ಭಾನುವಾರ, ಜೂನ್ 26, 2022
22 °C
ಉತ್ತರಾಧಿಕಾರಿ ನಿರ್ಧಾರ ಏಕಾಏಕಿ ಪ್ರಕಟ, ಮಠದ ಭಕ್ತರಲ್ಲಿ ಸಂಚಲನ

ಚಿತ್ರದುರ್ಗ: ಅನಿರೀಕ್ಷಿತ ವಿದ್ಯಮಾನಕ್ಕೆ ಸಾಕ್ಷಿಯಾದ ಮುರುಘಾ ಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಮುರುಘಾ ಮಠದ ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಏಕಾಏಕಿ ಪ್ರಕಟಿಸಿದ ನಿರ್ಧಾರ ಅಚ್ಚರಿಯ ವಿದ್ಯಮಾನಕ್ಕೆ ಸಾಕ್ಷಿಯಾಯಿತು.

ಮುರುಘಾ ಮಠದ ಶಿರಸಂಗಿ ಮಹಾಲಿಂಗ ಸ್ವಾಮೀಜಿ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಮಠದ ಹಿತೈಷಿ, ವಿವಿಧ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆ ಕರೆದಿದ್ದರು. ಆಡಳಿತಾಧಿಕಾರಿ ಎಸ್‌.ಕೆ. ಬಸವರಾಜನ್‌ ಕೂಡ ಪಾಲ್ಗೊಂಡಿದ್ದರು.

ಶಿವಮೂರ್ತಿ ಮುರುಘಾ ಶರಣರು ಕನ್ನಡ ವಿಶ್ವವಿದ್ಯಾಲಯದ ಡಿ.ಲಿಟ್‌ ಪದವಿಗೆ ಮಂಡಿಸಿದ ಮಹಾಪ್ರಬಂಧದ ಕೃತಿ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಶುಕ್ರವಾರ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೂ ಎರಡು ಗಂಟೆ ಮೊದಲೇ ಮಠದ ಅನುಯಾಯಿಗಳು, ಭಕ್ತರು, ಹಿತೈಷಿಗಳು, ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಶಾಖಾ ಮಠದ ಸ್ವಾಮೀಜಿಗಳ ಸಭೆ ಕರೆದರು. ಎಲ್ಲರೂ ಕುತೂಹಲದಿಂದ ಸಭೆಗೆ ಬಂದಿದ್ದರು. ಅವರ ಕೌತುಕಕ್ಕೆ ಕೊನೆಗೂ ತೆರೆಬಿದ್ದಿತು.

ಮುರುಘಾ ಮಠದ ಪರಂಪರೆಯ ಬಗ್ಗೆ ಮಾತು ಆರಂಭಿಸಿದ ಶರಣರು, ಗುರುಪೀಠ ಬೆಳೆದುಬಂದ ಪರಿಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಆಗ ಸಭೆಯಲ್ಲಿದ್ದ ಕೆಲವರಿಗೆ ಉತ್ತರಾಧಿಕಾರಿ ನೇಮಕದ ಬಗ್ಗೆ ಸುಳಿವು ಸಿಕ್ಕಿದೆ. ಸಮೀಪದಲ್ಲೇ ಇರುವ ಒಬ್ಬರನ್ನು ಘೋಷಣೆ ಮಾಡಬಹುದೆಂದು ಊಹಿಸಿದ್ದಾರೆ. ಎಲ್ಲರ ಸಮ್ಮುಖದಲ್ಲಿ ಬಸವಾದಿತ್ಯ ದೇವರನ್ನು ವೇದಿಕೆಗೆ ಆಹ್ವಾನಿಸಿ ಘೋಷಣೆ ಮಾಡಿದಾಗ ಅರೆಕ್ಷಣ ಅಚ್ಚರಿಗೊಳಗಾಗಿದ್ದಾರೆ. ಸರ್ವ ಸಮಾಜದ ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸುವುದಾಗಿಯೂ ಪ್ರಕಟಿಸಿದರು.

ಇಳಕಲ್‍ನ ಗುರುಮಹಾಂತ ಸ್ವಾಮೀಜಿ, ಅಥಣಿಯ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮೀಜಿ, ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ಗುರುಮಠಕಲ್‍ನ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಬ್ಯಾಡಗಿ ಮುಪ್ಪಿನಸ್ವಾಮಿ ವಿರಕ್ತಮಠದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಗಾಣಿಗ ಗುರುಪೀಠದ ಬಸವಕುಮಾರ ಸ್ವಾಮೀಜಿ, ಶಿದ್ದರಹಳ್ಳಿ ಪಾರಮಾರ್ಥ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ತಿಳುವಳ್ಳಿಯ ಬಸವನಿರಂಜನ ಸ್ವಾಮೀಜಿ ಇದ್ದರು.

‘ಆಭಾರಿಯಾಗಿದ್ದೇನೆ’
ಕರ್ನಾಟಕದ ಅತಿದೊಡ್ಡ ಮಠದ ಉತ್ತರಾಧಿಕಾರಿ ನೇಮಕದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಅತ್ಯಂತ ಸೌಭಾಗ್ಯ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಎಂ.ವೆಂಕಟಸ್ವಾಮಿ ಹರ್ಷ ವ್ಯಕ್ತಪಡಿಸಿದರು.

‘ಗುರುಗಳು ದೂರವಾಣಿ ಕರೆಮಾಡಿ ಮಠಕ್ಕೆ ಆಹ್ವಾನಿಸಿದರು. ಕುತೂಹಲದಿಂದಲೇ ಸಭೆಗೆ ಹಾಜರಾದೆ. ಇದೊಂದು ಅದ್ಭುತವಾದ ಕ್ಷಣ. ಹಿರಿಯ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಕಿರಿಯರು ನಡೆಯುವ ವಿಶ್ವಾಸವಿದೆ. ದಲಿತ ಸಮುದಾಯದ ಪರವಾಗಿ ಈ ಮಠ ಶ್ರಮಿಸಿದೆ. ದಲಿತ ಸಮುದಾಯದ ಪರವಾಗಿ ಮಠಕ್ಕೆ ಆಭಾರಿಯಾಗಿದ್ದೇನೆ’ ಎಂದು ಸಭೆಯಲ್ಲಿ ಅಭಿಪ್ರಾಯ ಹಂಚಿಕೊಂಡರು.

*
ಮುರುಘಾ ಮಠದ ಪರಂಪರೆಯಲ್ಲಿ ಉತ್ತರಾಧಿಕಾರಿ ನೇಮಕ ಸುಲಲಿತವಾಗಿ ನಡೆದಿದೆ. ಶಿವಮೂರ್ತಿ ಮುರುಘಾ ಶರಣರು ಇದೇ ಮಾರ್ಗವನ್ನು ಅನುಸರಿಸಿ ಭಕ್ತರಲ್ಲಿ ಸೃಷ್ಟಿಯಾಗಿದ್ದ ಗೊಂದಲ ನಿವಾರಿಸಿದ್ದಾರೆ.
-ಎಸ್.ಷಣ್ಮುಖಪ್ಪ, ಮುಖಂಡರು, ಚಿತ್ರದುರ್ಗ ವೀರಶೈವ ಸಮಾಜ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು