ಗುರುವಾರ , ಮೇ 26, 2022
22 °C
ದಂಪತಿ ಬಂಧಿಸಿದ ಗ್ರಾಮಾಂತರ ಠಾಣೆಯ ಪೊಲೀಸರು

ನಾಯಿ ವಿಚಾರಕ್ಕೆ ಗಲಾಟೆ: ಯುವಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ತಾಲ್ಲೂಕಿನ ಜಾಲಿಕಟ್ಟೆ ಗ್ರಾಮದಲ್ಲಿ ಸಾಕು ನಾಯಿ ಮಲವಿಸರ್ಜನೆಗೆ ಸಂಬಂಧಿಸಿದಂತೆ ನೆರೆಹೊರೆಯವರ ನಡುವೆ ನಡೆದ ಗಲಾಟೆ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ದಂಪತಿಯನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಜಾಲಿಕಟ್ಟೆ ಗ್ರಾಮದ ಮಹಾಂತೇಶ್‌ (23) ಕೊಲೆಯಾದ ವ್ಯಕ್ತಿ. ಸ್ವಾಮಿ (35) ಹಾಗೂ ಇವರ ಪತ್ನಿ ಕಮಲಮ್ಮ (30) ಬಂಧಿತರು.

ಮಹಾಂತೇಶ್‌ ಹಾಗೂ ಸ್ವಾಮಿ ನೆರೆಹೊರೆ ಮನೆಯ ನಿವಾಸಿಗಳು. ಚಿಪ್ಸ್‌ ಮಾರಾಟ ಮಾಡಿ ಮಹಾಂತೇಶ್‌ ಬದುಕು ಕಟ್ಟಿಕೊಂಡಿದ್ದರು. ಸ್ವಾಮಿ ಪೇಂಟರ್‌ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಸ್ವಾಮಿ ಎರಡು ನಾಯಿಗಳನ್ನು ಸಾಕಿದ್ದರು. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಇವನ್ನು ಹೊರಗೆ ಕರೆತಂದು ಮಲವಿಸರ್ಜನೆ ಮಾಡಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳವಾರ ಸಂಜೆ ಸ್ವಾಮಿ ನಾಯಿಯನ್ನು ಮನೆಯಿಂದ ಹೊರಗೆ ಕರೆತಂದಿದ್ದರು. ಮಹಾಂತೇಶ್‌ ಅವರ ಮನೆಯ ಸಮೀಪದಲ್ಲಿ ಮಲವಿಸರ್ಜನೆ ಮಾಡಿಸುತ್ತಿದ್ದರು. ಇದಕ್ಕೆ ಮಹಾಂತೇಶ್‌ ಕುಟುಂಬದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಕಮಲಮ್ಮ ಕೂಡ ಪತಿಯ ಪರವಾಗಿ ಗಲಾಟೆಯಲ್ಲಿ ತೊಡಗಿದ್ದಾರೆ. ಕುಪಿತಗೊಂಡ ಸ್ವಾಮಿ ಬಡಿಗೆಯಿಂದ ಮಹಾಂತೇಶ್‌ ತಲೆಗೆ ಹೊಡೆದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಹಾಂತೇಶ್‌ ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ರಕ್ತಸ್ರಾವ ಉಂಟಾದ ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಕೊಲೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಸ್ವಾಮಿ ದಂಪತಿಯನ್ನು ಬಂಧಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.