ಶನಿವಾರ, ಮೇ 21, 2022
27 °C
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಆತ್ಮಸಾಕ್ಷಾತ್ಕಾರದ ಮುಕ್ತಿಗೆ ಬೇಡಿಕೆ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಜಾಜೂರು: ಮನುಷ್ಯ ದೇವಾಲಯಗಳಿಗೆ ಶ್ರದ್ಧಾ, ಭಕ್ತಿಯಿಂದ ಹೋಗಿ ಆತ್ಮಸಾಕ್ಷಾತ್ಕಾರದ ಮುಕ್ತಿಗಾಗಿ ಬೇಡಿಕೆ ಇಡಬೇಕೇ ಹೊರತು, ಕೇವಲ ಡಾಂಬಿಕತನದ ಪೂಜೆ ಸಲ್ಲಿಸಬಾರದು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಚಿಕ್ಕಎಮ್ಮಿಗನೂರು ಗ್ರಾಮದಲ್ಲಿ ಶನಿವಾರ ನಡೆದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಲುಷಿತವಲ್ಲದ ಧ್ಯಾನ ವ್ಯಕ್ತಿಯ ಏಳಿಗೆಗೆ ಪೂರಕವಾಗಿರುತ್ತದೆ. ಅದು ಪರಮಾತ್ಮನಿಗೂ ಪ್ರಿಯವಾಗಿರುತ್ತದೆ. ಹೊಸ ಚಪ್ಪಲಿಗಳನ್ನು ಧರಿಸಿ, ದೇವಾಲಯದ ಹೊರಗೆ ಬಿಟ್ಟು, ಒಳಗೆ ಹೋಗಿ ದೇವರಿಗೆ ನಮಸ್ಕರಿಸುವಾಗ ಬಹುತೇಕ ಭಕ್ತರ ಮನಸ್ಸು ಹೊರಗಿರುವ ಚಪ್ಪಲಿಗಳ ಬಗ್ಗೆ ಚಿಂತಿಸುತ್ತಿರುತ್ತದೆಯೇ ಹೊರತು, ದೇವರಲ್ಲಿ ಶ್ರದ್ಧೆ ಇರುವುದಿಲ್ಲ ಎಂದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ‘ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಡವರ ಪರ ಹೋರಾಟವನ್ನು ನಡೆಸಿದರು. ಅವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೀಮಿತರಾಗಿಲ್ಲ’ ಎಂದು ಹೇಳಿದರು.

‘ನಾನು ಎಲ್ಲಿಗೆ ಹೋಗಲಿ ನಮ್ಮ ತಂದೆಯವರ ಜನಪರ ಯೋಜನೆಗಳ ಸಾಧನೆಗಳು ಕುರುಹಾಗಿ ಕಾಣುತ್ತಿವೆ. ಅಂತಹವರ ಮಗನಾಗಿ ಹುಟ್ಟಿರುವುದು ನನ್ನ ಪೂರ್ವಜನ್ಮದ ಪುಣ್ಯ’ ಎಂದರು.

ಈ ಭಾಗದ ನೀರಿನ ಸಮಸ್ಯೆ ಬಗ್ಗೆ ಸಿರಿಗೆರೆಶ್ರೀಗಳು ಯಡಿಯೂರಪ್ಪ ಅವರಿಗೆ ತಿಳಿಸಿದ 24 ಗಂಟೆಯೊಳಗೆ, ನೀರಾವರಿ ಯೋಜನೆಗಳಿಗೆ ಅನುದಾನ ನೀಡಿದರು. ಇದಕ್ಕೆ ಅವರಿಗೆ ಸ್ವಾಮೀಜಿಗಳ ಬಗ್ಗೆ ಇದ್ದ ಗೌರವ ಕಾರಣ ಎಂದರು.

ಶಾಸಕ ಎಂ. ಚಂದ್ರಪ್ಪ ಮಾತನಾಡಿ, ‘ಡಿಸೆಂಬರ್‌ ವೇಳೆಗೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುವುದು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಿಕ್ಕಎಮ್ಮಿಗನೂರು ಹಾಗೂ ಶಿವಪುರ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಲು ₹ 22 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ’ ಎಂದು ಹೇಳಿದರು.

ಮಾಜಿ ಸಚಿವ ಎಚ್‌. ಆಂಜನೇಯ ಮಾತನಾಡಿ, ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಸ್ವೆಹಳ್ಳಿ ಏತ ನೀರಾವರಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳ ಮೂಲಕ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ನಂತರ, ಬಂದ ಸರ್ಕಾರ ಕೆರೆ ತುಂಬಿಸುವ ಯೋಜನೆಯಲ್ಲಿ ವಿಳಂಬ ಧೋರಣೆ ಅನುಸರಿಸಿದೆ’ ಎಂದರು.

ವಿಧಾನಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌,  ಪತ್ರಕರ್ತ ರಂಗನಾಥ್ ಭಾರದ್ವಾಜ್‌ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ್‌ ಸ್ವಾಗತಿಸಿದರು. ರಾಧಿಕಾ ರಂಗನಾಥ್‌ ಭಾರದ್ವಾಜ್‌, ಮುಖಂಡರಾದ ಪಿ.ಆರ್‌. ಶಿವಕುಮಾರ್‌, ಭಾರತಿ ಕಲ್ಲೇಶ್‌, ಎಂ.ಬಿ. ತಿಪ್ಪೇಸ್ವಾಮಿ, ಎಂ.ಜಿ. ಲೋಹಿತ್‌ಕುಮಾರ್‌, ಷಣ್ಮುಖಪ್ಪ, ತಿಪ್ಪೇಸ್ವಾಮಿ, ಗಿರೀಶ್‌, ಇಂದ್ರಪ್ಪ ಗೌಡ್ರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಣಮ್ಮ, ಮಾಜಿ ಅಧ್ಯಕ್ಷ ಗಿರೀಶ್‌, ಗ್ರಾಮಸ್ಥರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.