ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಇಂದು ನಗರಕ್ಕೆ ನಳೀನ್‌ಕುಮಾರ್ ಕಟೀಲ್

ಬಿಜೆಪಿ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಕೆ.ಎಸ್. ನವೀನ್
Last Updated 8 ಫೆಬ್ರುವರಿ 2020, 10:23 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಉಮಾಪತಿ ಕಲ್ಯಾಣ ಮಂಟಪದಲ್ಲಿ ಫೆ. 9 ರಂದು ಬೆಳಿಗ್ಗೆ 11ಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ಇಲ್ಲಿನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಕೆ.ಎಸ್. ನವೀನ್ ತಿಳಿಸಿದರು.

‘ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮುರುಳಿ ಅವರಿಗೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಜಿಲ್ಲಾ ಅಧ್ಯಕ್ಷರ ಜವಾಬ್ದಾರಿ ಹಸ್ತಾಂತರಿಸಲಾಗುವುದು. ಪದಗ್ರಹಣ ಸಮಾರಂಭದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು, ಚಿತ್ರದುರ್ಗ ಹಾಗೂ ದಾವಣಗೆರೆ ಸಂಸದರು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಾನು ಅಧಿಕಾರ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಬಿಜೆಪಿಯ ಏಕೈಕ ಶಾಸಕರಾಗಿ ಜಿ.ಎಚ್. ತಿಪ್ಪಾರೆಡ್ಡಿ ಮಾತ್ರ ಇದ್ದರು. ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಜಿಲ್ಲೆಯಲ್ಲಿ ಈಗ ಬಿಜೆಪಿಯ ಬೇರು ಆಳವಾಗಿ ಇಳಿದಿದೆ. ಇದಕ್ಕೆ ಪ್ರಧಾನಿ ನರೇಂದ್ರಮೋದಿ, ಕೇಂದ್ರದ ಗೃಹ ಸಚಿವ ಅಮಿತ್‌ ಶಾ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭೇಟಿ ನೀಡಿದ್ದು ಕಾರಣವಾಗಿದೆ. ಮುಖಂಡರ, ಕಾರ್ಯಕರ್ತರ ಶ್ರಮವೂ ಹೆಚ್ಚಿದೆ’ ಎಂದರು.

‘ಪಕ್ಷ ಬಲಪಡಿಸುವಲ್ಲಿ ಜಿಲ್ಲೆಯ ಶೇ 90ರಷ್ಟು ಬೂತ್‌ಗಳಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಚುರುಕುಗೊಳಿಸುವ ಕೆಲಸ ಮಾಡಿದ್ದೇನೆ. ಜನಾಶೀರ್ವಾದ ಸಿಕ್ಕ ನಂತರ ಈಗ ಐವರು ಶಾಸಕರು, ಸಂಸದರು ಇದ್ದಾರೆ. ನಮ್ಮ ನಿರ್ಲಕ್ಷ್ಯದಿಂದಾಗಿ ಗೆಲ್ಲಬಹುದಾದಂಥ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಕೈತಪ್ಪಿತು. ಈ ಕುರಿತು ನನಗೆ ನೋವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟೂ ಸಂಘಟನೆಯೊಂದಿಗೆ ಸಹಕಾರಿ ಕ್ಷೇತ್ರದ ಚುನಾವಣೆಗಳಲ್ಲೂ ಸಾಧನೆ ಮಾಡಲಿದ್ದೇವೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೂ ಹೆಚ್ಚು ಆದ್ಯತೆ ನೀಡಲಾಗುವುದು’ ಎಂದರು.

‘ಚಿತ್ರದುರ್ಗದಲ್ಲಿ ರಾಜವೀರ ಮದಕರಿನಾಯಕ ಥೀಮ್ ಪಾರ್ಕ್‌, ತಿಮ್ಮಣ್ಣನಾಯಕನ ಕೆರೆ ಬಳಿ ಪಕ್ಷಿಧಾಮ, ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು, ಚಳ್ಳಕೆರೆಯಲ್ಲಿ ಕೆಎಂಎಫ್ ಡೈರಿ, ಜಿಲ್ಲೆಯಲ್ಲಿ ಎರಡು ವಸ್ತ್ರೋದ್ಯಮ ಕೈಗಾರಿಕೆ ಸೇರಿ ಹಿರಿಯೂರು ತಾಲ್ಲೂಕನ್ನು ಕೈಗಾರಿಕಾ ಪ್ರದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.

ಇನ್ನೊಬ್ಬರಿಗೆ ಸಚಿವ ಸ್ಥಾನ ನೀಡಬೇಕಿತ್ತು: ‘ರಾಜ್ಯ ನಾಯಕರಾದ ಶ್ರೀರಾಮುಲು ಅವರನ್ನು ಹೊರತುಪಡಿಸಿ ಜಿಲ್ಲೆಯ ನಾಲ್ವರು ಬಿಜೆಪಿ ಶಾಸಕರು ಸಚಿವ ಸ್ಥಾನಕ್ಕೆ ಅರ್ಹರು. ಆದರೆ, ಎಲ್ಲರಿಗೂ ನೀಡಲು ಸಾಧ್ಯವಿಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅದರಲ್ಲಿ ಒಬ್ಬರಿಗಾದರೂ ನೀಡಬೇಕಿತ್ತು. ಯಾವ ಶಾಸಕರಿಗೂ ಕೊಡಬೇಡಿ ಎಂದು ಜಿಲ್ಲಾ ಘಟಕದಿಂದ ಶಿಫಾರಸು ಮಾಡಿಲ್ಲ’ ಎಂದು ಕೆ.ಎಸ್.ನವೀನ್ ಸ್ಪಷ್ಟಪಡಿಸಿದರು.

‘ಚುನಾವಣೆಗಳಲ್ಲೇ ಬಹುತೇಕ ಸಮಯ ಕಳೆದಿದ್ದರಿಂದ 2 ಮತ್ತು 3ನೇ ದರ್ಜೆಯ ನಾಯಕರನ್ನು ಜಿಲ್ಲೆಯಲ್ಲಿ ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ ಎಂಬ ನೋವು ನನಗಿದೆ. ನೂತನ ಅಧ್ಯಕ್ಷರು ಅದನ್ನು ಸರಿದೂಗಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಮುರುಳಿ, ‘ಪದಗ್ರಹಣ ಕಾರ್ಯಕ್ರಮಕ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಬರುತ್ತಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದೆ. ನಮ್ಮ ಶಾಸಕರು, ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ’ ಎಂದು ಹೇಳಿದರು.

ಮಾಧ್ಯಮ ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಮುಖಂಡ ಸಂಪತ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT