ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಕುವೆಂಪು ಪುತ್ಥಳಿ, ನಟ ಪುನೀತ್ ರಾಜಕುಮಾರ್ ಪ್ರತಿಮೆ ತೆರವು

Published 27 ಅಕ್ಟೋಬರ್ 2023, 4:42 IST
Last Updated 27 ಅಕ್ಟೋಬರ್ 2023, 4:42 IST
ಅಕ್ಷರ ಗಾತ್ರ

ಹಿರಿಯೂರು (ಚಿತ್ರದುರ್ಗ): ನಗರದ ಪ್ರಧಾನ ರಸ್ತೆಯಲ್ಲಿ ಪ್ರತಿಷ್ಠಾಪಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಪುತ್ಥಳಿ ಹಾಗೂ ನಟ ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ನಗರಸಭೆ ಅಧಿಕಾರಿಗಳು ಗುರುವಾರ ತಡರಾತ್ರಿ ತೆರವುಗೊಳಿಸಿದ್ದಾರೆ.

ಪೊಲೀಸ್ ಭದ್ರತೆಯಲ್ಲಿ ನಗರಸಭೆ ಅಧಿಕಾರಿಗಳು ಪುತ್ಥಳಿ ಮತ್ತು ಪ್ರತಿಮೆ ತೆರವುಗೊಳಿಸಲು ಮುಂದಾದರು. ಮಾಹಿತಿ ತಿಳಿದ ರಕ್ಷಣಾ ವೇದಿಕೆ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಅಧಿಕಾರಿಗಳೊಂದಿಗೆ ಕೆಲಕಾಲ ವಾಗ್ವಾದ ನಡೆಸಿದರು. 'ಯಾವುದೇ ಮಾಹಿತಿ ನೀಡದೆಯೇ ಏಕಾಏಕಿ ಗಣ್ಯರ ಪ್ರತಿಮೆಗಳನ್ನು ತೆರವು ಗೊಳಿಸಿರುವುದು ನಾಡಿನ ಸಾಂಸ್ಕೃತಿಕ ವಲಯಕ್ಕೆ ಮಾಡಿರುವ ಅಪಮಾನ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅ.3ರಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ರಂಜಿತಾ ಹೋಟೆಲ್ ಮುಂಭಾಗದಲ್ಲಿ ರಾಷ್ಟ್ರಕವಿ ಕುವೆಂಪು ಪುತ್ಥಳಿ ಹಾಗೂ ಇಂದಿರಾ ಕ್ಯಾಂಟೀನ್ ಬಳಿ ನಟ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆಯನ್ನು ರಾತ್ರೋರಾತ್ರಿ ತಂದಿಟ್ಟು ಬಟ್ಟೆ ಸುತ್ತಿದ್ದರು.

ಅನುಮತಿ ಪಡೆಯದೇ ಪ್ರತಿಷ್ಠಾಪಿಸಿದ್ದ ಪುತ್ಥಳಿ ಹಾಗೂ ಪ್ರತಿಮೆ ವಿಚಾರ ನಗರಸಭೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳಿಗೆ ನಗರಸಭೆ ನೋಟಿಸ್ ಜಾರಿ ಮಾಡಲಾಗಿತ್ತು. ಪರವಾನಿಗೆ ಪಡೆಯದೇ ಈ ರೀತಿ ಪ್ರತಿಮೆಗಳನ್ನು ಪ್ರತಿಷ್ಠಾಪಿಸುವುದು ಸರಿಯಲ್ಲ ಎಂಬುದನ್ನು ವೇದಿಕೆ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಾಗಿತ್ತು .

ಈ ನಡುವೆ ಅ.22 ರಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತರಾತುರಿಯಲ್ಲಿ ಪುತ್ಥಳಿ ಮತ್ತು ಪ್ರತಿಮೆಯ ಬಟ್ಟೆಯನ್ನು ತೆಗೆದು ಪೂಜೆ ಮಾಡಿ ಅನಾವರಣಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT