ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳವು ಕೃತ್ಯಕ್ಕೆ ಕೈಹಾಕಿದರೆ ಗಡಿಪಾರು: ಪೊಲೀಸ್‌ ವರಿಷ್ಠಾಧಿಕಾರಿ ಎಚ್ಚರಿಕೆ

Last Updated 12 ಫೆಬ್ರುವರಿ 2020, 14:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಳವು ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಮತ್ತೆ ತೊಡಗಿಸಿಕೊಂಡರೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಎಚ್ಚರಿಕೆ ನೀಡಿದರು.

ಪದೇ ಪದೇ ಅಪರಾಧ ಎಸಗುವ ಪ್ರವೃತ್ತಿ ಹೊಂದಿದ ಎಂಒಬಿಗಳ (ಅಪರಾಧ ಪ್ರಕರಣಗಳ ಹಿನ್ನೆಲೆ ಹೊಂದಿದವರು) ಪರೇಡ್‌ ನಡೆಸಿ ಜೀವನ ಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದರು.

ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಪರೇಡ್‌ನಲ್ಲಿ ಚಿತ್ರದುರ್ಗ ಉಪವಿಭಾಗ ವ್ಯಾಪ್ತಿಯ 330 ಎಂಒಬಿಗಳ ಪೈಕಿ 116 ಮಂದಿ ಪಾಲ್ಗೊಂಡಿದ್ದರು. ಮಂಗಳವಾರ ರಾತ್ರಿ ಹಾಗೂ ಬುಧವಾರ ನಸುಕಿನಲ್ಲಿ ಮನೆಗಳ ಮೇಲೆ ದಾಳಿ ನಡೆಸಿ ಎಂಒಬಿಗಳನ್ನು ಪರೇಡ್‌ಗೆ ಕರೆತರಲಾಗಿತ್ತು.

ಮನೆಗಳವು, ಸರಗಳವು, ದರೋಡೆ, ಹಸು ಕಳವು, ದ್ವಿಚಕ್ರ ವಾಹನ ಕಳವು ಸೇರಿದಂತೆ ಹಲವು ಬಗೆಯ ಕೃತ್ಯಗಳಲ್ಲಿ ತೊಡಗಿಕೊಂಡವರು ಪರೇಡ್‌ಗೆ ಹಾಜರಾಗಿದ್ದರು. ಒಬ್ಬ ಮಹಿಳೆ ಹಾಗೂ ಇಬ್ಬರು ವೃದ್ಧರು ಕೂಡ ಇಲ್ಲಿದ್ದರು. ಹತ್ತು ವರ್ಷಗಳಿಂದ ಯಾವುದೇ ಅಪರಾಧ ಕೃತ್ಯದಲ್ಲಿ ತೊಡಗದೆ ನಡೆತೆ ಸುಧಾರಿಸಿಕೊಂಡವರನ್ನು ಪಟ್ಟಿಯಿಂದ ಕೈಬಿಡುವುದಾಗಿ ರಾಧಿಕಾ ಭರವಸೆ ನೀಡಿದರು.

‘ಕಳವು ಕೃತ್ಯವನ್ನು ಸಂಪೂರ್ಣವಾಗಿ ಕೈಬಿಟ್ಟು ಉದ್ಯೋಗದತ್ತ ಗಮನ ಹರಿಸಿ. ಕೃಷಿ, ಆಟೊ ಚಾಲನೆ, ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳಿ. ಇದೇ ಕೃತ್ಯದಲ್ಲಿ ಮತ್ತೆ ಸಿಕ್ಕಿಬಿದ್ದರೆ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಇದು ಕೊನೆಯ ಎಚ್ಚರಿಕೆ’ ಎಂದು ಹೇಳಿದರು.

‘ಎಂಒಬಿ ಪಟ್ಟಿಯಲ್ಲಿರುವ ಪ್ರತಿಯೊಬ್ಬರ ಮಾಹಿತಿ ದೇಶದ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಲಭ್ಯವಿದೆ. ಚಿತ್ರದುರ್ಗ ತೊರೆದು ಮತ್ತೊಂದು ಸ್ಥಳದಲ್ಲಿ ಸಕ್ರಿಯರಾದರೆ ಪೊಲೀಸರು ಬೆನ್ನುಬೀಳುತ್ತಾರೆ. ತಂತ್ರಜ್ಞಾನ ಸಾಕಷ್ಟು ಸುಧಾರಣೆ ಕಂಡಿದ್ದು ಕ್ಷಣಾರ್ಧದಲ್ಲಿ ಪತ್ತೆ ಮಾಡಲಾಗುತ್ತದೆ. ಕುಟುಂಬದ ವಿವರ, ಫೋಟೊ ಹಾಗೂ ದಾಖಲೆಗಳನ್ನು ಠಾಣೆಗೆ ಒದಗಿಸಿ’ ಎಂದು ಸೂಚನೆ ನೀಡಿದರು.

ಸರ್ಕಾರಿ ಉದ್ಯೋಗಕ್ಕೆ ಕುತ್ತು:ಎಂಒಬಿ ಪಟ್ಟಿ ಸೇರಿದ್ದ ಯುವಕನೊಬ್ಬನ ಸರ್ಕಾರಿ ಉದ್ಯೋಗಕ್ಕೆ ಕುತ್ತು ಎದುರಾಗಿರುವ ಸಂಗತಿಯನ್ನು ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಪರೇಡ್‌ನಲ್ಲಿ ಬಹಿರಂಗಪಡಿಸಿದರು.

23 ವರ್ಷದ ಯುವಕನೊಬ್ಬ ಸರ್ಕಾರಿ ಉದ್ಯೋಗಕ್ಕೆ ಆಯ್ಕೆ ಆಗಿದ್ದಾರೆ. ದಾಖಲೆಗಳ ಪರಿಶೀಲನೆಗೆ ಕಡತ ಪೊಲೀಸ್‌ ಠಾಣೆಗೆ ಬಂದಾಗ ಯುವಕ ಎಂಒಬಿ ಪಟ್ಟಿಯಲ್ಲಿ ಇರುವುದು ಗೊತ್ತಾಗಿದೆ. ಅಪರಾಧ ಪ್ರಕರಣಗಳ ಹಿನ್ನೆಲೆ ಇರುವ ವ್ಯಕ್ತಿಗೆ ಸರ್ಕಾರಿ ಉದ್ಯೋಗ ಸಿಗುವುದು ಅನುಮಾನ.

ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 2015ರಲ್ಲಿ ನಡೆದ ದೇಗುಲದ ಹುಂಡಿ ಕಳವು ಪ್ರಕರಣದಲ್ಲಿ ಯುವಕ ಸಿಕ್ಕಿ ಬಿದ್ದಿದ್ದ. 18ನೇ ವಯಸ್ಸಿನಲ್ಲಿ ಮಾಡಿದ ಕಳವು ಕೃತ್ಯ ಯುವಕನ ಭವಿಷ್ಯಕ್ಕೆ ಆಪತ್ತು ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT