ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಣ್ಣಿನಲ್ಲಿ ಜಿಪ್ಸಂ ಬೆರೆಸಿದರೆ ಹೆಚ್ಚು ಇಳುವರಿ’

ಅಮೃತ್ ಆರ್ಗ್ಯಾನಿಕ್ಸ್ ಫರ್ಟಿಲೈಸರ್ಸ್ ಕಾರ್ಖಾನೆಯ ಎಂಡಿ ಕೆ.ನಾಗರಾಜ್ ರೈತರಿಗೆ ಸಲಹೆ
Last Updated 19 ಡಿಸೆಂಬರ್ 2020, 3:32 IST
ಅಕ್ಷರ ಗಾತ್ರ

ಹೊಳಲ್ಕೆರೆ: ಅಗತ್ಯ ಪೋಷಕಾಂಶಗಳು ಬೆಳೆಗಳಿಗೆ ಸಿಗುವಂತಾಗಲು ಮಣ್ಣಿನಲ್ಲಿ ಜಿಪ್ಸಂ ಬೆರೆಸಬೇಕು ಎಂದು ಅಮೃತ್ ಆರ್ಗ್ಯಾನಿಕ್ಸ್ ಫರ್ಟಿಲೈಜರ್ಸ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಕೆ.ನಾಗರಾಜ್ ರೈತರಿಗೆ ಸಲಹೆ ನೀಡಿದರು.

ತಾಲ್ಲೂಕಿನ ಮಲ್ಲಾಡಿಹಳ್ಳಿ ಯಲ್ಲಿರುವ ಅಮೃತ್ ಸಾವಯವ ಗೊಬ್ಬರ ಕಾರ್ಖಾನೆಗೆ ಭೇಟಿ ನೀಡಿದ ಹೊಸದುರ್ಗ ತಾಲ್ಲೂಕಿನ ದೇವಿಗೆರೆಯ ರೈತ ಉತ್ಪಾದಕ ಸಂಸ್ಥೆಯ ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರೈತರು ಮಣ್ಣು ಪರೀಕ್ಷೆ ಮಾಡಿಸುವುದರಿಂದ ಮಣ್ಣಿನಲ್ಲಿ ಹೆಚ್ಚಾಗಿರುವ, ಕೊರತೆ ಆಗಿರುವ ಅಂಶಗಳನ್ನು ತಿಳಿಯಬಹುದು. ಇದರಿಂದ ಮಣ್ಣಿಗೆ ಅಗತ್ಯ ಪೋಷಕಾಂಶಗಳನ್ನು ಒಳಗೊಂಡ ಗೊಬ್ಬರ ಕೊಡಬಹುದು. ರೈತರು ಮಣ್ಣು ಪರೀಕ್ಷೆ ನಡೆಸದೆ ಅಂದಾಜಿಗೆ ಗೊಬ್ಬರ ಹಾಕುವುದರಿಂದ ಬೆಳೆಗೆ ಅಗತ್ಯ ಪೋಷಕಾಂಶಗಳು ಸಿಗವುದಿಲ್ಲ. ಮನುಷ್ಯರಂತೆಯೇ ಸಸ್ಯಗಳೂ ಸಮತೋಲನ ಪೋಷಕಾಂಶ ಬಯಸುತ್ತವೆ. ಅಗತ್ಯಕ್ಕಿಂತ ಹೆಚ್ಚು ಪೋಷಕಾಂಶ ಕೊಟ್ಟರೆ ವ್ಯರ್ಥವಾಗುತ್ತದೆ’ ಎಂದು ಹೇಳಿದರು.

ಒಂದು ಅಡಿಕೆ ಮರಕ್ಕೆ ನಾಲ್ಕು ಪುಟ್ಟಿ ತಿಪ್ಪೆ ಗೊಬ್ಬರ ಹಾಕುವುದಕ್ಕಿಂತ ಪೋಷಕಾಂಶ ಮಿಶ್ರಿತವಾದ ಒಂದು
ಕೆ.ಜಿ ಸಾವಯವ ಗೊಬ್ಬರ ಹಾಕುವುದರಿಂದ ಹೆಚ್ಚು ಇಳುವರಿ ಪಡೆಯಬಹುದು. ಎರಡು ಸೇರು ಮಂಡಕ್ಕಿ ತಿನ್ನುವುದಕ್ಕೂ, ಉಪ್ಪು, ಕಾರ, ಹುಳಿ, ಒಗ್ಗರಣೆ ಹಾಕಿದ ಒಂದು ಪ್ಲೇಟ್ ಮಂಡಕ್ಕಿ ತಿನ್ನುವುದಕ್ಕೂ ವ್ಯತ್ಯಾಸ ಇದೆ’ ಎಂದರು.

‘ಮಣ್ಣಿನ ರಸಸಾರವು 7.5ಕ್ಕಿಂತ ಅಧಿಕವಾಗಿದ್ದರೆ ಅದನ್ನು ಕ್ಷಾರಿಯ ಮಣ್ಣು ಎಂದು ಕರೆಯಲಾಗುತ್ತದೆ. ಇದರಿಂದ ಮಣ್ಣು ಹೆಪ್ಪುಗಟ್ಟಿದಂತಾಗಿ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಜಿಪ್ಸಂ ಬಳಸುವುದರಿಂದ ಮಣ್ಣನ್ನು ತಟಸ್ಥಗೊಳಿಸಬಹುದು. ಕೃಷಿ ಬೆಳೆಗಳಿದ್ದರೆ ಎಕರೆಗೆ 2ರಿಂದ 3 ಕ್ವಿಂಟಲ್, ತೋಟಗಾರಿಕೆ ಬೆಳೆಗಳಾದರೆ ಗಿಡಕ್ಕೆ 500 ಗ್ರಾಂ.ನಿಂದ 1 ಕೆ.ಜಿ. ಜಿಪ್ಸಂ ಕೊಡಬೇಕಾಗುತ್ತದೆ’ ಎಂದು ಸಂಸ್ಥೆಯ ಮುಖ್ಯ ಮಣ್ಣು ಮತ್ತು ನೀರು ಪರೀಕ್ಷಾ ಘಟಕದ ಅಧಿಕಾರಿ ಜ್ಯೋತಿ ಮಾಹಿತಿ ನೀಡಿದರು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿಲಾಷ್‌, ತಾಂತ್ರಿಕ ಅಧಿಕಾರಿ ಎಂ.ಶರ್ಮ, ಸತೀಶ್ ಹೆಗ್ಗಡೆ, ನಿಸರ್ಗ ರೈತ ಉತ್ಪಾದಕ ಸಂಸ್ಥೆಯ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಸ್ಮಿತಾ ಡಿಸೋಜಾ, ಅಧ್ಯಕ್ಷೆ ಭಾರತಿ, ದೇವಿಗೆರೆ ಎಫ್.ಪಿ.ಒ.ದಯಾನಂದ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT