ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕಾರಣಿಗಳು ನಾಲ್ವಡಿ ವಿಚಾರಧಾರೆ ಪಾಲಿಸಲಿ’

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
Last Updated 4 ಜೂನ್ 2019, 12:23 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಇಂದಿನ ರಾಜಕಾರಣಿಗಳು ನಾಲ್ವಡಿ ಕೃಷ್ಣರಾಜ ಒಡೆಯರ ವಿಚಾರಧಾರೆ, ಮುಂದಾಲೋಚನೆ ಪಾಲಿಸಿದರೆ ದೇಶ ಅಭಿವೃದ್ಧಿಯಾಗುತ್ತದೆ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದ ಭೋವಿ ಗುರುಪೀಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ನಾಲ್ವಡಿ ಕೃಷ್ಣರಾಜ ಒಡೆಯರ್ ಹತ್ತನೇ ವಯಸ್ಸಿನಲ್ಲಿಯೇ ರಾಜನಾಗಿ ಆಳ್ವಿಕೆ ನಡೆಸಿದರು. ನಾಡನ್ನು ಕಟ್ಟುವ ಮುಂದಾಲೋಚನೆಯಿಂದ ಜನಪರ ಕೆಲಸ ಮಾಡಿದ್ದಾರೆ. ಸರ್ವರಿಗೂ ಸಮಪಾಲು ಸಮಬಾಳು ತತ್ವದಂತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ಜಾರಿಗೆ ತಂದು ಮೀಸಲಾತಿ ಜನಕ ಎನಿಸಿಕೊಂಡಿದ್ದಾರೆ’ ಎಂದು ಗುಣಗಾನ ಮಾಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷಗಳಾಗಿದ್ದರೂ ಮೀಸಲಾತಿ ಕುರಿತು ಚರ್ಚೆ ನಡೆಯುತ್ತಿದೆ. ಇನ್ನೂ ಮಾನಸಿಕ ಶೋಷಣೆಯಲ್ಲಿ ಬದುಕುತ್ತಿದ್ದೇವೆ. ಎಲ್ಲಿಯವರೆಗೂ ಜಾತಿ ಕಾಲಂ ಇರುತ್ತದೆಯೋ ಅಲ್ಲಿಯತನಕ ರಾಜರು ಹಾಕಿಕೊಟ್ಟ ಮೀಸಲಾತಿ ಬೇಕು. ಸಾಹಿತ್ಯ, ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾಗಿದೆ. ಜಾತಿ ವ್ಯವಸ್ಥೆ ಕೂಡ ಬದಲಾಗಬೇಕು’ ಎಂದರು.

ನಿವೃತ್ತ ಪ್ರಾಂಶುಪಾಲ ಜೆ.ಯಾದವರೆಡ್ಡಿ, ‘ಜನಪರ ಆಡಳಿತ ನೀಡಬೇಕು ಎಂಬ ಜನಪ್ರತಿನಿಧಿಗಳು ಮೊದಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಅಧ್ಯಯನ ಮಾಡಬೇಕು’ ಎಂದು ಮನವಿ ಮಾಡಿದರು.

‘ಹಿರಿಯೂರಿನ ವಾಣಿವಿಲಾಸ ಸಾಗರ ನಿರ್ಮಾಣಕ್ಕೆ ತಮ್ಮ ಮನೆಯಲ್ಲಿದ್ದ ಬಂಗಾರವನ್ನು ಒತ್ತೆಯಿಟ್ಟು ಐದು ವರ್ಷದಲ್ಲಿ ನಿರ್ಮಾಣ ಮಾಡಿದ್ದರ ಫಲವಾಗಿ ಇಂದಿಗೂ ನಮಗೆ ಕುಡಿಯುವ ನೀರು ಸಿಗುತ್ತಿದೆ’ ಎಂದು ರಾಜರ ಸಮಾಜಮುಖಿ ಚಿಂತನೆ ಸ್ಮರಿಸಿಕೊಂಡರು.

ನಾಲ್ವಡಿ ಅವರ ಕಾಲದಲ್ಲಿ ಕಟ್ಟಿದ ಮುನ್ನೂರು ಕೆರೆಗಳು ಇನ್ನೂ ಜೀವಂತವಾಗಿವೆ. ಕೃಷ್ಣರಾಜ ಒಡೆಯರ್ ಅಪರೂಪದ ರಾಜರಾಗಿದ್ದರು. ಇವರ ಕಾಲಾವಧಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ, ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ವಾಣಿವಿಲಾಸ ಆಸ್ಪತ್ರೆ ಕಟ್ಟಿಸಿದರು ಎಂದು ನೆನಪಿಸಿಕೊಂಡರು.

ತಾಲ್ಲೂಕು ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಜೆಡಿಎಸ್ ಮುಖಂಡ ಲಿಂಗಸೂರಿನ ಸಿದ್ದುಬಂಡಿ,ಪತ್ರಕರ್ತ ನರೇನಹಳ್ಳಿ ಅರುಣ್‌ಕುಮಾರ್, ಭೋವಿ ಸಮಾಜದ ಮುಖಂಡ ಎಚ್.ಲಕ್ಷ್ಮಣ್, ಕನಕದಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT