ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು | ಸಾರ್ವಜನಿಕ ಆಸ್ಪತ್ರೆಗೇ ಅನಾರೋಗ್ಯ!

Published 28 ಆಗಸ್ಟ್ 2023, 7:06 IST
Last Updated 28 ಆಗಸ್ಟ್ 2023, 7:06 IST
ಅಕ್ಷರ ಗಾತ್ರ

ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ತಜ್ಞ ವೈದ್ಯರು ವರ್ಗಾವಣೆಯಾಗಿರುವ ಪರಿಣಾಮ ಹುದ್ದೆಗಳು ಖಾಲಿ ಆಗಿದ್ದು, ಮುಂದಿನ ದಿನಗಳಲ್ಲಿ ಜನರಿಂದ ತಜ್ಞರಿಂದ ಚಿಕಿತ್ಸೆ ದೊರೆಯದೇ ತೊಂದರೆಯಾಗುವ ಆತಂಕ ಎದುರಾಗಿದೆ.

ಗಡಿಭಾಗದ ಈ ಆಸ್ಪತ್ರೆಯು ಆರಂಭದಿಂದಲೂ ವೈದ್ಯರ ಕೊರತೆ ಎದುರಿಸುತ್ತಿದೆ. ಈಚೆಗೆ 100 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿದ ಮೇಲೆ ಅಂದಿನ ಶಾಸಕ ಬಿ. ಶ್ರೀರಾಮುಲು ಆರೋಗ್ಯ ಸಚಿವರೂ ಆಗಿದ್ದ ಕಾರಣ ಬಹುತೇಕ ಎಲ್ಲಾ ಮಂಜೂರಾತಿ ಹುದ್ದೆಗಳು ಭರ್ತಿಯಾಗಿದ್ದವು. 4 ವರ್ಷ ವೈದ್ಯರ ಕೊರತೆ ಇರಲಿಲ್ಲ. ಈಗ ಮರಳಿ ಹಿಂದಿನ ಸ್ಥಿತಿಗೆ ಮುಟ್ಟುವ ಆತಂಕ ಎದುರಾಗಿದೆ.

100 ಹಾಸಿಗೆ ಆಸ್ಪತ್ರೆಗೆ ಇರುವಷ್ಟು ಸಿಬ್ಬಂದಿಯಿಂದ ಸೇವೆ ನೀಡುವುದು ಅಸಾಧ್ಯದ ಮಾತು. ಸರ್ಕಾರದ ಮೇಲೆ ಒತ್ತಡ ತಂದು ಎಲ್ಲಾ ವೈದ್ಯರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕಿದೆ.
ಮೋಹನ್ ಕನಕ ಆರೋಗ್ಯ ಸಮಿತಿ ಮಾಜಿ ಸದಸ್ಯ ಮೊಳಕಾಲ್ಮುರು

ಆಸ್ಪತ್ರೆಯಲ್ಲಿ 11 ತಜ್ಞ ವೈದ್ಯರು ಮತ್ತು ನಾಲ್ವರು ಸಾಮಾನ್ಯ ವೈದ್ಯರ ಮಂಜೂರು ಹುದ್ದೆಗಳು ಇವೆ. ಇದರಲ್ಲಿ ಶಸ್ತ್ರಚಿಕಿತ್ಸಕ, ಕಿವಿ, ಮೂಗು, ಗಂಟಲು ತಜ್ಞ, ಅರಿವಳಿಕೆ ತಜ್ಞ, ಕಣ್ಣು, ಚರ್ಮರೋಗ ತಜ್ಞರ ಹುದ್ದೆಗಳು ಖಾಲಿಯಾಗಿವೆ. ನಾಲ್ವರು ಸಾಮಾನ್ಯ ವೈದ್ಯರ ಹುದ್ದೆಗಳು ಖಾಲಿ ಇವೆ. ಸ್ತ್ರೀರೋಗ, ಮಕ್ಕಳ ತಜ್ಞ, ಫಿಜಿಷಿಯನ್, ಮೂಳೆ ತಜ್ಞ, ದಂತ ವೈದ್ಯರು ಮಾತ್ರ ಇದ್ದಾರೆ. ಇವರಲ್ಲಿ ಇಬ್ಬರು ವರ್ಗಾವಣೆ ಪ್ರಯತ್ನದಲ್ಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಆಸ್ಪತ್ರೆ ಹೆಚ್ಚು ಸೌಲಭ್ಯವನ್ನು ಕಂಡಿತ್ತು. ಹೆಚ್ಚುವರಿ ಬೆಡ್ ವ್ಯವಸ್ಥೆ, ವೆಂಟಿಲೇಟರ್‌ ಸೌಲಭ್ಯ, ಆಧುನಿಕ ತಂತ್ರಜ್ಞಾನದ ಲ್ಯಾಮಿನರ್ ಶಸ್ತ್ರಚಿಕಿತ್ಸೆ ಕೊಠಡಿ, ಡಯಾಲಿಸಿಸ್ ಸೌಲಭ್ಯ ಸ್ಥಾಪನೆಯಾಗಿದ್ದವು. ಅರಿವಳಿಕೆ ತಜ್ಞರು ಇಲ್ಲದ ಕಾರಣ ಮೂಳೆ ಚಿಕಿತ್ಸೆ, ಲಾಮಿನಾರ್ ಶಸ್ತ್ರಚಿಕಿತ್ಸೆಗೆ ಮತ್ತು ಹೆರಿಗೆ ಶಸ್ತ್ರಚಿಕಿತ್ಸೆಗಳಿಗೆ ತೀವ್ರ ತೊಂದರೆಯಾಗಿದೆ ಸಿಬ್ಬಂದಿಯೊಬ್ಬರು ಹೇಳಿದರು.

ವೈದ್ಯರ ಸಮಸ್ಯೆ ಗಮನಕ್ಕೆ ಬಂದಿದ್ದು ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಒಬ್ಬ ವೈದ್ಯೆ ಶೀಘ್ರ ಸೇವೆಗೆ ಹಾಜರಾಗಲಿದ್ದಾರೆ. ಉಳಿದ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು.
ಎನ್.ವೈ. ಗೋಪಾಲಕೃಷ್ಣ, ಶಾಸಕ, ಮೊಳಕಾಲ್ಮರು

ಈ ಆಸ್ಪತ್ರೆಗೆ ಮೊಳಕಾಲ್ಮುರು, ನೆರೆಯ ಕೂಡ್ಲಿಗಿ ಮತ್ತು ರಾಯದುರ್ಗ ತಾಲ್ಲೂಕುಗಳಿಂದ ರೋಗಿಗಳು ಬರುತ್ತಾರೆ. ನಿತ್ಯ 500ಕ್ಕೂ ಹೆಚ್ಚು ಹೊರರೋಗಿಗಳು ಬಂದು ಹೋಗುತ್ತಾರೆ. ವೈದ್ಯರ ಕೊರತೆ ಸರಿದೂಗಿಸಲು ಆರ್‌ಬಿಎಸ್‌ಕೆ ಯೋಜನೆ ವೈದ್ಯರನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ಅನಸೂಯಮ್ಮ ತಿಳಿಸಿದರು.

ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ, ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಡತನ ರೇಖೆಗಿಂತ ಕೆಳಗಿನವರು ಸರ್ಕಾರಿ ಆಸ್ಪತ್ರೆಯನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ. ಈ ವರ್ಷ ಬರಗಾಲದ ಛಾಯೆ ಆವರಿಸಿರುವುದು ಜನರನ್ನು ಹೈರಾಣಾಗಿಸಿದೆ. ಈ ಸಮಯದಲ್ಲಿ ವೈದ್ಯರ ಕೊರತೆ ನುಂಗಲಾರದ ತುತ್ತಾಗಿದೆ. ವೈದ್ಯರ ಹುದ್ದೆ ತುಂಬಲು ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಯುವ ಜಾಗೃತಿ ವೇದಿಕೆ ಅಧ್ಯಕ್ಷ ಬಿ. ವಿಜಯ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT