ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿದೇವಿ ಜಾತ್ರೆ ರದ್ದು; ಸರಳ ಪೂಜೆ ಇಂದಿನಿಂದ

ಗೌರಸಮುದ್ರ: ಸುತ್ತಮುತ್ತಲ ಹಳ್ಳಿಗಳಲ್ಲಿ ಜಾತ್ರೆ ಆಚರಣೆಗೆ ತೆರೆಮರೆಯ ಸಿದ್ಧತೆ
Last Updated 14 ಸೆಪ್ಟೆಂಬರ್ 2021, 6:57 IST
ಅಕ್ಷರ ಗಾತ್ರ

ಗೌರಸಮುದ್ರ (ಚಳ್ಳಕೆರೆ): ಜಿಲ್ಲೆಯ ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ಚರಿತ್ರೆಯನ್ನು ನಿರೂಪಿಸುವ ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯ ಗೌರಸಮುದ್ರ ಗ್ರಾಮದಲ್ಲಿ ಸೆ. 14ರಂದು ನಡೆಯಬೇಕಿದ್ದ ಮಾರಿದೇವಿಯ ಜಾತ್ರೆಯನ್ನು ಕೋವಿಡ್ ಕಾರಣದಿಂದ ರದ್ದುಗೊಳಿಸಿರುವ ಜಿಲ್ಲಾಡಳಿತ ಮಾರಿದೇವಿಯ ಸರಳ ಪೂಜೆಗೆ ಅವಕಾಶ ಕಲ್ಪಿಸಿದೆ.

ಆಂಧ್ರಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಪ್ರತಿ ವರ್ಷ ಈ ಜಾತ್ರೆಗೆ ಲಕ್ಷಾಂತರ ಭಕ್ತರು ಒಂದೆಡೆ ಸೇರುತ್ತಿದ್ದರು. ಕೊರೊನಾ ವೈರಸ್ ಸೋಂಕು ತಡೆಯುವ ಉದ್ದೇಶದಿಂದ ಕಳೆದ ವರ್ಷ ಜಾತ್ರೆ ರದ್ದಾಗಿತ್ತು. ಹೀಗಾಗಿ ಗೌರಸಮುದ್ರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸ್ ಕಣ್ಗಾವಲಿನಲ್ಲಿ ಮಾರಿದೇವಿಯ ಜಾತ್ರೆ ಸರಳ ಆಚರಣೆ ಹಾಗೂ ಪೂಜೆಗಳು ಜರುಗಿದ್ದವು.

ಆ. 31ರಂದು ಸಭೆ ನಡೆಸಿದ ಗ್ರಾಮಸ್ಥರು ಹಾಗೂ ದೇವಸ್ಥಾನ ಆಡಳಿತ ಮಂಡಳಿಯವರು ಜಾತ್ರೆ ನಡೆಸಲು ಉತ್ಸುಕರಾಗಿದ್ದರು. ಈ ಬಾರಿ ಕೋವಿಡ್ ಮೂರನೇ ಅಲೆ ತೀವ್ರವಾಗಿ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿರುವುದರಿಂದ ಮೂರನೇ ಅಲೆಯನ್ನು ತಡೆಯಲು ಮತ್ತು ಜಾತ್ರೆ ನೆಪದಲ್ಲಿ ಜನರು ಒಂದೆಡೆ ಸೇರುವುದನ್ನು ತಪ್ಪಿಸಲು ಜಿಲ್ಲಾಡಳಿತ ಜಾತ್ರೆಯನ್ನು ರದ್ದುಪಡಿಸಿದೆ. ಗ್ರಾಮದಲ್ಲಿ ಸಿಡಿ, ಮೆರವಣಿಗೆ, ವ್ಯಾಪಾರ ಅಂಗಡಿಗಳನ್ನು ನಿರ್ಬಂಧಿಸಲಾಗಿದೆ.

ಸೆ. 14 ಹಾಗೂ 15ರಂದು ಎರಡು ದಿನ ಮಾತ್ರ ದೇವಿಯ ದರ್ಶನ ಹಾಗೂ ಸರಳ ಪೂಜೆಯನ್ನು ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪ್ರತಿ ವರ್ಷ ನಡೆಸುವ ದೇವಿಯ ಆಚರಣಾ ಪದ್ಧತಿಯನ್ನು ನಿಲ್ಲಿಸಬಾರದು. ನಿಲ್ಲಿಸಿದರೆ ಊರಿಗೆ ಕೇಡುಂಟಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಹೀಗಾಗಿ ಸರಳ ಹಾಗೂ ಸಾಂಕೇತಿಕ ಆಚರಣೆಯ ನೆಪದಲ್ಲಿ ಗೌರಸಮುದ್ರ ಗ್ರಾಮದ ಸುತ್ತಮುತ್ತಲ ಹಳ್ಳಿಗಳಲ್ಲಿ ಜಾತ್ರೆ ಆಚರಣೆಗೆ ತೆರೆಮರೆಯ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಭಕ್ತರು ಬರೀ ಹೂ–ಹಣ್ಣು, ತೆಂಗಿನಕಾಯಿಯನ್ನು ತುಮಲು ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ದೇವಿಗೆ ಪೂಜೆ ಸಲ್ಲಿಸಿ, ನಂತರ ಮಹಿಳೆ–ಮಕ್ಕಳು ಕಟ್ಟಿಕೊಂಡ ಬೇವಿನ ಸೀರೆ, ಬಾಯಿಬೀಗ, ತಮ್ಮ ಹೊಲ-ಮನೆಯಲ್ಲೇ ಕಟ್ಟಿಕೊಂಡ ಹರಕೆಗಳನ್ನು ತೀರಿಸಲು ನಿರ್ಧರಿಸಿದ್ದಾರೆ. ಇನ್ನೂ ಕೆಲವರು ನೇರ ದಾರಿಯನ್ನು ತೊರೆದು ಆಟೊ ಮತ್ತು ಬೈಕ್‍ನಲ್ಲಿ ಅಡ್ಡ ದಾರಿ ಮೂಲಕ ತುಮಲು ಪ್ರದೇಶದ ಬಳಿ ಹೋಗಿ ಮಹಿಳೆ–ಮಕ್ಕಳ ಬೇವಿನಸೀರೆ, ಬಾಯಿಬೀಗ ಹಾಗೂ ಭಂಡಾರದ ಹರಕೆಯನ್ನು ತೀರಿಸಿಕೊಂಡು ಬರಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

‘ತುಮಲು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಬುಕ್ಕಂಬೂದಿ, ಹನುಮಂತನಹಳ್ಳಿ, ಘಟಪರ್ತಿ ರಸ್ತೆಯಲ್ಲಿ ಚೆಕ್‌ಪೋಸ್ಟ್, ಜಾತ್ರೆಗೆ ಬರುವ ಜನರನ್ನು ನಿಯಂತ್ರಿಸಲು ರಸ್ತೆಯ ಅಲ್ಲಲ್ಲಿ 55 ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಜಾತ್ರೆಗೆ ಅಕ್ರಮ ಪ್ರವೇಶವನ್ನು ತಡೆಯಲು ಮತ್ತು ಮಾಹಿತಿ ನೀಡಲು 60 ಗ್ರಾಮ ಲೆಕ್ಕಾಧಿಕಾರಿಗಳು, 600 ಕಾನ್‌ಸ್ಟೆಬಲ್‌ಗಳನ್ನು ನಿಯೋಜನೆ ಮಾಡಲಾಗಿದೆ. ಭಕ್ತರಿಗೆ ಲಸಿಕೆ ಹಾಕಲು 3–4 ಕಡೆ ಕೋವಿಡ್ ಲಸಿಕಾ ಕೇಂದ್ರ ತೆರೆಯಲಾಗಿದೆ’ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT