ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನ್ನ ಕುಟುಂಬದ ಒಳಿತಿಗೆ ಲಿಂಗಾಯತರ ಬಳಕೆ ನಿಲ್ಲಿಸಲಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ

Last Updated 6 ಫೆಬ್ರುವರಿ 2021, 5:58 IST
ಅಕ್ಷರ ಗಾತ್ರ

ಹಿರಿಯೂರು: ‘ವೀರಶೈವ ಲಿಂಗಾಯತ ಮುಖಂಡ ಎಂದು ಹೇಳುತ್ತಾ, ತನ್ನ ಕುಟುಂಬದ ಒಳಿತಿಗೆ ಸಮಾಜವನ್ನು ಬಳಸುವ ಷಡ್ಯಂತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ನಿಲ್ಲಿಸಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಆಗ್ರಹಿಸಿದರು.

ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದಅವರು, ‘ಎರಡು ದಿನಗಳ ಹಿಂದೆ ಸಚಿವರ ಮೂಲಕ ಪಂಚಮಸಾಲಿಗಳನ್ನು 2 ‘ಎ’ಗೆ ಸೇರಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡುವ ಭರವಸೆ ನೀಡಿದ್ದ ಸಿಎಂ ಮಾತಿಗೆ ತಪ್ಪಿದ್ದಾರೆ. ಈ ಮಾತು ಕೊಡುವ ಮೊದಲು ಮೋದಿ, ಶಾ, ನಡ್ಡಾ ಅವರ ಒಪ್ಪಿಗೆ ಪಡೆದಿದ್ದರೇ? ಕೇಂದ್ರದ ನಾಯಕರನ್ನು ವೀರಶೈವ ಲಿಂಗಾಯತರ ಮುಂದೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರವನ್ನು ಸಿಎಂ ಮಾಡಿದ್ದಾರೆ. ಯಡಿಯೂರಪ್ಪ ಜಾತಿಯ ಲಿಂಗಾಯತರು ಶೇ 2ರಷ್ಟಿಲ್ಲ. ಆದರೆ, ಪಂಚಮಸಾಲಿಯವರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂಬುದನ್ನು ನೆನಪಿನಲ್ಲಿಡಬೇಕು’ ಎಂದರು.

‘ಬಿಎಸ್‌ವೈ ಮೋಸದ ಆಟಕ್ಕೆ ನಿಂತಿದ್ದಾರೆ. ಅವರ ಅಧಿಕಾರದ ಅಂತ್ಯಕಾಲ ಸಮೀಪಿಸುತ್ತಿದೆ. ಅವರಾಗಿಯೇ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಪದಚ್ಯುತಗೊಳ್ಳಬೇಕಾಗುತ್ತದೆ. ರಾಜ್ಯದಲ್ಲಿನ ಆಡಳಿತದ ಬಗ್ಗೆ ಕೇಂದ್ರ ನಾಯಕರಿಗೆ ಸಂಪೂರ್ಣ ಮಾಹಿತಿ ಇದೆ. ಬಿಜೆಪಿ ಶಾಸಕರಿಗೂ ಅನುದಾನ ಸಿಗುತ್ತಿಲ್ಲ. ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪ ಜಗಜ್ಜಾಹೀರಾಗಿದೆ’ ಎಂದು ಆರೋಪಿಸಿದರು.

‘ಹಾಲುಮತ ಸಮಾಜದವರು, ಪಂಚಮಸಾಲಿಗಳು ಮಠಾಧೀಶರ ನೇತೃತ್ವದಲ್ಲಿ ಸಮುದಾಯದ ಒಳಿತಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ತಳವಾರ, ಮಡಿವಾಳ, ಸವಿತಾ ಸಮಾಜ ಸೇರಿ ಮೀಸಲಾತಿಯಲ್ಲಿ ಅನ್ಯಾಯವಾಗಿರುವ ಎಲ್ಲ ಸಮುದಾಯಗಳ ಬಗ್ಗೆ ಚರ್ಚಿಸಲು ಅಧಿವೇಶನದಲ್ಲಿ ಸಮಯ ಕೋರಿದ್ದೆ. ನನ್ನ ಆಗ್ರಹಕ್ಕೆ ಮಣಿದ ಸಿಎಂ ಎಲ್ಲರಿಗೂ ಆಘಾತವಾಗುವ ರೀತಿಯಲ್ಲಿ ಉತ್ತರ ನೀಡಿ ಹೊಣೆಗಾರಿಕೆಯಿಂದ ಜಾರಿಕೊಂಡಿದ್ದಾರೆ. ಕೇಂದ್ರಕ್ಕೂ ಮೀಸಲಾತಿ ವಿಷಯಕ್ಕೂ ಸಂಬಂಧವಿಲ್ಲ. ಯಡಿಯೂರಪ್ಪ ತಮ್ಮ ನಿಲುವನ್ನು ಬದಲಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ಪಾದಯಾತ್ರೆ ಬೆಂಗಳೂರು ತಲುಪುವ ವೇಳೆಗೆ ಸ್ಥಾನ ತ್ಯಾಗ ಮಾಡಬೇಕು’ ಎಂದು ಯತ್ನಾಳ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಅರವಿಂದ್ ಬೆಲ್ಲದ್, ಮಹಾಂತೇಶ್ ದೊಡ್ಡಗೌಡ, ವಿಧಾನ ಪರಿಷತ್ ಸದಸ್ಯ ಹನುಮಂತ ಆರ್. ನಿರಾಣಿ, ಮಾಜಿ ಶಾಸಕ ರವಿಕಾಂತ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT