ದಾವಣಗೆರೆ: ಇಲ್ಲಿನ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕರಾದ ಮಲ್ಲಿಕಾರ್ಜುನ ಕಡಕೋಳ ಇದನ್ನು ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸುವ ಕನಸು ಕಂಡಿದ್ದಾರೆ. ಹೊಸ ಯೋಜನೆ, ಕಾರ್ಯಚಟುವಟಿಕೆಗಳೊಂದಿಗೆ ರಂಗಾಸಕ್ತರ ಮುಂದೆ ಬಂದಿದ್ದಾರೆ.
ಮೂಲತಃ ಕಲಬುರಗಿ ಜಿಲ್ಲೆಯವರಾದ ಇವರ ರಂಗಭೂಮಿಯ ಕಾರ್ಯಕ್ಷೇತ್ರ ದಾವಣಗೆರೆ. ನಾಟಕಕಾರಾಗಿ, ಲೇಖಕರಾಗಿ ಪರಿಚಿತರಾದ ಮಲ್ಲಿಕಾರ್ಜುನ, ವೃತ್ತಿ ರಂಗಭೂಮಿ ರಂಗಾಯಣ ಸ್ಥಾಪನೆಗೆ ಶ್ರಮಿಸಿದವರು. 2018ರಲ್ಲಿ ಆರಂಭವಾದ ಈ ರೆಪರ್ಟರಿಗೆ ಇವರು ಎರಡನೇ ನಿರ್ದೇಶಕ. ಹೊಸ ಜವಾಬ್ದಾರಿಯ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
* ಆರೋಗ್ಯ ಇಲಾಖೆಯ ನೌಕರರಾಗಿದ್ದ ನಿಮ್ಮನ್ನು ರಂಗಭೂಮಿ ಸೆಳೆದದ್ದು ಹೇಗೆ?
ದೊಡ್ಡಾಟದ ಮೇಲಿನ ಸೆಳೆತ ಚಿಕ್ಕಂದಿನಲ್ಲಿ ಹೆಚ್ಚಾಗಿತ್ತು. ತಂದೆ, ಚಿಕ್ಕಪ್ಪ ಎಲ್ಲರೂ ದೊಡ್ಡಾಟದ ಕಲಾವಿದರಾಗಿದ್ದರು. ಪ್ರತಿ ವರ್ಷ ಊರಿನಲ್ಲಿ ದೊಡ್ಡಾಟ ನಡೆಯುತ್ತಿತ್ತು. ಅದರಲ್ಲಿನ ಚಿಕ್ಕ ಪಾತ್ರಗಳು ನನಗೆ ಒಲಿದು ಬರುತ್ತಿದ್ದವು. ತಂದೆ ಹಾಡುತ್ತಿದ್ದ ತತ್ವಪದಗಳನ್ನು ನಾಟಕಗಳಲ್ಲಿ ಕಾಣುತ್ತಿದ್ದೆ. ರಂಗಭೂಮಿಯ ಜೊತೆಗಿನ ಒಡನಾಟ ಜೀವನದೊಂದಿಗೆ ಬೆರೆತು ಹೋಯಿತು.
* ವೃತ್ತಿ ರಂಗಭೂಮಿಗೆ ಮೀಸಲಾಗಿರುವ ರಂಗಾಯಣದ ಸಾರಥಿ ಆಗಬೇಕು ಎಂಬ ಕನಸು ನಿಮಗೆ ಇತ್ತೇ?
ರಂಗಾಯಣ ಮಾದರಿಯ ಕೇಂದ್ರವೊಂದು ವೃತ್ತಿ ರಂಗಭೂಮಿಗೂ ಬೇಕು ಎಂಬ ಭಾವನೆ 40 ವರ್ಷಗಳ ಹಿಂದೆಯೇ ಮೂಡಿತ್ತು. ಆಧುನಿಕ ರಂಗಭೂಮಿಯಂತೆ ವೃತ್ತಿ ರಂಗಭೂಮಿಗೂ ಪ್ರತ್ಯೇಕ ರೆಪರ್ಟರಿ ಅಗತ್ಯವಿದೆ ಎಂಬ ಕನಸು ಕಂಡಿದ್ದೆ. ವೃತ್ತಿ ರಂಗಭೂಮಿಯ ಬಹುದೊಡ್ಡ ಪರಂಪರೆ ಉಳಿಸುವ ತುಡಿತ ರಂಗಾಯಣ ಸಾರಥ್ಯ ವಹಿಸುವ ಅವಕಾಶವನ್ನು ಕಲ್ಪಿಸಿತು.
* ಪ್ರಸಕ್ತ ಕಾಲಘಟ್ಟದಲ್ಲಿ ವೃತ್ತಿ ರಂಗಭೂಮಿಯ ಅಗತ್ಯ ಏನಿದೆ?
ವೃತ್ತಿ ರಂಗಭೂಮಿ ಮನೋರಂಜನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಒಂದೂವರೆ ಶತಮಾನದ ಹಿಂದೆ ಆರಂಭವಾದ ಈ ಕಲಾ ಪ್ರಕಾರ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಖಾದಿ ಚಳವಳಿ, ಅವಿಭಜಿತ ಕುಟುಂಬದ ಪ್ರೀತಿಯನ್ನು ಹೆಚ್ಚಿಸಿದ ಕೀರ್ತಿ ಕಂಪೆನಿ ನಾಟಕಗಳಿಗೆ ಸಲ್ಲಬೇಕು. ನಾಟ್ಯ, ಸಂಗೀತ ಮತ್ತು ಸಾಹಿತ್ಯವನ್ನು ಜನಸಂಸ್ಕೃತಿಯ ಭಾಗವಾಗಿ ರೂಪಿಸಿದ ವೃತ್ತಿ ರಂಗಭೂಮಿಯ ಕೊಡುಗೆಗಳನ್ನು ಸ್ಮರಿಸಬೇಕಿದೆ.
* ವೃತ್ತಿ ರಂಗಭೂಮಿಯ ರೆಪರ್ಟರಿ ಶುರುವಾಗಿ ಆರು ವರ್ಷ ಕಳೆದಿದೆ. ಇದರ ಕೈರ್ಯವೈಖರಿಗೆ ಬಗ್ಗೆ ಜನರಿಗೆ ತೃಪ್ತಿ ಇಲ್ಲ. ಜನರ ವಿಶ್ವಾಸಗಳಿಸುವ ಪ್ರಯತ್ನಗಳು ಏನಾದರೂ ಇವೆಯೇ?
ಆರಂಭದಲ್ಲಿ ಇದೊಂದು ಅಧ್ಯಯನ ಕೇಂದ್ರವಾಗಿತ್ತು. ಇದನ್ನು ರೆಪರ್ಟರಿಯಾಗಿ ಮುನ್ನೆಲೆಗೆ ತರುವ ಪ್ರಯತ್ನ ಆರಂಭವಾಗಿ ಬಹುದಿನ ಕಳೆದಿಲ್ಲ. ಮೊದಲು ರಂಗಪರಿಸರ ನಿರ್ಮಾಣ ಮಾಡಬೇಕಿದೆ. ಸಂಗೀತ ಮತ್ತು ನಾಟ್ಯ ಪರಂಪರೆಯ ಮೂಲಕ ಶಾಲೆ–ಕಾಲೇಜುಗಳನ್ನು ತಲುಪಲು ಪ್ರಯತ್ನಿಸುವೆ. ಕಾಲದ ಅಗತ್ಯಗಳಿಗೆ ಸ್ಪಂದಿಸುವ ನಾಟಕ ರೂಪಿಸುವ, ರಾಜ್ಯದ ವಿವಿಧೆಡೆ ಶಿಬಿರಗಳನ್ನು ಆಯೋಜಿಸುವ ಮೂಲಕ ರೆಪರ್ಟರಿಯನ್ನು ಮುನ್ನೆಲೆಗೆ ತರುವೆ.
* ವೃತ್ತಿ ರಂಗಭೂಮಿಯ ವೈಭವದ ಕಾಲವನ್ನು ದಾವಣಗೆರೆ ಕಂಡಿದೆ. ಈ ರೆಪರ್ಟರಿಯ ಮೂಲಕ ಇಂತಹ ವೈಭವ ಮತ್ತೆ ಮರಕಳುಹಿಸಲು ಸಾಧ್ಯವೆ?
ಕಾಲದ ಅಗತ್ಯಗಳು ಬದಲಾಗಿವೆ. ಜನರ ಬೆರಳ ತುದಿಯಲ್ಲಿ ಮಲ್ಟಿಮಿಡಿಯಾ ಲಭ್ಯವಾಗಿದೆ. ಹಳೆಯ ಗತವೈಭವ ಮರುಕಳುಹಿಸಬೇಕು ಎಂದು ಹಂಬಲಿಸಿದರೆ ತಪ್ಪಾಗುತ್ತದೆ. ಕಂಪೆನಿ ನಾಟಕಗಳನ್ನು ಇಂದಿನ ಕಾಲಘಟ್ಟದಲ್ಲಿ ಹೇಗೆ ಮರುರೂಪಿಸಬಹುದು ಎಂಬ ಸವಾಲು ಇದೆ. ಮುಂದಿನ ತಲೆಮಾರಿಗೆ ವೃತ್ತಿ ರಂಗಭೂಮಿ ಉಳಿಯಬೇಕಿದೆ.
* ಮನೋರಂಜನೆಯ ಆಯಾಮಗಳು ಬದಲಾಗಿವೆ. ಇಂತಹ ಸಂದರ್ಭದಲ್ಲಿ ಯುವ ತಲೆಮಾರನ್ನು ರಂಗಭೂಮಿಯತ್ತ ತರಲು ಸಾಧ್ಯವೇ?
ಆಧುನಿಕ ಮನೋರಂಜನೆಯ ಮಾಧ್ಯಮಗಳು ಯುವ ಸಮೂಹದಲ್ಲಿ ಸಿನಿಕತನ ಮೂಡಿಸಿವೆ. ಹಿರಿತೆರೆ, ಕಿರಿತೆರೆಯ ಮೇಲೆ ಗೊಂಬೆಗಳನ್ನು ನೋಡಿ ಜನರಿಗೆ ಸಾಕಾಗಿದೆ. ಇದರಿಂದ ಬೇಸತ್ತು ರಂಗಭೂಮಿಯತ್ತ ಬರುವವರ ಸಂಖ್ಯೆ ಹೆಚ್ಚಾಗಿದೆ. ಎಂಜಿನಿಯರ್, ಆಟೊ ಚಾಲಕ ಹೀಗೆ ಭಿನ್ನ ವೃತ್ತಿಯವರು ರಂಗಭೂಮಿತ್ತ ಒಲವು ಬೆಳೆಸಿಕೊಳ್ಳುತ್ತಿದ್ದಾರೆ.
* ವೃತ್ತಿ ರಂಗಾಯಣ ಅಭಿವೃದ್ಧಿಪಡಿಸಲು ನಿಮ್ಮ ಯೋಜನೆಗಳೇನು?
- ರಾಜ್ಯದ ಇತರ ರೆಪರ್ಟರಿಗಳು ಮೈಸೂರು ರಂಗಾಯಣದ ಮಾದರಿ ಅನುಸರಿಸುತ್ತವೆ. ವೃತ್ತಿ ರಂಗಭೂಮಿ ರಂಗಾಯಣ ಹೊಸ ಮಾದರಿಯನ್ನು ರೂಪಿಸಿಕೊಳ್ಳಬೇಕಿದೆ. ಕಂಪನಿ ಶೈಲಿ ಉಳಿಸಿಕೊಂಡು ಮರುರೂಪಿಸುವ ಸವಾಲು ನನ್ನೆದುರು ಇದೆ. ಸಂಗೀತ ಪ್ರಧಾನ ಪೌರಾಣಿಕ ಹಾಗೂ ಕೌಟುಂಬಿಕ ಹಿನ್ನೆಲೆಯ ನಾಟಕಗಳಿಗೆ ಒತ್ತು ನೀಡಲಾಗುತ್ತದೆ. ಕೊಂಡಜ್ಜಿಯಲ್ಲಿ ಸರ್ಕಾರ ನೀಡಿದ ಹತ್ತು ಎಕರೆ ಭೂಮಿಯಲ್ಲಿ ರಂಗಾಯಣ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ವೃತ್ತಿ ರಂಗಭೂಮಿಯ ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸುವ ಕನಸು ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.