ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪದಿರಲಿ ಸಹಕಾರ ಸಂಘದ ಲೆಕ್ಕಪತ್ರ

ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ದ್ಯಾಮಣ್ಣ ಕೋಗುಂಡೆ ಸಲಹೆ
Last Updated 15 ನವೆಂಬರ್ 2022, 4:27 IST
ಅಕ್ಷರ ಗಾತ್ರ

ಚಿತ್ರದುರ್ಗ:‘ಸಹಕಾರ ಸಂಘದಲ್ಲಿ ಲೆಕ್ಕಪತ್ರ ಸರಿಯಾದ ರೀತಿ ಇರಬೇಕು. ಆಗ ಮಾತ್ರ ಪಾರದರ್ಶಕ ಆಡಳಿತ ನೀಡಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ಎಚ್‌.ಎಂ. ದ್ಯಾಮಣ್ಣ ಕೋಗುಂಡೆ ತಿಳಿಸಿದರು.

ಇಲ್ಲಿನ ಜಿಲ್ಲಾ ಸಹಕಾರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಅಖಿಲ ಭಾರತ ಸಹಕಾರ ಸಪ್ತಾಹದ ‘ವ್ಯಾಪಾರ ಸರಳೀಕರಣ ರಫ್ತು ವೃದ್ಧಿಗಾಗಿ ಜೆಮ್-ಪೋರ್ಟಲ್‌ ಬಳಕೆ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ಲೆಕ್ಕಪತ್ರ ನಿರ್ವಹಣೆಯಲ್ಲಿ ಲೋಪಗಳು ಕಂಡುಬಂದರೆ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ವಿಚಾರದಲ್ಲಿ ಹೆಚ್ಚಿನ ಕಾಳಜಿವಹಿಸಬೇಕು. ಆಗ ಮಾತ್ರ ಸಹಕಾರ ಸಂಘ ಉತ್ತಮವಾಗಿ ನಡೆಯಲು ಸಾಧ್ಯ’ ಎಂದರು.

‘ಸಹಕಾರಿಗಳಿಗೆ ಶಿಕ್ಷಣ ನೀಡುವುದು ಜಿಲ್ಲಾ ಯೂನಿಯನ್‌ ಕರ್ತವ್ಯವಾಗಿದೆ. ಸಹಕಾರಕ್ಕೆ ಸಂಬಂಧಿಸಿದ ಕಾನೂನು, ತಿದ್ದುಪಡಿಗಳನ್ನು ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ತಿಳಿಸುವ ಕೆಲಸವನ್ನು ಸಹ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಸಹಕಾರ ಸಪ್ತಾಹ ಎಂದರೆ ಎಲ್ಲಾ ಸಹಕಾರಿಗಳಿಗೆ ಹಬ್ಬ ಇದ್ದಂತೆ. ಇಲ್ಲಿ ಹಬ್ಬದ ವಾತಾವರಣ ಮೂಡಬೇಕಿದೆ. ಚಿತ್ರದುರ್ಗದ ಸಹಕಾರ ಸಂಘಗಳು ಅಭಿವೃದ್ಧಿಯತ್ತ ಸಾಧಿಸುತ್ತಿವೆ. ಇದು ಹೀಗೆ ಮುಂದುವರೆಯಲಿದೆ’ ಎಂದು ಆಶಿಸಿದರು.

‘ಗಾಂಧೀಜಿ ಮತ್ತು ನೆಹರೂ ಅವರು ಸಹಕಾರದಿಂದ ಮಾತ್ರ ಪ್ರಗತಿ ಸಾಧ್ಯ ಎಂದು ನಂಬಿದ್ದರು. ಈ ಮಾತಿನಂತೆ ನಾವು ನಡೆದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ.ಸಂಘದ ವ್ಯವಹಾರವನ್ನು ಸಾಧ್ಯವಾದಷ್ಟು ಡಿಜಿಟಲ್‌ ಸ್ವರೂಪಕ್ಕೆ ಪರಿವರ್ತಿಸಬೇಕು. ಇದು ಲೆಕ್ಕಪತ್ರ, ಹಣಕಾಸು ನಿರ್ವಹಣೆಗೆ ಹೆಚ್ಚಿನ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ಸಹಕಾರ ಸಂಘಗಳ ಲೆಕ್ಕ ಪರಿಶೋಧಕ ಇಲಾಖೆ ಉಪನಿರ್ದೇಶಕ ಮಹಮ್ಮದ್‌ ಅಬೀಬ್‌ ಹುಸೇನ್‌ ಮಾತನಾಡಿ, ‘ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹಕಾರ ಸಂಘಗಳಿಂದ ಮಾತ್ರ ಸಾಧ್ಯ. ಇತ್ತೀಚಿನ ದಿನದಲ್ಲಿ ಸಹಕಾರ ಸಂಘಗಳ ಬೆಳವಣಿಗೆ ಕಡಿಮೆಯಾಗಿದೆ. ಸಂಘಗಳಲ್ಲಿ ಲೆಕ್ಕ ಪರಿಶೋಧನೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಲೆಕ್ಕ ಸರಿ ಇದ್ದರೆ ಸಹಕಾರ ಸಂಘ ಲಾಭ ಅಥವಾ ನಷ್ಟದಲ್ಲಿದೆ ಎಂದು ತಿಳಿಯಲು ಸಾಧ್ಯವಾಗುತ್ತದೆ’ ಎಂದರು.

‘ದೇಶದ ಜನಸಂಖ್ಯೆಯಲ್ಲಿ ಶೇ 30ರಷ್ಟು ಮಾತ್ರ ಸಹಕಾರ ಕ್ಷೇತ್ರದಲ್ಲಿದ್ದಾರೆ. ಉಳಿದವರು ಇದರ ಸಂಪರ್ಕಕ್ಕೆ ಬರುತ್ತಿಲ್ಲ. ಯುವ ಸಮುದಾಯಕ್ಕೆ ಸಹಕಾರ ಎಂದರೆ ತಿಳಿದಿಲ್ಲ. ಎಲ್ಲರೂ ಈ ಕ್ಷೇತ್ರಕ್ಕೆ ಕಾಲಿಟ್ಟಾಗ ಮಾತ್ರ ಉತ್ತಮ ಫಲಿತಾಂಶ ಬರಲು ಸಾಧ್ಯ’ ಎಂದು ಸಹಕಾರ ಸಂಘಗಳ ಉಪ ನಿಬಂಧಕ ಎಚ್‌.ಮೂರ್ತಿ ತಿಳಿಸಿದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಧು ಶ್ರೀನಿವಾಸ್‌, ಯೂನಿ ಯನ್‌ ನಿರ್ದೇಶಕರಾದ ರಾಮರೆಡ್ಡಿ, ಎಸ್‌.ಆರ್‌.ಗಿರೀಶ್‌, ಶಿವಪ್ರಕಾಶ್‌, ಜಿಂಕಲ್‌ ಬಸವರಾಜು, ಟಿಎಪಿಸಿಎಂಎಸ್‌ ಅಧ್ಯಕ್ಷ ಮಂಜುನಾಥಪ್ಪ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ರವಿಕುಮಾರ್‌, ಸಿಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‌ ಉಲ್ಲಾ ಷರೀಫ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT