ಚಿತ್ರದುರ್ಗ: ಕೋವಿಡ್ ರೋಗಿಗಳ ಚಿಕಿತ್ಸೆಗೆ ಅಗತ್ಯವಾಗಿ ಬೇಕಾಗಿರುವ ವೈದ್ಯಕೀಯ ಆಮ್ಲಜನಕ ಪೂರೈಕೆ ಪ್ರಮಾಣ ಹೆಚ್ಚಿಸಿ ಕೊರೊನಾ ಸೋಂಕಿನಿಂದ ಎದುರಾಗಿರುವ ವಿಪತ್ತಿನಿಂದ ಜನರನ್ನು ರಕ್ಷಿಸಬೇಕು ಎಂದು ಜಿಲ್ಲೆಯ ನಾಲ್ವರು ಶಾಸಕರು ಹಾಗೂ ಅಧಿಕಾರಿಗಳು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಲ್ಲಿ ಮನವಿ ಮಾಡಿದರು.

ಕೋವಿಡ್ ಪರಿಸ್ಥಿತಿಯ ಅವಲೋಕನ ನಡೆಸಲು ಗುರುವಾರ ಜಿಲ್ಲೆಗೆ ಆಗಮಿಸಿದ ಆರೋಗ್ಯ ಸಚಿವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಪಂಚಾಯಿತಿಯಲ್ಲಿ ಪರಿಶೀಲನಾ ಸಭೆ ನಡೆಸಿ ಮಾಹಿತಿ ಪಡೆದರು. ತುರ್ತು ಅಗತ್ಯ ಇರುವ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದರು.

‘ಜಿಲ್ಲೆಗೆ ನಿತ್ಯ 8.5 ಸಾವಿರ ಲೀಟರ್ ಆಮ್ಲಜನಕದ ಹಂಚಿಕೆ ಆಗಿದೆ. ವಾಸ್ತವವಾಗಿ ಇಷ್ಟು ಪ್ರಮಾಣದ ಆಮ್ಲಜನಕ ನಿಯಮಿತವಾಗಿ ಪೂರೈಕೆ ಆಗುತ್ತಿಲ್ಲ. ಆಮ್ಲಜನಕ ಸರಬರಾಜಿನಲ್ಲಿ ಉಂಟಾಗಿರುವ ವ್ಯತ್ಯಯದಿಂದ ಸಮಸ್ಯೆ ಎದುರಾಗುತ್ತಿದೆ. ಆಮ್ಲಜನಕ ಪೂರೈಕೆಯ ಹೊಣೆ ಹೊತ್ತಿರುವ ಹರಿಹರದ ಸದರ್ನ್ ಗ್ಯಾಸ್ ಏಜೆನ್ಸಿ ಚಿತ್ರದುರ್ಗಕ್ಕೆ ಒತ್ತು ನೀಡುತ್ತಿಲ್ಲ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸಚಿವರ ಗಮನ ಸೆಳೆದರು.

ಜಿಲ್ಲೆಯಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 803 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. 592 ರೋಗಿಗಳಿಗೆ ಆಮ್ಲಜನಕದ ಅಗತ್ಯವಿದೆ. ಆಮ್ಲಜನಕದ ಕೊರತೆಯ ಕಾರಣಕ್ಕೆ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಆಸ್ಪತ್ರೆ ಹಾಗೂ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹಾಸಿಗೆ ಸಂಖ್ಯೆ ಹೆಚ್ಚಿಸಲು ಆಮ್ಲಜನಕದ ಕೊರತೆ ಎದುರಾಗಿದೆ ಎಂಬುದನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯ ಮುಂದಿಟ್ಟರು.

‘ಹೆಚ್ಚುತ್ತಿರುವ ಸೋಂಕಿನ ಸಂಖ್ಯೆಗೆ ಅನುಗುಣವಾಗಿ ನಿತ್ಯ 14 ಸಾವಿರ ಲೀಟರ್ ಆಮ್ಲಜನಕದ ಅಗತ್ಯವಿದೆ. ಅಗತ್ಯದ ಅರ್ಧ ಪ್ರಮಾಣದಷ್ಟು ಮಾತ್ರ ಆಮ್ಲಜನಕ ಲಭ್ಯವಾಗುತ್ತಿದೆ. ಇನ್ನೂ 4 ಸಾವಿರ ಲೀಟರ್ ತುರ್ತು ಅಗತ್ಯವಿದೆ. ಜಿಲ್ಲೆಗೆ 750 ಜಂಬೂ ಸಿಲಿಂಡರ್ ಬೇಕಾಗಿದ್ದು, 350 ಮಾತ್ರ ಲಭ್ಯ ಇವೆ. ಇನ್ನೂ 350 ಸಿಲಿಂಡರ್ ನೀಡಿದರೆ ಸಮಸ್ಯೆಯ ತೀವ್ರತೆ ಕಡಿಮೆ ಮಾಡಲು ಸಾಧ್ಯ’ ಎಂದು ಆಮ್ಲಜನಕ ನೋಡೆಲ್ ಅಧಿಕಾರಿ ಅವಿನ್ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಂಗನಾಥ್ ವಾಸ್ತವ ಪರಿಸ್ಥಿತಿ ಬಿಚ್ಚಿಟ್ಟರು.

ಆಮ್ಲಜನಕ ಕೊರತೆ ಇಲ್ಲ:ಸಚಿವ ಸುಧಾಕರ್, ‘ರಾಜ್ಯದಲ್ಲಿ ಆಮ್ಲಜನಕದ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಷ್ಟು ಆಮ್ಲಜನಕ ರಾಜ್ಯಕ್ಕೆ ಪೂರೈಕೆ ಆಗುತ್ತಿದೆ. ಇದನ್ನು ಬೆಂಗಳೂರು ಹಾಗೂ ಇತರ ಜಿಲ್ಲೆಗೆ ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಆಗುತ್ತಿವೆ. ಆಸ್ಪತ್ರೆ, ರೋಗಿಗಳ ಸಂಖ್ಯೆ ಹಾಗೂ ಹಾಸಿಗೆ ಲಭ್ಯತೆಯ ಆಧಾರದ ಮೇರೆಗೆ ಜಿಲ್ಲಾಧಿಕಾರಿ ಪ್ರಸ್ತಾವ ಸಲ್ಲಿಸಿದರೆ ಪರಿಗಣಿಸಲು ಸಾಧ್ಯ’ ಎಂದು ಹೇಳಿದರು.

‘ಆಸ್ಪತ್ರೆಗೆ ದಾಖಲಾಗುವ ಎಲ್ಲ ರೋಗಿಗಳಿಗೆ ಆಮ್ಲಜನಕದ ಅಗತ್ಯವಿಲ್ಲ. ಆಮ್ಲಜನಕವನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀಡಿದರೂ ಪ್ರಯೋಜನವಾಗದು’ ಎಂದರು.

ಹಳ್ಳಿ ಕಾರ್ಯಪಡೆಗೆ ಸೂಚನೆ:ಕೋವಿಡ್ ಪರೀಕ್ಷೆಗೆ ಒಳಗಾಗುವವರಲ್ಲಿ ಸೋಂಕು ಪತ್ತೆಯಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದೆ. ಜಿಲ್ಲೆಯ ಪಾಸಿಟಿವಿಟಿ ದರ ಶೇ 5ರಿಂದ ಶೇ 20ಕ್ಕೆ ಹೆಚ್ಚಳವಾಗಿದೆ. ಜಿಲ್ಲೆಯ 241 ಗ್ರಾಮಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 51 ಹಳ್ಳಿಗಳನ್ನು ಹಾಟ್‌ಸ್ಪಾಟ್ ಎಂದು ಪರಿಗಣಿಸಲಾಗಿದೆ.

‘ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕಿದೆ. ಗ್ರಾಮ, ಬೂತ್ ಮಟ್ಟದಲ್ಲಿ ಕಾರ್ಯಪಡೆ ರಚಿಸಿ ನೀಡಬೇಕು. ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಉಸ್ತುವಾರಿಗೆ ನಿಯೋಜಿಸಬೇಕು’ ಎಂದು ಸೂಚನೆ ನೀಡಿದರು.

ಸ್ಟೀರಾಯ್ಡ್ ಬಳಕೆ ಬೇಡ:ಕೋವಿಡ್ ರೋಗಿಗಳಿಗೆ ಅನಗತ್ಯವಾಗಿ ಸ್ಟೀರಾಯ್ಡ್ ನೀಡಬಾರದು. ಮನೆಯಲ್ಲೇ ಪ್ರತ್ಯೇಕವಾಗಿ ಇರುವವರು ಹಾಗೂ ಆರೈಕೆ ಕೇಂದ್ರದಲ್ಲಿರುವ ಸೋಂಕಿತರಿಗೆ ಇದರ ಅಗತ್ಯವಿಲ್ಲ. ವೈದ್ಯಕೀಯ ಕಿಟ್‌ಗಳಲ್ಲಿ ಸ್ಟೀರಾಯ್ಡ್ ಇರಬಾರದು ಎಂದು ಸಚಿವ ಸುಧಾಕರ್ ಸೂಚನೆ ನೀಡಿದರು.

‘ಸೋಂಕು ನಿಯಂತ್ರಣದಲ್ಲಿ ಸರ್ಕಾರದ ಮಾರ್ಗಸೂಚಿಗಳು ಪಾಲನೆ ಆಗುತ್ತಿಲ್ಲ. ಕೋವಿಡ್ ಪರೀಕ್ಷೆಯ ವರದಿ ಅಂದೇ ಕೈಸೇರುವಂತೆ ವ್ಯವಸ್ಥೆ ರೂಪಿಸಬೇಕು. ಹಲವು ಔಷಧಗಳ ಕೊರತೆ ನೀಗಿದೆ. ಅಗತ್ಯ ಔಷಧಗಳು ಬೇಕಿದ್ದರೆ ಕೋರಿಕೆ ಸಲ್ಲಿಸಿ’ ಎಂದು ಹೇಳಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಇದ್ದರು.

ಮನೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುವವರನ್ನು ನಾಳೆಯೇ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಸೋಂಕು ಖಚಿತವಾದ ಐದು ಗಂಟೆಯಲ್ಲಿ ಜನರಿಂದ ಪ್ರತ್ಯೇಕ ಮಾಡಬೇಕು.

ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

ಕೋವಿಡ್ ನಿರ್ವಹಣೆ ಮಾಡುತ್ತಿರುವ ಬಗ್ಗೆ ತೃಪ್ತಿ ಇದೆ. ಆದರೆ, ಚಿಕಿತ್ಸೆಗೆ ಅಗತ್ಯ ಇರುವ ಸೌಲಭ್ಯಗಳ ಕೊರತೆ ಇದೆ. ಇದನ್ನು ಅಧಿಕಾರಿಗಳು ಮುಚ್ಚಿಟ್ಟಿದ್ದಾರೆ. ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ.

ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ

ಕೋವಿಡ್ ಮೊದಲ ಅಲೆ ಇಳಿಮುಖವಾಗುತ್ತಿದ್ದಂತೆ ತಾಲ್ಲೂಕು ಆಸ್ಪತ್ರೆಗೆ ಆಮ್ಲಜನಕ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಸಿಲಿಂಡರ್ ಖರೀದಿಯಲ್ಲಿ ವಿಳಂಬವಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಇದರ ಹೊಣೆ ಹೊರಬೇಕು.

ಕೆ.ಪೂರ್ಣಿಮಾ, ಶಾಸಕಿ, ಹಿರಿಯೂರು

ತಾಲ್ಲೂಕು ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಆಮ್ಲಜನಕ ಸೌಲಭ್ಯ ಹೊಂದಿದ ಹಾಸಿಗೆ ಕೊರತೆ ಇದೆ. ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ವಾಸ್ತವ ಮರೆಮಾಚಲು ಯತ್ನಿಸುತ್ತಿದ್ದಾರೆ.

ಎಂ.ಚಂದ್ರಪ್ಪ, ಶಾಸಕ, ಹೊಳಲ್ಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.