ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಹರಂ: ಶಾಂತಿಗಾಗಿ ಹುತಾತ್ಮರಾದವರನ್ನು ಸ್ಮರಿಸುವ ಶೋಕದ ಹಬ್ಬ

Published : 29 ಜುಲೈ 2023, 5:10 IST
Last Updated : 29 ಜುಲೈ 2023, 5:10 IST
ಫಾಲೋ ಮಾಡಿ
Comments

ವಿ.ಧನಂಜಯ

ನಾಯಕನಹಟ್ಟಿ: ಹುತಾತ್ಮರನ್ನು ಸ್ಮರಿಸುವ ಶೋಕದ ಹಬ್ಬವಾಗಿ ಆರಂಭಗೊಂಡ ಮೊಹರಂ ಕಾಲಕಳೆದ ನಂತರ ಭಾವೈಕ್ಯ ಬೆಸೆಯುವ ಹಬ್ಬವಾಗಿ ಕಂಡು ಬರುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ಜನರಲ್ಲಿ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಯ ಧರ್ಮನಿರಪೇಕ್ಷ ಹಬ್ಬವಾಗಿ ಆಚರಣೆಯಾಗುತ್ತಿದೆ.

ಮೊಹರಂ ಎಂದರೆ ಮಹಮ್ಮದೀಯರ ಮೊದಲ ತಿಂಗಳು. ಇಲ್ಲಿಂದ ಇಸ್ಲಾಂ ಹೊಸ ಕ್ಯಾಲೆಂಡರ್ ಆರಂಭವಾಗುತ್ತದೆ. ಈ ಹಬ್ಬಕ್ಕೆ ಬಹುದೊಡ್ಡ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆ ಇದೆ. ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಹಜರತ್ ಹಸನ್ ಮತ್ತು ಹುಸೇನರ ಪುಣ್ಯ ಸ್ಮರಣೆಯ ನಿಮಿತ್ತ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ.

ಜಾತಿ, ಧರ್ಮ, ಭೇದ– ಭಾವದ ಹಂಗಿಲ್ಲದೇ ಮನುಕುಲ ಒಂದೇ ಎಂಬ ಸಂದೇಶ ಸಾರಿ, ಸರ್ವಧರ್ಮಗಳ ಭಾವೈಕ್ಯದ ಕೊಂಡಿಯಾಗಿರುವ ಮೊಹರಂ ಹಬ್ಬದ ಆಚರಣೆಯು ಆಧುನಿಕ ಯುಗದಲ್ಲೂ ಸ್ನೇಹ, ಸೌಹಾರ್ದ, ಸಹೋದರತ್ವದ ಸಂಕೇತವಾಗಿ ನಡೆದುಕೊಂಡು ಬರುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮೊಹರಂ ಜಾನಪದೀಯ ನೆಲೆಯನ್ನು ಕಂಡುಕೊಂಡು ಧರ್ಮದ ಮೇರೆಯನ್ನು ಮೀರಿದೆ. ಆ ಮೂಲಕ ಆದಿಕವಿ ಪಂಪ ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಉಕ್ತಿಗೆ ಬಾಷ್ಯವನ್ನು ಬರೆದ ಹಬ್ಬವಾಗಿ ಮೊಹರಂ ಕಂಡು ಬರುತ್ತಿದೆ.

ಇದಕ್ಕೆ ಅಲಾಯಿ ಹಬ್ಬ, ಗ್ರಾಮೀಣ ಭಾಗದಲ್ಲಿ ‘ಬಾಬಯ್ಯನ ಹಬ್ಬ’ ಎಂತಲೂ ಕರೆಯುತ್ತಾರೆ. ಹಳ್ಳಿಗಳಲ್ಲಿ ಈ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ. ಈ ಹಬ್ಬದಲ್ಲಿ ಚಿಣ್ಣರನ್ನು ನೋಡುವುದೇ ಒಂದು ಸೊಗಸು. 5 ದಿನಗಳವರೆಗೆ ಕೂರಿಸಲಾಗುವ ಅಲಾಯಿ (ಪಂಜಾ) ದೇವರಿಗೆ ವೃತ್ತಾಕಾರದಲ್ಲಿ ಗುಣಿ ತೆಗೆದು ಹರಕೆ ಹೊತ್ತ ನೂರಾರು ಯುವಕರು ಅಗ್ನಿಕುಂಡ ಪ್ರವೇಶ ಮಾಡುತ್ತಾರೆ. ಅಂದು ದೇವರಿಗೆ ಸಕ್ಕರೆಯನ್ನು ಅರ್ಪಿಸಿ ಪ್ರಸಾಧವಾಗಿ ಹಂಚುತ್ತಾರೆ.

ಹತ್ತು ದಿನಗಳವರೆಗೆ ನಡೆಯುವ ಈ ಹಬ್ಬದ ಆಚರಣೆಯು ಹಿಂದೂ– ಮುಸ್ಲಿಂ ಭೇದವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಈ ಹಬ್ಬದಲ್ಲಿ ಹೆಜ್ಜೆ ಕುಣಿತ, ಗೆಜ್ಜೆ ಕುಣಿತ, ಮರಗಾಲು ಕುಣಿತ, ಹುಲಿವೇಷ ಸೇರಿದಂತೆ ಹಲವು ಪ್ರಕಾರದಲ್ಲಿ ಕುಣಿಯುತ್ತಾರೆ. ಹಳ್ಳಿಗಳಲ್ಲಿ ಈ ಕುಣಿತಕ್ಕೆ ‘ಅಲಾಯಿ ಹೆಜ್ಜೆ ಕುಣಿತ’ ಎಂದು ಕರೆಯಲಾಗುತ್ತದೆ. ಈ ಹೆಜ್ಜೆ ಕುಣಿತ ನೋಡುವುದೇ ಒಂದು ವೈಭವ.

ಗ್ರಾಮೀಣ ಪ್ರದೇಶದಲ್ಲಿ ಮೊಹರಂ ಆಚರಣೆಯಲ್ಲಿ ಮುಸ್ಲಿಮೇತರರೇ ಹೆಚ್ಚಾಗಿ ಭಾಗವಹಿಸಿ ಹರಕೆ ಹೊತ್ತು ಹಿಂದೂ– ಮುಸ್ಲಿಮರು ಹುಲಿವೇಷ, ಅಳ್ಳಳ್ಳಿ ಬುಕ್ಕಾ ವೇಷ ಹಾಕಿ ಕುಣಿದು ಕುಪ್ಪಳಿಸಿ ನೋಡುಗರಿಗೆ ಮನೋರಂಜನೆಯ ನೀಡುತ್ತಾರೆ. ತರಹೇವಾರಿ ಬಟ್ಟೆಗಳಿಂದ ತಯಾರಿಸಿ ವಿಶೇಷ ಉಡುಪು ತೊಟ್ಟು ಮುಖಕ್ಕೆ ಕರಡಿ, ಕೋತಿಯಂತಹ ಮುಖವಾಡವನ್ನು ಧರಿಸಿ ರಸ್ತೆಯಲ್ಲಿ ಹೋಗಿ ಬರುವ ವಾಹನ ಸವಾರರಿಗೆ ಸಲಿಗೆಯಿಂದ ಮಾತನಾಡಿಸಿ ಅವರನ್ನು ಖುಷಿಯಲ್ಲಿ ತೇಲಿಸುವ ಪರಿಪಾಠವಂತೂ ಹೊಸ ಅನುಭವನ್ನು ನೀಡುತ್ತದೆ. ಆ ಮೂಲಕ ಕೊಡುವ ಚಿಕ್ಕಾಸನ್ನು ಜತನವಾಗಿಟ್ಟುಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT