ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುತಿಹುದು ನಾಡಕಚೇರಿ ಚಾವಣಿ

ಕಟ್ಟಡ, ಕಂಪ್ಯೂಟರ್, ಉಪಕರಣಗಳಿಗೆ ಹಾನಿ
Last Updated 24 ಜುಲೈ 2021, 6:19 IST
ಅಕ್ಷರ ಗಾತ್ರ

ಶ್ರೀರಾಂಪುರ: ಪ್ರತಿ ಬಾರಿ ಮಳೆ ಬಂದಾಗಲೂ ಕಚೇರಿಯ ಒಳಗೆ ಚಾವಣಿಯಿಂದ ತೊಟ್ಟಿಕ್ಕುವ ಮಳೆ ನೀರು, ಅದರಿಂದ ತಪ್ಪಿಸಿಕೊಳ್ಳಲು ಟೇಬಲ್ ಕುರ್ಚಿಗಳನ್ನು ಆಚೀಚೆ ಜರುಗಿಸಿ ಕುಳಿತು ಕೆಲಸ ಮಾಡುವ ಸಿಬ್ಬಂದಿ...

ತಾಲ್ಲೂಕಿನಲ್ಲೆ ಅತಿ ದೊಡ್ಡ ಹೋಬಳಿ ಕೇಂದ್ರವಾದ ಶ್ರೀರಾಂಪುರ ನಾಡಕಚೇರಿಯ ಸ್ಥಿತಿ ಇದು. ಇದುವರೆಗೂ ಸುಸಜ್ಜಿತ ಸ್ವಂತ ಕಟ್ಟಡ ಇಲ್ಲದೇ ಮಳೆ ಬಂದರೆ ಸೋರುವ ಬಾಡಿಗೆ ಕಟ್ಟಡದಲ್ಲಿ ಕೆಲಸ ಮಾಡಬೇಕಾಗಿ
ಬಂದಿದೆ.

ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ನಾಡ ಕಚೇರಿ ಕೆಲಸಗಳು ನಡೆಯುತ್ತಿದೆ. ಮಳೆ ಬಂದಾಗಲೆಲ್ಲ ಚಾವಣಿ ಸೋರುತ್ತದೆ. ಕಂಪ್ಯೂಟರ್ ಕೊಠಡಿ, ಉಪತಹಶೀಲ್ದಾರ್ ಕಚೇರಿ ಸೇರಿದಂತೆ ಬಹುತೇಕ ಕಟ್ಟಡ ಮಳೆಯಿಂದ ಸೋರುತ್ತಿದೆ. ಸಿಬ್ಬಂದಿ ಕೆಲವೊಮ್ಮೆ ಕಂಪ್ಯೂಟರ್‌ಗಳನ್ನು ತಾಡಪಾಲ್‌ನಿಂದ ಮುಚ್ಚಿ ಕಾಪಾಡುತ್ತಾರೆ.

15 ದಿನಗಳಿಂದ ಬರುತ್ತಿರುವ ಮಳೆಯಿಂದಾಗಿ ಶುಕ್ರವಾರ ಕಂಪ್ಯೂಟರ್ ಕೊಠಡಿಯ ಚಾವಣಿಯಿಂದ ನೀರು ಸೋರಿ ಕಂಪ್ಯೂಟರ್ ಉಪಕರಣಗಳು ಹಾಳಾಗಿವೆ. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಆಧಾರ್ ಕಾರ್ಡ್ ಹಾಗೂ ಇತರ ದಾಖಲಾತಿಗಳನ್ನು ಪಡೆಯಲು ಬಂದಿದ್ದ ರೈತರು ಮತ್ತು ಸಾರ್ವಜನಿಕರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತ ಮರಳಿದರು. ಅದೃಷ್ಟವಶಾತ್ ದಾಖಲೆಗಳನ್ನಿಟ್ಟಿರುವ ಕೊಠಡಿ ಸೋರುತ್ತಿಲ್ಲ. ಅದೂ ಸೋರಲು ಆರಂಭಿಸಿದರೆ ಇಡೀ ಹೋಬಳಿಗೆ ಸೇರಿದ ಅಮೂಲ್ಯ ದಾಖಲೆ ಪತ್ರಗಳು ಹಾಳಾಗಬಹುದು ಎಂಬ ಆತಂಕ ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿದೆ.

ಎರಡು ವರ್ಷಗಳ ಹಿಂದೆ ಶಾಸಕ ಗೂಳಿಹಟ್ಟಿ ಶೇಖರ್ ಇಲ್ಲಿಯ ಗೂಳಿಹಳ್ಳಿ ರಸ್ತೆಯಲ್ಲಿಯ ನಿವೇಶನದಲ್ಲಿ ನೂತನ ನಾಡಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ನಂತರ ಕೆಲಸ ಆರಂಭಿಸಿದ ನಿರ್ಮಿತಿ ಕೇಂದ್ರದವರು ಕಟ್ಟಡದ ಆರ್.ಸಿ.ಸಿ. ಹಾಕಿಸಿ ಈಗ ಕೆಲಸ
ನಿಲ್ಲಿಸಿದ್ದಾರೆ.

ನಿರ್ಮಿತಿ ಕೇಂದ್ರದ ಎಂಜಿನಿಯರ್ ಕೃಷ್ಣೇಗೌಡ ಪ್ರತಿಕ್ರಿಯಿಸಿ, ‘ಶ್ರೀರಾಂಪುರ ನಾಡಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ
₹ 18 ಲಕ್ಷ ಬಿಡುಗಡೆಯಾಗಿದೆ. ಬಿಡುಗಡೆಯಾದಷ್ಟು ಹಣಕ್ಕೆ ಕೆಲಸ ಮಾಡಲಾಗಿದೆ. ಇನ್ನಿತರ ಕೆಲಸಗಳಿಗೆ ಅನುದಾನದ ಕೊರತೆಯಿದೆ. ಇದನ್ನು ಶಾಸಕರ ಗಮನಕ್ಕೆ ತರಲಾಗಿದ್ದು ಶಾಸಕರು ಹೆಚ್ಚುವರಿಯಾಗಿ ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಶಾಸಕರ ಅನುದಾನ ಬಿಡುಗಡೆಯಾದ ನಂತರ ಕೆಲಸ ಪೂರ್ಣಗೊಳಿಸಲಾಗುವುದು’ ಎಂದರು.

‘ಮಳೆ ಬಂದಾಗ ನಾಡ ಕಚೇರಿಯಲ್ಲಿ ಆರ್.ಸಿ.ಸಿ.ಯಿಂದ ಜಿಟಿಜಿಟಿ ನೀರು ಹನಿಯುತ್ತಿರುತ್ತದೆ. ಅದರಲ್ಲೇ ಸಿಬ್ಬಂದಿ ಟೇಬಲ್‌–ಕುರ್ಚಿಗಳನ್ನು ಆಚೀಚೆ ಜರುಗಿಸಿ ಕುಳಿತು ಕೆಲಸ ಮಾಡುತ್ತಾರೆ. ಸಂಬಂಧಪಟ್ಟವರು ನಾಡ ಕಚೇರಿಯ ಹೊಸ ಕಟ್ಟಡವನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಗ್ರಾಮಸ್ಥರು.

....

ಸದ್ಯದಲ್ಲಿಯೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೆಚ್ಚುವರಿ ಅನುದಾನ ನೀಡಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

ಗೂಳಿಹಟ್ಟಿ ಡಿ.ಶೇಖರ್, ಶಾಸಕರು, ಹೊಸದುರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT