ಸೋಮವಾರ, ಮಾರ್ಚ್ 8, 2021
31 °C
ಮಡಿವಾಳ ಮಾಚಿದೇವ ಜಯಂತಿಯಲ್ಲಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅಭಿಮತ

ಅಸಮಾನತೆ ತೊಲಗಿಸುವ ಪ್ರಯತ್ನ ನಿರಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ತೊಲಗಿಸುವ ಸಂಘಟಿತ ಪ್ರಯತ್ನ ಹಾಗೂ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಸಾಮಾಜಿಕ ನ್ಯಾಯದ ಪರ ಮಡಿವಾಳ ಮಾಚಿದೇವರು 12ನೇ ಶತಮಾನದಲ್ಲಿಯೇ ಧ್ವನಿ ಎತ್ತಿದ್ದರು ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ ಶುಕ್ರವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ವಚನ ಚಳವಳಿಯಲ್ಲಿ ಬಸವಣ್ಣ ಅವರಿಗೆ ಮಾಚಿದೇವರು ಹೆಗಲಾದರು. ಸಮಾಜ ಸುಧಾರಣೆಗೆ ಶಕ್ತಿಮೀರಿ ಪ್ರಯತ್ನಿಸಿದರು. ಅಸಮಾನತೆಯನ್ನು ತೊಲಗಿಸಲು ಈಗಲೂ ಸರ್ಕಾರ ಪ್ರಯತ್ನಿಸುತ್ತಿದೆ. ಕಾನೂನುಗಳನ್ನು ಜಾರಿಗೆ ತಂದರೂ ಮೇಲು–ಕೀಳು ಎಂಬ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಡಿವಾಳರ ಕುಟುಂಬಗಳು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರತಿ ಹಳ್ಳಿಯಲ್ಲಿಯೂ ಇವೆ. ಇದೊಂದು ಸಣ್ಣ ಸಮುದಾಯವೆಂದು ನಿರ್ಲಕ್ಷ್ಯ ಮಾಡುವುದು ತಪ್ಪು. ರಾಜಕೀಯ ಪಕ್ಷಗಳು ಈ ಸಮುದಾಯವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಅಸಂಘಟಿತ ಜಾತಿಗಳ ಕಣ್ಣು ತೆರೆಸುವ ಕೆಲಸ ಮಾಡಿದ ಮೊದಲಿಗರು ದೇವರಾಜ ಅರಸು. ರಾಜಕೀಯ ಧ್ರುವೀಕರಣವಾಗುತ್ತಿದ್ದ ಕಾಲದಲ್ಲಿಯೂ ಸಣ್ಣ ಜಾತಿಗಳಿಗೆ ಪ್ರಾತಿನಿದ್ಯ ಕಲ್ಪಿಸಿದರು. ವೀರಪ್ಪ ಮೊಯಿಲಿ ಅವರು ರಾಷ್ಟ್ರೀಯ ನಾಯಕರಾಗಿ ಬೆಳೆಯಲು ಅರಸು ಅವರೇ ಕಾರಣ. ಹಿಂದುಳಿದ ವರ್ಗಗಳ ಕಣ್ಣು ತೆರೆಸುವ ಮತ್ತೊಬ್ಬ ನಾಯಕನ ಅಗತ್ಯವಿದೆ’ ಎಂದರು.

ಪ್ರಾಧ್ಯಾಪಕ ಡಾ.ವಿ.ಬಸವರಾಜ್‌ ಮಾತನಾಡಿ, ‘ವಚನ ಸಾಹಿತ್ಯ ಉಳಿಸುವಲ್ಲಿ ಮಾಚಿದೇವರ ಪಾತ್ರ ದೊಡ್ಡದು. ವಚನ ಸಾಹಿತ್ಯ ಉಳಿದಿರುವುದೇ ಮಾಚಿದೇವರ ಶ್ರಮದಿಂದ. ಇಲ್ಲವಾದರೆ, 12ನೇ ಶತಮಾನದಲ್ಲಿ ನಡೆದ ಬಹುದೊಡ್ಡ ಸಾಹಿತ್ಯ ಚಳವಳಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದರು.

‘ಶಿವಭಕ್ತ ಕುಟುಂಬದಲ್ಲಿ ಜನಿಸಿದ ಮಾಚಿದೇವರು ಶಾಸ್ತ್ರ ಹಾಗೂ ಶಸ್ತ್ರ ವಿದ್ಯೆಪಾರಂಗತರಾಗಿದ್ದರು. ಮೂಡನಂಬಿಕೆ ಹೋಗಲಾಡಿಸಲು ಪ್ರಯತ್ನಿಸಿದ್ದರು. ಅಕ್ರಮ ಮಾರ್ಗದಲ್ಲಿ ತೊಡಗಿಸಿಕೊಂಡವರ ಬಟ್ಟೆಯನ್ನು ಅವರು ಮಡಿಮಾಡಿ ಕೊಡುತ್ತಿರಲಿಲ್ಲ. ಇದು ಬಸವಣ್ಣ ಅವರ ಗಮನ ಸೆಳೆಯಿತು’ ಎಂದು ವಿವರಿಸಿದರು.

‘ಮಹಾಮನೆ ಸೇರಿದ ಬಳಿಕ ವಚನ ರಚನೆಯಲ್ಲಿ ತೊಡಗಿದರು. ಅಪಾರ ವಿದ್ವತ್ತು ಹೊಂದಿದ್ದರೂ, ಕಾಯಕವನ್ನು ಮಾತ್ರ ಬಿಡಲಿಲ್ಲ. ಅನೀತಿಯಿಂದ ಕೂಡಿದ ಸಮಾಜದ ಮೇಲೆ ಸಾಹಿತ್ಯದ ಮೂಲಕ ಬೆಳಕು ಚೆಲ್ಲಲು ಮಾಚಿದೇವರು ಪ್ರಯತ್ನಿಸಿದರು’ ಎಂದರು.

‘ಬಟ್ಟೆ ತೊಳೆದು ಸಮಾಜವನ್ನು ಶುಭ್ರವಾಗಿ ಇಡುವ ಮಡಿವಾಳರ ಬದುಕು ದುರ್ಬರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈಗಲೂ ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಮನೆಯ ಅಂಗಳದ ಹೊರಗೆ ನಿಲ್ಲಿಸುವ ಪದ್ಧತಿ ಇನ್ನೂ ಜೀವಂತವಾಗಿದೆ. ದೇಗುಲಗಳಿಗೂ ಪ್ರವೇಶ ನೀಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇಶದ 18 ರಾಜ್ಯ ಹಾಗೂ 5 ಕೇಂದ್ರಾಡಳಿತ ಪ್ರದೇಶದಲ್ಲಿ ಮಡಿವಾಳರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿದೆ. ರಾಜ್ಯದಲ್ಲಿ 18 ಲಕ್ಷ ಮಡಿವಾಳರು ಇದ್ದಾರೆ. ಮೀಸಲಾತಿಯಲ್ಲಿ ಪ್ರವರ್ಗ 1ರ ಸೌಲಭ್ಯವಾದರೂ ಸಿಗಬೇಕಿದೆ. ರಾಜಕಾರಣಿಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ’ ಎಂದು ನುಡಿದರು.

ಕಾರ್ಯಕ್ರಮಕ್ಕೂ ಮುನ್ನ ನೀಲಕಂಠೇಶ್ವರ ದೇಗುಲದಿಂದ ತರಾಸು ರಂಗಮಂದಿರದವರೆಗೆ ಮೆರವಣಿಗೆ ನಡೆಯಿತು. ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಸಾಂಸ್ಕೃತಿಕ ಕಲಾತಂಡಗಳೊಂದಿಗೆ ನೂರಾರು ಜನ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್‌, ತಹಶೀಲ್ದಾರ್‌ ಕಾಂತರಾಜ್‌, ನಗರಸಭೆ ಆಯುಕ್ತ ಸಿ.ಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಟಿ.ರಮೇಶ್‌, ಟಿ.ಚಿದಾನಂದಪ್ಪ, ನಗರಸಭೆ ಸದಸ್ಯೆ ಅನಿತಾ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.