ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಮೂಲಕ ಮಾಸಾಶನ ಸಿಗಲ್ಲ: ಆರ್‌.ಅಶೋಕ್

ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ ಲಿಂಕ್‌ಗೆ ತಿಂಗಳ ಗಡುವು
Last Updated 12 ಜನವರಿ 2021, 3:37 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಾಮಾಜಿಕ ಭದ್ರತಾ ಯೋಜನೆಯಡಿ ಪಡೆಯುವ ಮಾಸಾಶನ ಇನ್ನು ಮುಂದೆ ಅಂಚೆ ಕಚೇರಿಯಲ್ಲಿ ಸಿಗುವುದಿಲ್ಲ. ಫೆಬ್ರುವರಿ ತಿಂಗಳಿಂದ ಬ್ಯಾಂಕ್‌ ಖಾತೆ ಹೊಂದಿದ ಫಲಾನುಭವಿಗಳಿಗೆ ಮಾತ್ರವೇ ಮಾಸಾಶನ ಕೈಸೇರಲಿದೆ.

ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಆರ್‌.ಅಶೋಕ್ ಈ ವಿಚಾರ ತಿಳಿಸಿದರು. ಬೋಗಸ್‌ ಫಲಾನುಭವಿಗಳನ್ನು ಪತ್ತೆ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿರುವುದಾಗಿ ಮಾಹಿತಿ ನೀಡಿದರು. ಜ. 30ರ ಒಳಗೆ ಎಲ್ಲ ಫಲಾನುಭವಿಗಳ ಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಲಿಂಕ್‌ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಮಾತನಾಡಿ, ‘ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ 2,45,649 ಫಲಾನುಭವಿಗಳಿದ್ದಾರೆ. ಇದರಲ್ಲಿ 82 ಸಾವಿರ ಜನರು ಅಂಚೆ ಕಚೇರಿ ಮೂಲಕ ಮಾಸಾಶನ ಪಡೆಯುತ್ತಿದ್ದಾರೆ. 2,30,960 ಜನರ ಆಧಾರ್‌ ಮತ್ತು ಬ್ಯಾಂಕ್‌ ಖಾತೆ ಲಿಂಕ್‌ ಮಾಡಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಇನ್ನೂ 14,680 ಫಲಾನುಭವಿಗಳ ಬ್ಯಾಂಕ್‌ ಮತ್ತು ಆಧಾರ್‌ ಲಿಂಕ್‌ ಆಗದಿರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಸಂಬಂಧಿಸಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ಮಾಸಾಂತ್ಯಕ್ಕೆ ಸರಿಯಾಗದಿದ್ದರೆ ಮನೆಗೆ ಕಳುಹಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಸಾಮಾಜಿಕ ಭದ್ರತಾ ಯೋಜನೆಯ ಮಾಸಾಶನ ಮೃತ ವ್ಯಕ್ತಿಗೂ ಪಾವತಿ ಆಗುತ್ತಿರುವುದು ಬೆಳಕಿಗೆ ಬಂದಿದೆ. ಅನೇಕರು ನಕಲಿ ದಾಖಲೆ ಸೃಷ್ಟಿಸಿ ಎರಡು ಅಥವಾ ಮೂರು ಜಿಲ್ಲೆಗಳಲ್ಲಿ ಮಾಸಾಶನ ಪಡೆಯುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಬಯೋಮೆಟ್ರಿಕ್‌ ಹಾಗೂ ರೆಟಿನೊ ಸಮಸ್ಯೆ ಇದ್ದರೆ ಜಿಲ್ಲಾಧಿಕಾರಿ ಅನುಮತಿ ಪಡೆದು ಮುಂದುವರಿಯಿರಿ’ ಎಂದು ಸಚಿವ ಅಶೋಕ್‌ ಸೂಚನೆ ನೀಡಿದರು.

ಎಡವಟ್ಟಿನಿಂದ ಕೈತಪ್ಪಿದ ಪರಿಹಾರ
ಅಧಿಕಾರಿಗಳ ಎಡವಟ್ಟಿನಿಂದ ಹೊಸದುರ್ಗ ತಾಲ್ಲೂಕಿನ ಮೂವರಿಗೆ ಪರಿಹಾರ ಕೈತಪ್ಪಿರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಮಂಗಳವಾರವೇ ಎಲ್ಲರಿಗೂ ಪರಿಹಾರ ಮಂಜೂರು ಮಾಡುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದರು.

‘ಹೊಸದುರ್ಗ ತಾಲ್ಲೂಕಿನಲ್ಲಿ 2020ರಲ್ಲಿ ಮೂವರು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಆದರೆ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂಬ ವರದಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಇದರಿಂದ ಪರಿಹಾರ ಕೈತಪ್ಪಿದೆ’ ಎಂದು ಶಾಸಕ ಗೂಳಿಹಟ್ಟಿ ಶೇಖರ್‌ ಬೇಸರ ಹೊರಹಾಕಿದರು.

*
ಪ್ರಕೃತಿ ವಿಕೋಪ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಸಂಭವಿಸಿದೆ. ಆದರೆ, ಪರಿಹಾರ ವಿತರಣೆಯಲ್ಲಿ ನಿರ್ಲಕ್ಷ್ಯ ತೋರಲಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.
-ಗೂಳಿಹಟ್ಟಿ ಡಿ.ಶೇಖರ್‌, ಶಾಸಕ, ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT