ಶನಿವಾರ, ಮೇ 28, 2022
30 °C

ಪ್ರತಿಯೊಬ್ಬರೂ ಕಲೆ ಉಳಿಸಿ, ಬೆಳೆಸಲಿ: ಬಿ.ಧನಂಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಆದರೆ ಸೌಲಭ್ಯ ಪಡೆಯುವಲ್ಲಿ ತಾಲ್ಲೂಕಿನ ಜ‌ನರ ಸಹಭಾಗಿತ್ವ ಕಡಿಮೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಧನಂಜಯ ಬೇಸರ ವ್ಯಕ್ತಪಡಿಸಿದರು.

ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುರಸಭೆ, ವೀರಭದ್ರಸ್ವಾಮಿ ವೀರಗಾಸೆ ಸಾಂಸ್ಕೃತಿಕ ಕಲಾ ಸಂಘ, ಮಹಿಳಾ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ಕಲೆಯನ್ನು ಉಳಿಸಿ, ಬೆಳೆಸಬೇಕು. ಕಲೆ ಪ್ರದರ್ಶನದ ಸಂದರ್ಭ ಕಲೆ ಜೊತೆಗೆ ಕಲಾವಿದರ ಪರಿಚಯವೂ ಆಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹಲವು ಕಾರ್ಯಕ್ರಮಗಳಿದ್ದು, 14 ವರ್ಷದೊಳಗಿನ ಮಕ್ಕಳಿಗೆ ಅವಕಾಶ ನೀಡುವ ಉದ್ದೇಶದಿಂದ ಚಿಗುರು ಕಾರ್ಯಕ್ರಮವಿದೆ’ ಎಂದು ಅವರು ಹೇಳಿದರು.

‘30 ವರ್ಷದೊಳಗಿನ ಯುವಕರಿಗೆ ಯುವ ಸೌರಭ, ನಾಟಕ, ನೃತ್ಯ ಪ್ರದರ್ಶನಕ್ಕಾಗಿ ₹25 ಸಾವಿರ, ಜಾನಪದ ಗೀತೆಗೆ ₹15 ಸಾವಿರ, ಸುಗಮ ಸಂಗೀತಕ್ಕೆ ₹20 ಸಾವಿರ ಸೇರಿ ಹಲವು ಕಾರ್ಯಕ್ರಮಗಳಿಗೆ ಧನಸಹಾಯ ನೀಡಲಾಗುತ್ತದೆ. ಅಲ್ಲದೇ 58 ವರ್ಷ ದಾಟಿದ ಕಲಾವಿದರಿಗೆ ತಿಂಗಳಿಗೆ ₹2 ಸಾವಿರ ಮಾಸಾಶನ ನೀಡಲಾಗುತ್ತದೆ. ಜೊತೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕದ ಮುಖಾಂತರ ಪ್ರಚುರ ಪಡಿಸಲು ಕಲಾವಿದರನ್ನು ಆಯ್ಕೆ ಮಾಡಲಾಗುತ್ತದೆ’ ಎಂದು ಹೇಳಿದರು.

ವೀರಭದ್ರೇಶ್ವರ ವೀರಗಾಸೆ, ಶೆಟ್ಟಿಹಳ್ಳಿಯ ಸಾಂಸ್ಕೃತಿಕ ಕಲಾ ಸಂಘದಿಂದ ವೀರಗಾಸೆ, ಮಾರುತಿ ಯುವಕರ ಸಂಘದಿಂದ ವೀರಗಾಸೆ ಹಾಗೂ ಮಹಿಳಾ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯಿಂದ ರೂಪಕ ಪ್ರದರ್ಶಿಸಲಾಯಿತು.

ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾದ ಶಿವಣ್ಣ, ಮಹಿಳಾ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ ಅಧ್ಯಕ್ಷೆ ಸಾವಿತ್ರಮ್ಮ, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಜನ ಅಧಿಕಾರಿ ಸುಹಾಸ್ ಎಸ್. ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು