ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲಾಟೆಯಲ್ಲ, ಗಟ್ಟಿ ಸಂಸಾರ ನಿಮ್ಮದಾಗಲಿ: ಶಿವಮೂರ್ತಿ ಮುರುಘಾ ಶರಣರು

ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶಿವಮೂರ್ತಿ ಮುರುಘಾ ಶರಣರು
Last Updated 5 ಮಾರ್ಚ್ 2021, 15:20 IST
ಅಕ್ಷರ ಗಾತ್ರ

ಚಿತ್ರದುರ್ಗ: ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವಜೋಡಿಗಳ ಮುಂದಿನ ಸಾಂಸಾರಿಕ ಜೀವನ ಗಲಾಟೆ ಸಂಸಾರ ಆಗದೇ, ಗಟ್ಟಿ ಸಂಸಾರವಾಗಬೇಕು ಎಂದು ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ಮುರುಘಾಮಠ, ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ನಿಂದ ಗುರುವಾರ ನಡೆದ 31ನೇ ವರ್ಷದ 3ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಜೀವನ ಇರುವುದೇ ಸಾಧನೆಯತ್ತ ದಾಪುಗಾಲಿಡಲಿಕ್ಕಾಗಿ. ಆದ ಕಾರಣ ಬದುಕಿನಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಧೈರ್ಯವಾಗಿ ಮೆಟ್ಟಿನಿಲ್ಲಬೇಕು. ಸಮಸ್ಯೆ ಬಂದರೆ ವಿಚಲಿತರಾಗದೆ, ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂಕಷ್ಟದ ನಡುವೆ ಸಾಹಸಕ್ಕೆ ಮುಂದಾದಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ’ ಎಂದು ಹೇಳಿದರು.

‘ಕೋವಿಡ್‌ ಲಸಿಕೆ ಬಂದಿದೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿ. ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಭಾರತ ವಿಶ್ವಕ್ಕೆ ಲಸಿಕೆ ಪೂರೈಸುತ್ತಿರುವ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದರು.

ಬೆಂಗಳೂರು ನಗರ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಡಾ. ಸಿದ್ಧರಾಮಣ್ಣ, ‘ಸಮಾಜ, ಸಮುದಾಯದ ಅಭ್ಯುದಯಕ್ಕೆ ಶ್ರೀಮಠ ಶ್ರಮಿಸುತ್ತಿದೆ. ಹಣ ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಮಾಡಿರುವ ಅನೇಕ ಮದುವೆಗಳು ಮುರಿದುಬಿದ್ದಿವೆ. ಶ್ರೀಮಠದಲ್ಲಿ ಕಲ್ಯಾಣವಾದವರು ಸುಖೀ ಸಂಸಾರ ನಡೆಸುತ್ತಿರುವುದು ಮೆಚ್ಚುಗೆಯ ಸಂಗತಿ’ ಎಂದರು.

ಲಿಂಗಾಯತ ವರ - ಭೋವಿ ವಧು, ನಾಯಕ ವರ - ಲಿಂಗಾಯತ ವಧು, ಜನಿವಾರ ವರ - ಭೋವಿ ವಧು ಮೂರು ಜೋಡಿಗಳ ಅಂತರ್ಜಾತಿ ವಿವಾಹ ಸೇರಿ 17 ಜೋಡಿಗಳ ಕಲ್ಯಾಣ ನೆರವೇರಿತು.

ರಾಷ್ಟ್ರಪತಿ ಪದಕ ಪುರಸ್ಕೃತ ಸಿಪಿಐ ಬಾಲಚಂದ್ರ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಗೋಲಗೇರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಹಾವೇರಿಯ ಬಸವಶಾಂತಲಿಂಗ ಸ್ವಾಮೀಜಿ, ಅಗಡಿ ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ, ಹನುಮಲಿ ಷಣ್ಣುಖಪ್ಪ, ನಿವೃತ್ತ ಎಂಜಿನಿಯರ್ ಜಿ.ಆರ್. ಮಲ್ಲೇಶಪ್ಪ, ಕೆಇಬಿ ಷಣ್ಮುಖಪ್ಪ, ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ಪೈಲ್ವಾನ್ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT