ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂದೂಕಿನ ಗುಂಡು ತಗುಲಿ ಬಾಲಕ ಸಾವು: ತಡವಾಗಿ ಪ್ರಕರಣ ಬೆಳಕಿಗೆ

ಪಟ್ಟಣದ ಕೂಗೆಬಂಡಿಯಲ್ಲಿ ಮಾ.3 ರಂದು ನಡೆದಿದ್ದ ಘಟನೆ
Published 28 ಜೂನ್ 2024, 16:32 IST
Last Updated 28 ಜೂನ್ 2024, 16:32 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಪಟ್ಟಣ ಸಮೀಪದ ಕೂಗೆಬಂಡಿ ಬೆಟ್ಟದಲ್ಲಿ ಬಾಲಕನೊಬ್ಬ ಆಕಸ್ಮಿಕವಾಗಿ ಬಂದೂಕಿನ ಗುಂಡು ತಗುಲಿ ಮೃತಪಟ್ಟ ಘಟನೆಯನ್ನು ಬೇಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.

2024 ಮಾ.3ರಂದು ಘಟನೆ ನಡೆದಿದ್ದು, ಮೂರೂವರೆ ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಬಾಲಕನನ್ನು ಇಲ್ಲಿನ ಕೋಟೆ ಬಡಾವಣೆಯ ಮಹೇಶ್‌ (14) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಕೋಟೆ ಬಡಾವಣೆ ವಾಸಿ, ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಮಹಾದೇವಿ ಎಂಬುವವರ ಪುತ್ರ ಮಹೇಶ್‌ ಮಾ.3 ರಂದು ಬಂದೂಕು ತೆಗೆದುಕೊಂಡು ಸಮೀಪದ ಬೆಟ್ಟಕ್ಕೆ ತೆರಳಿದ್ದಾನೆ. ಅಲ್ಲಿ ಬಂದೂಕಿನ ಗುಂಡು ಆಕಸ್ಮಿಕವಾಗಿ ಹೊರಬಂದು ಮುಖದ ಭಾಗಕ್ಕೆ ತಗುಲಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಆಗ ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದ ತಾಯಿ ಮಹಾದೇವಿ ಅವರಿಗೆ ಮಹೇಶ್‌ ಸಂಬಂಧಿ ಹೊನ್ನೂರಸ್ವಾಮಿ ಎಂಬುವರು ಈ ವಿಷಯ ತಿಳಿಸಿದ್ದರು. ನಂತರ ಮಹಾದೇವಿ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದರು. ‘ಘಟನೆ ಯಾರಿಗೂ ತಿಳಿಯದ ಕಾರಣ ಹೆಣ ಸುಟ್ಟು ಹಾಕೋಣ’ ಎಂದು ಹೊನ್ನೂರಸ್ವಾಮಿ ಹೇಳಿ, ನಂತರ ಸುಟ್ಟು ಹಾಕಿದ್ದರು. ಬಾಲಕ ಮಹೇಶ್ ಬಂದೂಕನ್ನು ಬೆಟ್ಟಕ್ಕೆ ತಂದಿದನ್ನು ಅಲ್ಲಿ ಕುರಿ ಕಾಯುತ್ತಿದ್ದ ಭರತ್‌ ಮತ್ತು ಪ್ರಜ್ವಲ್‌ ಎಂಬುವರು ನೋಡಿದ್ದಾರೆ ಎಂದು ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮೃತದೇಹವನ್ನು ಸುಟ್ಟು ಹಾಕಿರುವ ಹೊನ್ನೂರಸ್ವಾಮಿ ಮತ್ತು ಬಂದೂಕು ಮಾಲೀಕ ಎದ್ದಲ ಬೊಮ್ಮಯ್ಯನಹಟ್ಟಿಯ ನಾಗರಾಜ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಅನಾಮಿಕ ವ್ಯಕ್ತಿಯೊಬ್ಬ ಘಟನೆ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಹೊನ್ನೂರಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಪಿಐ ವಸಂತ್‌ ಆಸೋದೆ, ಪಿಎಸ್‌ಐ ಜಿ. ಪಾಂಡುರಂಗಪ್ಪ, ಈರೇಶ್‌ ಹಾಗೂ ಸಿಬ್ಬಂದಿ ತನಿಖೆ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT