ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗೆ ತೆರಳಲು ಪಶುವೈದ್ಯರಿಗೆ ಸಚಿವ ಪ್ರಭು ಚವಾಣ್ ಸೂಚನೆ

ಪ್ರಗತಿ ಪರಿಶೀಲಿಸಿದ ಪಶುಸಂಗೋಪನಾ ಸಚಿವ ಪ್ರಭು ಚೌವಾಣ್‌
Last Updated 15 ಜೂನ್ 2020, 15:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಪಶುವೈದ್ಯರು ನಗರಕ್ಕೆ ಸೀಮಿತವಾಗದೇ ಹಳ್ಳಿಗೆ ತೆರಳಿ ಪ್ರಾಣಿಗಳಿಗೆ ಚಿಕಿತ್ಸೆ ನೀಡಬೇಕು. ಸಾಕು ಪ್ರಾಣಿಗಳು ಕಾಯಿಲೆಗೆ ತುತ್ತಾಗುವುದನ್ನು ತಪ್ಪಿಸಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌವಾಣ್‌ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಪಶುಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲನೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಸಾವಿರ ಪಶು ವೈದ್ಯರ ಕೊರತೆ ಇರುವುದು ನಿಜ. ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗಿದೆ. ವೈದ್ಯರ ಕೊರತೆಯ ನೆಪ ಹೇಳಿ ಜವಾಬ್ದಾರಿಯಿಂದ ನುಣಿಚಿಕೊಂಡರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಪಶುವೈದ್ಯರ ಅಸಮರ್ಪಕ ಸೇವೆಗೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶದಿಂದ ನಿತ್ಯ ದೂರು ಬರುತ್ತಿವೆ. ಕಾಯಿಲೆ ಬಿದ್ದ ಪಶುಗಳ ಬಗ್ಗೆ ಜನರು ಮಾಹಿತಿ ನೀಡಿದರೆ ವೈದ್ಯರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಪ್ರತಿಯೊಬ್ಬರು ಹಳ್ಳಿಗೆ ಭೇಟಿ ನೀಡಿ ಕಾರ್ಯನಿರ್ವಹಿಸಿದ ವರದಿಯನ್ನು ನಿತ್ಯ ಸಚಿವರ ಕಚೇರಿಗೆ ಕಳುಹಿಸಬೇಕು. ವಾಟ್ಸ್‌ ಆಪ್‌ ಮೂಲಕ ಮಾಹಿತಿ ನೀಡಬೇಕು’ ಎಂದು ತಾಕೀತು ಮಾಡಿದರು.

ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಕೃಷ್ಣಪ್ಪ, ‘ಜಿಲ್ಲೆಯಲ್ಲಿ ಪಶುವೈದ್ಯರ ಕೊರತೆ ಇದೆ. ಮೊಳಕಾಲ್ಮುರು ತಾಲ್ಲೂಕಿಗೆ 9 ಪಶುವೈದ್ಯರ ಹುದ್ದೆಗಳು ಮಂಜೂರಾಗಿವೆ. ಆದರೆ, ಒಬ್ಬ ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇರುವ ವೈದ್ಯರು ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ’ ಎಂದು ಪ್ರತಿಕ್ರಿಯೆ ನೀಡಿದರು.

ಮೊಟ್ಟೆ ಉತ್ಪಾದನೆ ಕುಸಿತ:ಲಾಕ್‌ಡೌನ್‌ ಸಂದರ್ಭದಲ್ಲಿ ಮೊಟ್ಟೆ ಉತ್ಪಾದನೆ ಗಣನೀಯವಾಗಿ ಕುಸಿದ ಸಂಗತಿಯನ್ನು ಕೃಷ್ಣಪ್ಪ ಅವರು ಸಚಿವರ ಗಮನಕ್ಕೆ ತಂದರು. ಮೊಟ್ಟೆ ಉತ್ಪಾದನೆ ಹಾಗೂ ಕೋಳಿ ಉದ್ಯಮ ಚೇತರಿಸಿಕೊಂಡಿರುವ ಬಗ್ಗೆಯೂ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ನಿತ್ಯ ಸರಾಸರಿ 14 ಲಕ್ಷ ಮೊಟ್ಟೆ ಉತ್ಪಾದನೆ ಆಗುತ್ತಿತ್ತು. ಲಾಕ್‌ಡೌನ್‌ ಸಂದರ್ಭದಲ್ಲಿ ಕೋಳಿ ಹಾಗೂ ಮೊಟ್ಟೆ ವಹಿವಾಟು ಸ್ಥಗಿತಗೊಂಡ ಪರಿಣಾಮ ಉದ್ಯಮಕ್ಕೆ ಭಾರಿ ಏಟು ಬಿದ್ದಿತು. ಅಂದಾಜು 10 ಲಕ್ಷ ಮೊಟ್ಟೆ ಉತ್ಪಾದನೆ ಕಡಿಮೆಯಾಗಿತ್ತು. ಲಾಕ್‌ಡೌನ್‌ ನಿಯಮ ಸಡಿಲಗೊಂಡ ಬಳಿಕ ಮೊಟ್ಟೆ ಉತ್ಪಾದನೆ ಸಹಜ ಸ್ಥಿತಿಗೆ ಮರಳುತ್ತಿದೆ’ ಎಂದು ಕೃಷ್ಣಪ್ಪ ಮಾಹಿತಿ ನೀಡಿದರು.

ಮೇವು ಪೂರೈಕೆಗೆ ತಾಕೀತು:ಕುರಿ, ಮೇಕೆ, ಹಸು ಹಾಗೂ ದೇವರ ಎತ್ತು ಸೇರಿ ಸಾಕು ಪ್ರಾಣಿಗಳಿಗೆ ಮೇವು ಕೊರತೆ ಆಗದಂತೆ ಎಚ್ಚರ ವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು. ‘ಮೇವು ಸಂಗ್ರಹ ಹೇಗಿದೆ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ದೇವರ ಎತ್ತುಗಳ ಬಗ್ಗೆ ವಿಚಾರಿಸಿ ಮಾಹಿತಿ ಪಡೆದರು.

ಕೃಷ್ಣಪ್ಪ ಮಾತನಾಡಿ, ‘ಜಾನುವಾರು ಮೇವಿಗೆ ಈ ವರ್ಷ ಕೊರತೆ ಉಂಟಾಗಿಲ್ಲ. 25 ವಾರಗಳಿಗೆ ಸಾಕಾಗುವಷ್ಟು ಮೇವು ಸಂಗ್ರಹವಿದೆ. ಮಳೆ ಆರಂಭವಾಗಿರುವುದರಿಂದ ಮೇವಿಗೆ ತೊಂದರೆಯಾಗದು. ಐದು ಗೋಶಾಲೆಗಳಿಗೆ ₹ 24 ಲಕ್ಷ ಅನುದಾನ ಬಿಡುಗಡೆಯಾಗಿದೆ. ದೇವರ ಎತ್ತುಗಳಿಗೆ 24 ಸ್ಥಳಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮಾತ್ರ ಮೇವು ಕೊರತೆ ಉಂಟಾಗಿತ್ತು’ ಎಂದು ವಿವರಿಸಿದರು.

ವಕ್ಫ್‌ ಆಸ್ತಿ ಸಂರಕ್ಷಣೆಗೆ ತಾಕೀತು:ವಕ್ಫ್‌ ಆಸ್ತಿಯನ್ನು ಸಂರಕ್ಷಣೆ ಮಾಡಬೇಕು. ಇಲ್ಲವಾದರೆ ಉತ್ತರಪ್ರದೇಶಕ್ಕೆ ವರ್ಗಾವಣೆ ಮಾಡುತ್ತೇನೆ ಎಂದು ವಕ್ಫ್‌ ಸಚಿವರೂ ಆಗಿರುವ ಪ್ರಭು ಚೌವಾಣ್‌ ಜಿಲ್ಲಾ ವಕ್ಫ್‌ ಅಧಿಕಾರಿ ಅಮ್ಜದ್‌ ಮೋಹಿನ್‌ ಅವರಿಗೆ ತಾಕೀತು ಮಾಡಿದರು.

‘ಜಿಲ್ಲೆಯಲ್ಲಿರುವ ವಕ್ಫ್‌ ಆಸ್ತಿಯನ್ನು ಸರಿಯಾಗಿ ಗುರುತಿಸಬೇಕು. ಬೇಲಿ ಅಥವಾ ಕಾಂಪೌಂಡ್‌ ಹಾಕಿ ಅತಿಕ್ರಮ ಆಗದಂತೆ ಎಚ್ಚರವಹಿಸಬೇಕು. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿವೆ. ಆಸ್ತಿ ಉಳಿಸಿಕೊಳ್ಳಲು ಶಕ್ತಿಮೀರಿ ಶ್ರಮಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT