ ಆಹಾರ ಕೇಂದ್ರ
ಗಳನ್ನು ಆರಂಭಿಸಿದೆ. ತಾಲ್ಲೂಕಿನಲ್ಲಿ 764 ಸಾಧಾರಣ, 14 ತೀವ್ರ ಅಪೌಷ್ಟಿಕತೆ ಹೊಂದಿದ್ದಾರೆ. ಮೊದಲಿಗೆ ತೀವ್ರ ಅಪೌಷ್ಠಿಕತೆ ಹೊಂದಿರುವ ಮಕ್ಕಳನ್ನು ದಾಖಲಿಸಿಕೊಳ್ಳಲಾಗುವುದು’ ಎಂದರು.

ಪುರಸಭೆ ಉಪಾಧ್ಯಕ್ಷ ಕೆ.ಸಿ.ರಮೇಶ್, ಸದಸ್ಯ ಮುರುಗೇಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ವಿನಯ್ ಸಜ್ಜನ್, ಡಿ.ಸಿ.ಮೋಹನ್, ಅರಸನಘಟ್ಟ ಸಂಜಯ್, ಡಾ.ಸುಮಾ, ಡಾ.ರುದ್ರೇಶ್, ಡಾ.ಸಿ.ಎಚ್. ಮಂಜುನಾಥ್, ಸಂತೋಷ್, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ ನಾಯ್ಕ್, ರಮೇಶ್, ಪ್ರವೀಣ್, ಮರುಳಸಿದ್ದಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.