ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರಿನಲ್ಲೊಬ್ಬ ನೇಕಾರಿಕೆ ಕನಸುಗಾರ...!

Last Updated 23 ಡಿಸೆಂಬರ್ 2019, 18:30 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಜಾಗತೀಕರಣ ಸುಳಿಗೆ ಸಿಲುಕಿ ನೇಕಾರಿಗೆ ಮರೆಗೆ ಸರಿಯುತ್ತಿರುವ ಆತಂಕ ಒಂದೆಡೆ. ವಿಮುಖವಾಗಿರುವ ನೇಕಾರರನ್ನು ಮತ್ತೆ ವೃತ್ತಿಗೆ ವಾಪಾಸ್ ಕರೆತಂದು ಯಶಸ್ವಿಯಾಗುತ್ತೇನೆ ಎಂದು ಕೈಮಗ್ಗ ನೇಕಾರಿಕೆಗೆ ಕೈಹಾಕಿ ಯಶಸ್ವಿನ ಕೆಲ ಮೆಟ್ಟಿಲು ಏರಿರುವ ಮೊಳಕಾಲ್ಮುರಿನ ಕನಸುಗಾರ ನೇಕಾರ ಮಂಚಿ ಮಾರುತಿ.

ಹಲವು ಪ್ರಶಸ್ತಿಗೆ ಭಾಜನರಾಗಿರುವ ಅವರು ಇದಕ್ಕೂ ಮಿಗಿಲಾಗಿ ನೇಕಾರಿಕೆಯಲ್ಲಿ ಏನಿಲ್ಲಪ್ಪಾ ಎಂದು ಮೂಗು ಮುರಿಯುವವರಿಗೆ ಏಕೆ ಇದೆಯಲ್ಲಾ ಎಂಬುದನ್ನು ಕಾರ್ಯರೂಪಕ್ಕೆ ಇಳಿಸಿದ್ದಾರೆ. ‘ಪ್ರಜಾವಾಣಿ’ ಜತೆ ಈ ಕುರಿತು ಹಂಚಿಕೊಂಡಿರುವ ಕಿರು ಮಾಹಿತಿ ಇಲ್ಲಿದೆ.

* ನಿಮ್ಮ ಕುಟುಂಬದ ಬಗ್ಗೆ ಹೇಳಿ.

ಹುಟ್ಟೂರು ಮೊಳಕಾಲ್ಮುರು. ತಂದೆ ಮಂಚಿ ನಾಗರಾಜ್, ತಾಯಿ ಅನಂತಮ್ಮ ದಂಪತಿಗೆ ಎರಡನೇ ಮಗ ನಾನು. 1983ರಲ್ಲಿ ಜನನ. ಕಡುಬಡತನ ಇದ್ದ ಪರಿಣಾಮ 7ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಬೇಕಾಯಿತು. ನಂತರ ಮನೆಯಲ್ಲಿದ್ದ ನೇಕಾರ ವೃತ್ತಿ ಜತೆಯಾಯಿತು.

* ನೇಕಾರಿಕೆ ನಿಮಗೆ ಹೇಗೆ ಒಲಿದು ಬಂದಿತು ?

ನಮ್ಮ ಮನೆ ಕಸುಬು ನೇಕಾರಿಕೆ. ಮನೆಯಲ್ಲಿ 4 ದಶಕದಿಂದ ನೇಕಾರಿಕೆ ಮಾಡಲಾಗುತ್ತಿದೆ. ವಿದ್ಯಾಭ್ಯಾಸದಿಂದ ವಿಮುಖವಾದ ನಂತರ ತಾಯಿಯಿಂದ ನೇಕಾರಿಕೆ ನಂಟು ಬೆಳೆಯಿತು. ತಾಯಿಯೇ ವೃತ್ತಿ ಗುರು. ಹೊಟ್ಟೆಪಾಡಿಗೆ 13 ವರ್ಷದನಾಗಿದ್ದಾಗ ಅಂಟಿದ ವೃತ್ತಿ ನಂಟಿಗೆ ಈಗ 23 ವರ್ಷವಾಗಿದೆ.

* ನೇಕಾರಿಕೆಯಿಂದ ಜನರು ದೂರವಾಗುತ್ತಿದ್ದಾರೆ. ನೀವು ಹತ್ತಿರವಾಗಲು ಹೊರಟಿದ್ದೀರಿ ಕಾರಣ?

ನೇಕಾರಿಕೆಯಲ್ಲಿ ಜನರು ಏನೂ ಲಾಭವಿಲ್ಲ, ಹೊಟ್ಟೆಪಾಡು ನಡೆಯುವುದಿಲ್ಲ ಎಂದು ದೂರವಾಗಿರಬಹುದು. ಇದು ತಪ್ಪು ಗ್ರಹಿಕೆ. ವೃತ್ತಿ ದೃಷ್ಠಿಕೋನಗಳು ಬದಲಾಗಿದ್ದು ಇದಕ್ಕೆ ತಕ್ಕನಾಗಿ ನಾವು ನಡೆಯಬೇಕಿದೆ. ಕೂಲಿ ನೇಕಾರನಾಗಿದ್ದ ನಾನು ಈಗ 54 ಕೈಮಗ್ಗಗಳ ಮಾಲೀಕನಾಗಿರುವುದು ಇದಕ್ಕೆ ಸಾಕ್ಷಿ. ವೃತ್ತಿಯನ್ನು ಓರೆಗೆ ಹಚ್ಚಿದಲ್ಲಿ ಹೊಸ ಹಾದಿಗಳು ಗೋಚರಿಸುತ್ತವೆ ಎಂಬುದಕ್ಕೆ ಇದು ಸಾಕ್ಷಿ.

* ವಿಶೇಷ ಸಾಧನೆಗಳನ್ನು ಮಾಡಲು ಪ್ರೇರಣೆ ?

ಗೊತ್ತಿರುವ ವೃತ್ತಿಯಲ್ಲೇ ಸಾಧನೆ ಮಾಡಬೇಕು ಎಂಬ ಛಲ. ಸದ್ಯ 54 ಮಗ್ಗಗಳನ್ನು ಹಾಕಿದ್ದು 54 ಮಂದಿಗೆ ನೇರ ಮತ್ತು 30 ಮಂದಿಗೆ ಪರೋಕ್ಷವಾಗಿ ಕೆಲಸ ನೀಡಿರುವ ತೃಪ್ತಿ ಇದೆ. ಎರಡು ವರ್ಷದಲ್ಲಿ ಈ ಸಾಧನೆಯಾಗಿದೆ. 2014ರಲ್ಲಿ 4 ಮಗ್ಗಗಳಿದ್ದು, ಈಗ 54 ಮಗ್ಗಗಳಿವೆ. ನೂಲಿಗೆ ಬಣ್ಣ ಹಾಕುವುದರಿಂದ ನಮ್ಮ ಕೆಲಸ ಆರಂಭವಾಗುತ್ತದೆ. ವೃತ್ತಿಯ ತಾಂತ್ರಿಕ ಮಾಹಿತಿ ಹಾಗೂ ಅದಕ್ಕೆ ಇರುವ ಮೌಲ್ಯದ ಮಾಹಿತಿ ಕೊರತೆ ಬಹುತೇಕ ನೇಕಾರರು ವೃತ್ತಿಯಿಂದ ದೂರವಾಗಲು ಹಾಗೂ ತಪ್ಪು ಗ್ರಹಿಕೆಗೆ ಅನುವು ಮಾಡಿಕೊಟ್ಟಿದೆ.

* ನಿಮ್ಮ ವೃತ್ತಿ ಮಾಹಿತಿ ನೀಡಿ.

ಕುಟ್ಟುಸೀರೆ ಮೊಳಕಾಲ್ಮುರು ಖ್ಯಾತಿಗೆ ಮುಖ್ಯ ಕಾರಣ. ಮೂರು ಲಾಳಿ ಬಳಸಿ ಈ ಸೀರೆ ನೇಯ್ಗೆ ಮಾಡಲಾಗುತ್ತದೆ. ಇದು ಕೈಮಗ್ಗದಲ್ಲೇ ತಯಾರಾಗಬೇಕು. ಬೆಂಗಳೂರಿನಲ್ಲಿ ಇದ್ದ ನೇಕಾರರನ್ನು ವಾಪಾಸ್ ಕರೆತಂದು ನೇಯ್ಗೆ ಮಾಡಿಸುತ್ತಿದ್ದೇನೆ. ಪ್ರತಿ ಸೀರೆಗೆ ₹ 2,500- ₹ 8,000ರ ವರೆಗೆ ಕೂಲಿ ನೀಡಲಾಗುತ್ತಿದೆ. ವಾಪಾಸ್ ಬಂದವರು ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ. ಮಹೇಶ್ ಎಂಬ ಯುವಕ ತಿಂಗಳಿಗೆ ₹ 30 ಸಾವಿರ ದುಡಿಯುತ್ತಿದ್ದಾನೆ. ಕೆಲಸ ಮಾಡುತ್ತೇವೆ ಎಂದು ಬಂದಲ್ಲಿ ಉತ್ತಮ ಕೂಲಿ ನೀಡುವುದು ನನ್ನ ಗುರಿ. ಎಲ್ಲಾ ಬಂಡವಾಳ ನಾವೇ ಹೂಡುತ್ತೇವೆ.

* ಸಾಧನೆ ಮತ್ತು ಸಿಕ್ಕಿರುವ ಪ್ರಶಸ್ತಿಗಳ ಮಾಹಿತಿ.

ಉದಯಿಸುತ್ತಿರುವ ದೇವಸ್ಥಾನ ನೇಯ್ಗೆ, ಎಂಬ್ರೋಜನ್ ನೇಯ್ಗೆ, ವಿವಿಧ ಆಕರ್ಷಕ ಡಿಸೈನ್ ಗಳು, ಮಹಾತ್ಮ ಗಾಂಧೀಜಿ ಅವರ 150 ಜನ್ಮ ಶತಮಾನೋತ್ಸವಕ್ಕೆ ವಿಶೇಷ ಶಾಲು ನೇಯ್ಗೆ. ಶಾಲು ನೇಯ್ಗೆ ರಾಷ್ಟ್ರ ಪ್ರಶಸ್ತಿ ಆಯ್ಕೆ ಸಮಿತಿ ಮುಂದಿದ್ದು, ಫಲಿತಾಂಶ ಬರಬೇಕಿದೆ. ಹೈದರಾಬಾದ್‌ನಲ್ಲಿ ನಡೆದ 5 ರಾಜ್ಯಗಳ ಸಮ್ಮೇಳನದಲ್ಲಿ ಉತ್ತಮ ನೇಕಾರ ಪ್ರಶಸ್ತಿ ಸಿಕ್ಕಿದೆ. 2016ರಲ್ಲಿ ರಾಜ್ಯ ಪ್ರಶಸ್ತಿ, ದೇವರ ದಾಸಿಯಯ್ಯ ಪ್ರಶಸ್ತಿ ಲಭಿಸಿದೆ.

* ನಿಮ್ಮ ಕನಸಿನ ಬಗ್ಗೆ ಹೇಳಿ.

2022ರ ಹೊತ್ತಿಗೆ 100 ಕೈಮಗ್ಗಗಳನ್ನು ಸ್ಥಾಪಿಸಿ ನೂರಾರು ಜನಕ್ಕೆ ಕೆಲಸ ನೀಡಬೇಕು ಎಂಬ ಗುರಿಯಿದೆ. ಖಂಡಿತ ಇದನ್ನು ಮುಟ್ಟುವ ನಂಬಿಕೆಯಿದೆ. ಹೊಸಬರು ಈ ಕೆಲಸ ಮಾಡುವುದಿಲ್ಲ. ಆದ್ದರಿಂದ ಗುಳೆ ಹೋಗಿರುವ ನೇಕಾರರನ್ನು ವಾಪಾಸ್ ಕರೆತಂದು ಕೆಲಸ ನೀಡಬೇಕು ಎಂಬುದು ನನ್ನ ಆಸೆ. ನೇಕಾರಿಕೆಯಲ್ಲೂ ಹೊಟ್ಟೆಪಾಡು ನಡೆಯುತ್ತದೆ ಎಂಬುದನ್ನು ತೋರಿಸಿಕೊಡಬೇಕು ಎಂಬ ಛಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT