ಚಿತ್ರದುರ್ಗ: ನಿರಂತ ಮಳೆ, ಮೋಡ ಮುಸುಕಿದ ವಾತಾವರಣದ ಜತೆಗೆ ಸದ್ದಿಲ್ಲದೆ ಸಿದ್ಧವಾಗುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣಪತಿಗಳಿಂದಾಗಿ ಸಂಪ್ರದಾಯಿಕ ಮೂರ್ತಿ ತಯಾರಕರು ಆತಂಕಕ್ಕೆ ಸಿಲುಕಿದ್ದಾರೆ. ಮನೆತನದ ಕುಲಕಸುಬು ಎಂಬ ಮಾತು ಇವರನ್ನು ನಷ್ಟದ ಸುಳಿಗೆ ಸಿಲುಕಿಸಿದೆ.
ಈ ಬಾರಿ ವರುಣನ ಆರ್ಭಟದಿಂದಾಗಿ ಸಂಗ್ರಹಿಸಿದ ಜೇಡಿ ಮಣ್ಣನ್ನು ಹದಗೊಳಿಸುವುದೇ ಪ್ರಾರಂಭದಲ್ಲಿ ಮೂರ್ತಿ ತಯಾರಕರಿಗೆ ಸವಾಲಾಯಿತು. ಒಂದು ಮೂರ್ತಿ ಸಿದ್ಧತೆಗೆ ನಾಲ್ಕೈದು ದಿನ ಹೆಚ್ಚಾಗಿ ತೆಗೆದುಕೊಂಡಿದೆ. ಇಂತಹ ಸಮಯದಲ್ಲೂ ಬೇಡಿಕೆಗೆ ಅನುಗುಣವಾಗಿ ನಾನಾ ರೂಪದ ಗಣೇಶ ಸಿದ್ದಗೊಳ್ಳುತ್ತಿವೆ.
ಸಂಪ್ರದಾಯದಂತೆ ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿ ಪೂಜೆಗೆ ಶ್ರೇಷ್ಠ ಎಂಬುದು ಹಿರಿಯರ ನಂಬಿಕೆ. ಆದರೂ ಪಿಒಪಿ ಹಾಗೂ ಹುಲ್ಲಿನಿಂದ ಸಿದ್ಧಗೊಳ್ಳುವ ಮೂರ್ತಿಗಳು ಬೃಹತ್ ಪೆಂಡಾಲ್‌ಗಳಲ್ಲಿ ಪ್ರತಿಷ್ಠಾಪನೆಗೊಳ್ಳುವುದು ಸಾಮಾನ್ಯವಾಗಿದೆ.
ಹಬ್ಬಕ್ಕೂ ಆರು ತಿಂಗಳೂ ಮುನ್ನವೇ ಚಿಕ್ಕಜಾಜೂರು, ಕಡೂರು, ನೆಲ್ಲಿಕಟ್ಟೆ, ರಾಮಗಿರಿ, ಭರಮಸಾಗರ, ಹಂಪನೂರು, ಎಚ್.ಡಿ.ಪುರ ಸೇರಿದಂತೆ ಸುತ್ತಮುತ್ತಲಿನ ಕೆರೆಗಳಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ತಂದು ನಿಗದಿತ ಸ್ಥಳಗಳಲ್ಲಿ ಸಂಗ್ರಹಿಸುತ್ತಾರೆ. ಬಳಿಕ ಮಣ್ಣಿನ ಜತೆ ಹತ್ತಿ, ನಾರು ಮಿಶ್ರಣ ಮಾಡಿ ಹದಗೊಳಿಸಿ ಕೆಲ ದಿನ ಬಿಡುತ್ತಾರೆ. ಹಬ್ಬಕ್ಕೆ ಎರಡು ತಿಂಗಳು ಬಾಕಿ ಇರುವಂತೆ ಮೂರ್ತಿ ತಯಾರಿಕೆಗೆ ಕುಟುಂಬದವರು ಪ್ರಾರಂಭಿಸುತ್ತಾರೆ. ನೈಸರ್ಗಿಕ ಪರಿಕರಗಳನ್ನು ಬಳಕೆ ಮಾಡುವುದರಿಂದ ತಯಾರಿಕೆ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತದೆ.
ಪಿಒಪಿ ಗಣಪತಿ ಮೂರ್ತಿಗಳ ತಯಾರಿಕೆಯನ್ನು ಸರ್ಕಾರ 2016ರಲ್ಲಿ ನಿರ್ಬಂಧಿಸಿ ಆದೇಶಿಸಿದೆ. ಆದರೆ ಈ ಎಲ್ಲವೂ ನೆಪ ಮಾತ್ರ ಎನ್ನುವಂತಾಗಿದೆ ಎನ್ನುತ್ತಾರೆ ಸಂಪ್ರದಾಯಿಕ ಮೂರ್ತಿ ತಯಾರಕರು.
ಹಬ್ಬದ ಮೂರು ದಿನ ಮುಂಚಿತವಾಗಿ ಮಣ್ಣಿನ ಗಣಪನ ಮೂರ್ತಿಗಳ ಜತೆ ಪಿಒಪಿ ಮೂರ್ತಿಗಳು ಮಾರುಕಟ್ಟೆಗೆ ನಿಧಾನವಾಗಿ ಆಗಮಿಸುತ್ತವೆ. ಇವುಗಳನ್ನು ಪತ್ತೆ ಮಾಡುವುದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಲಿದೆ. ಇಲಾಖೆ ಅಧಿಕಾರಿ, ಸಿಬ್ಬಂದಿ ಕಣ್ತಪ್ಪಿಸಿ ಪಿಓಪಿ ಮೂರ್ತಿ ಮಾರಾಟ ಮಾಡಲಾಗುತ್ತದೆ. ಅವುಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಸುಸೂತ್ರವಾಗಿ ವಿಸರ್ಜನೆ ಕಾರ್ಯ ನಡೆದರೂ ಸಹ ಯಾರು ತಡೆಯುವುದಿಲ್ಲ ಎಂಬುದು ಕೆಲವರ ಆರೋಪ.
ಪಿಒಪಿ ಮೂರ್ತಿ ಮಾರಾಟಗಾರರ ನಡುವೆಯೂ ನಗರದಲ್ಲಿ ನಾಲ್ಕೈದು ಕುಟುಂಬಗಳು ಸಂಪ್ರದಾಯಿಕ ಶೈಲಿಯನ್ನು ಮುಂದುವರೆಸಿವೆ. ನಗರದ ದೊಡ್ಡಪೇಟೆಯಲ್ಲಿ ಕಳೆದ 22 ವರ್ಷದಿಂದ ಜೇಡಿಮಣ್ಣಿನಲ್ಲಿ ಮೂರ್ತಿ ತಯಾರಿಸುತ್ತಿದೆ ಸಿದ್ದೇಶ್ ಅವರ ಕುಟುಂಬ.
ನವಿಲಿನ ಮೇಲಿರುವ ಗಣಪ, ಈಶ್ವರನ ಅವತಾರದ ಗಣಪ, ನಂದಿಯ ಮೇಲೆ ಕುಳಿತಿರುವ ಗಣಪತಿ, ಇಲಿಯ ಮೇಲೆ ಸವಾರಿ ಹೊರಟಿರುವ ಏಕದಂತ, ಗದೆಯ ಮೇಲಿರುವ ವಿನಾಯಕ ಹೀಗೆ ಅಂದಾಜು 20ರಿಂದ 25ಕ್ಕೂ ಶೈಲಿಯ ಒಂದಕ್ಕಿಂತ ಒಂದು ಭಿನ್ನವಾಗಿರುವ ಗಣಪತಿಗಳು ಇವರ ಕೈಯಲ್ಲಿ ಅರಳಿವೆ.
ತ್ಯಾಗರಾಜ ಮಾರುಕಟ್ಟೆ ಬಳಿಯ ಕುಟುಂಬದವರು ದೇಗುಲದ ಪ್ರಾಂಗಣದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಕಳೆದ ಹಲವಾರು ವರ್ಷಗಳಿಂದ ಜೇಡಿಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಹೆಚ್ಚಾಗಿ ತಯಾರು ಮಾಡುವಲ್ಲಿ ನಿರತರಾಗಿದ್ದಾರೆ.
ಪಿಒಪಿ, ಹುಲ್ಲಿನಿಂದ ಸಿದ್ಧಗೊಳ್ಳುವ ಗಣಪತಿ ಮೂರ್ತಿಗಳು ಬೆಂಗಳೂರು, ಕೋಲ್ಕತ್ತ ಸೇರಿದಂತೆ ವಿವಿಧ ಭಾಗಗಳಿಂದ ಹಬ್ಬದ ಮುನ್ನಾದಿನ ಮಾರುಕಟ್ಟೆ ಪ್ರವೇಶಿಸುತ್ತವೆ. ಕಡಿಮೆ ದರಕ್ಕೆ ಮೂರ್ತಿಗಳನ್ನು ಮಾರಾಟ ಮಾಡುವುದರಿಂದ ತಿಂಗಳಿನಿಂದ ಕಷ್ಟಪಟ್ಟ ಇವರ ಶ್ರಮ ವ್ಯರ್ಥವಾಗುವುದು ಪ್ರತಿ ವರ್ಷ ನಡೆದಿದೆ.
ಪಿಒಪಿ ಮೂರ್ತಿಗಳ ಮೇಲೆ ನಿಗಾ ವಹಿಸಲಾಗಿದೆ. ಇನ್ನೆರಡು ದಿನದಿಂದ ನಗರ ಪ್ರವೇಶಿಸುವ ಗೂಡ್ಸ್ ವಾಹನಗಳನ್ನು ತಪಾಸಣೆ ಮಾಡಿ ನಿಷೇಧಿತ ಬಣ್ಣ ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆದು ದಂಡ ವಿಧಿಸುವ ಕಾರ್ಯ ಮಾಡಲಾಗುತ್ತದೆ
-ಎಂ.ರೇಣುಕಾ ಪೌರಾಯುಕ್ತೆ ಚಿತ್ರದುರ್ಗ
ಮಳೆ ಕಾರಣಕ್ಕೆ ಈ ಬಾರಿ ಮೂರ್ತಿ ತಯಾರಿಕೆಗೆ ಆರಂಭದಲ್ಲಿ ಸ್ವಲ್ಪ ಸಮಸ್ಯೆ ಎದುರಾಯಿತು. ಶೀತಗಾಳಿ ಬಿಸಿಲು ಬೀಳದ ಕಾರಣ ಒಂದು ಮೂರ್ತಿ ಸಿದ್ಧವಾಗಲು ನಾಲ್ಕೈದು ದಿನ ಹಿಡಿಯಿತು. ದೇವರು ಕೃಪೆ ತೋರಿದ್ದರಿಂದ ಕೆಲಸ ಬಿರುಸಾಗಿ ಸಾಗಿದೆ
-ಕೆ.ಎಂ.ಅಜ್ಜಯ್ಯ ಗಣೇಶ ಮೂರ್ತಿ ತಯಾರಕರು ಚಿತ್ರದುರ್ಗ
ಕುಟುಂಬದ ನಾಲ್ಕೈದು ಮಂದಿ ಮೂರ್ನಾಲ್ಕು ತಿಂಗಳಿನಿಂದ ಹಗಲು ರಾತ್ರಿ ಕಷ್ಟಪಟ್ಟು ಜೇಡಿ ಮಣ್ಣಿನ ಮೂರ್ತಿ ತಯಾರಿಸುತ್ತೇವೆ. ಆದರೆ ಪಿಒಪಿ ಮೂರ್ತಿಗಳಿಂದಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಸರ್ಕಾರ ಈ ಬಗ್ಗೆ ಕ್ರಮವಹಿಸಬೇಕು
- ಸಿದ್ದೇಶ್ ಗಣೇಶ ಮೂರ್ತಿ ತಯಾರಕರು
ಜೇಡಿ ಮಣ್ಣಿನ ಗಣಪತಿಯನ್ನು ಮನೆ ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸಿ ವಿಸರ್ಜಿಸುವ ಮೂಲಕ ಜಲ ಮಾಲಿನ್ಯವಾಗದಂತೆ ಎಚ್ಚರ ವಹಿಸಬೇಕು. ಪಿಒಪಿ ಮೂರ್ತಿಗೆ ಕಡಿವಾಣ ಹಾಕಿದರೆ ಸಂಪ್ರದಾಯಿಕ ಮೂರ್ತಿ ತಯಾರಕರಿಗೆ ಹೆಚ್ಚಿನ ಅನುಕೂಲವಾಗಲಿದೆ
- ಕೆ.ಸೌಭಾಗ್ಯ ಗೃಹಿಣಿ ವಿದ್ಯಾನಗರ
ಮಣ್ಣಿನ ಗಣಪತಿಗೆ ಬೇಡಿಕೆ ಕುಸಿತ
-ಜೆ. ತಿಮ್ಮಪ್ಪ
ಚಿಕ್ಕಜಾಜೂರು: ಜೇಡಿ ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಮಾತ್ರ ಗಣೇಶ ಚತುರ್ಥಿಯಲ್ಲಿ ಪ್ರತಿಷ್ಠಾಪಿಸುವಂತೆ ಸರ್ಕಾರ ಆದೇಶ ನೀಡಿದ್ದರೂ ಇದೇ ಕಸುಬು ನಂಬಿರುವವರಿಗೆ ಮಾತ್ರ ನಿರೀಕ್ಷಿತ ಆದಾಯ ಸಿಗುತ್ತಿಲ್ಲ ಎಂಬ ಅಳಲು ತಯಾರಕರದಿಂದ ಕೇಳಿ ಬರುತ್ತಿದೆ. ‘ಜೇಡಿ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆ ಸಾಕಷ್ಟು ಶ್ರಮ ಹಾಗೂ ಖರ್ಚು ಬರುತ್ತದೆ. 15–20 ದಿನಗಳ ಮುಂಚೆ ಉತ್ತಮ ಜೇಡಿ ಮಣ್ಣನ್ನು ಸಂಗ್ರಹಿಸಿ ಅದನ್ನು ನೆನೆಸಿ ಹದಗೊಳಿಸಬೇಕು. ನಂತರ ಹಲಗೆ ಬಣ್ಣ ಬಟ್ಟೆ ವಸ್ತ್ರ ಹಾರ ಹರಳುಗಳನ್ನು ಜೋಡಿಸಿ ಪೋಣಿಸಬೇಕು. ಇಷ್ಟೆಲ್ಲ ಖರ್ಚು ಮಾಡಿದರೂ ಸಿಗುವ ಲಾಭ ಮಾತ್ರ ಸಾಸಿವೆಯಷ್ಟು ಎನ್ನುತ್ತಾರೆ’ ಗಣಪತಿ ಮೂರ್ತಿ ತಯಾರಕ ಕಡೂರು ರುದ್ರೇಶ್. ಹಲವು ವರ್ಷಗಳ ಹಿಂದೆ ನಮ್ಮ ಮಣ್ಣಿನ ಗಣಪತಿಗಳಿಗೆ ಉತ್ತಮ ಬೇಡಿಕೆ ಇತ್ತು. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಪಿಒಪಿ ಗಣಪತಿ ಮೂರ್ತಿಗಳ ಹಾವಳಿ ಹೆಚ್ಚಾಗಿರುವುದರಿಂದ ನಮ್ಮ ಮಣ್ಣಿನ ಗಣಪತಿಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ವರ್ಷಕ್ಕೆ 50 ರಿಂದ 75 ಗಣಪತಿ ಮೂರ್ತಿಗಳ ತಯಾರಿಕೆಗೆ ಬೇಡಿಕೆಯಿದ್ದು ಕೆಲವು ಸಂಘ ಸಂಸ್ಥೆಯವರು ನಮ್ಮ ಬಳಿ ಕಾಯ್ದಿರಿಸುತ್ತಾರೆ. ಕೊನೆಯ ದಿನ ಯಾರಾದರೂ ಬರಬಹುದು ಎಂಬ ಕಾರಣಕ್ಕೆ ಸಣ್ಣ ಗಾತ್ರದ ಮೂರ್ತಿಗಳನ್ನು ತಯಾರಿಸಿ ಇಡುತ್ತೇವೆ. ಆದರೆ ಬೆಲೆ ಕೇಳುತ್ತಿದ್ದಂತೆಯೇ ಹಲವರು ಹೊರಟು ಹೋಗುತ್ತಾರೆ. ಹೆಚ್ಚುವರಿಯಾಗಿ ತಯಾರಿಸಿದ ಮೂರ್ತಿಗಳನ್ನು ಕೆಲವೊಮ್ಮೆ ಇಲ್ಲಿಯ ಕೆರೆಗಳಿಗೆ ಬಿಟ್ಟಿರುವ ನಿದರ್ಶನಗಳೂ ಇವೆ. ಹೀಗಾಗಿ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು’ ಎನ್ನುತ್ತಾರೆ ವೀರೇಶ್ ರುದ್ರೇಶ್ ಹಾಗೂ ಸಾಸಲು ಗ್ರಾಮದ ಪಂಚಾಕ್ಷರಿ.
ಡಿ.ಜೆ. ಸಂಗೀತದ ಸದ್ದಿಗೆ ಬೀಳಲಿ ಕಡಿವಾಣ
-ವಿ.ಧನಂಜಯ
ನಾಯಕನಹಟ್ಟಿ: ಕಳೆದ ಮೂರು ವರ್ಷದ ಹಿಂದೆ ನಾಯಕನಹಟ್ಟಿ ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಡಿ.ಜೆ.ಸಂಗೀತಕ್ಕೆ ಯುವಜನತೆ ಮೈಮರೆತು ಹೆಜ್ಜೆಹಾಕಿ ಕುಣಿದು ಕೆರೆಯ ಸಮೀಪ ಇನ್ನೇನು ವಿಸರ್ಜಿಸಬೇಕು ಎನ್ನುವಷ್ಟರಲ್ಲಿ ಡಿ.ಜೆ. ಅಳವಡಿಸಿದ್ದ ಟ್ರ್ಯಾಕ್ಟರ್‌ಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿತ್ತು. ಆದರೆ ಚಾಲಕನ ಸಮಯ ಪ್ರಜ್ಞೆಯಿಂದ ಅಂದು ಭಾರಿ ಅನಾಹುತವೊಂದು ತಪ್ಪಿತ್ತು. ಗಣೇಶ ಉತ್ಸವ ಎಂದರೆ ಚಿಣ್ಣರು ಹೆಂಗಳೆಯರು ಸೇರಿ ಎಲ್ಲ ವಯೋಮಾನದವರಲ್ಲೂ ಸಂಭ್ರಮ. ಗ್ರಾಮೀಣ ಪ್ರದೇಶದಲ್ಲಿ ವೈಮನಸ್ಯ ಮರೆತು ಎಲ್ಲರೂ ಪಾಲ್ಗೊಳ್ಳುವ ಸಾಮರಸ್ಯದ ಹಬ್ಬದಲ್ಲಿ ಜನಪದ ವಾದ್ಯ ಭಜನೆ ಭಕ್ತಿಗೀತೆ ಹಾಡಿ ಭಾವಪೂರ್ಣವಾಗಿ ಗಣಪತಿಗೆ ವಿದಾಯ ಹೇಳಲಾಗುತ್ತಿತ್ತು. ಆದರೆ ಈಗಿನ ದಿನಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಸ್ಯೆಗೆ ಮುನ್ನುಡಿ ಬರೆಯವಂತಾಗಿದೆ. ಗಣೇಶೋತ್ಸವದಲ್ಲಿ ಡಿ.ಜೆ. ಧ್ವನಿವರ್ಧಕ ಇಲ್ಲವೆಂದರೆ ಗಣೇಶ ವಿಸರ್ಜನೆ ಪ್ರಕ್ರಿಯೆಯೇ ಅಪೂರ್ಣವೆಂದು ಭಾವಿಸಲಾಗುತ್ತಿದೆ. ವಿಸರ್ಜನಾ ಮೆರವಣಿಗೆಯಲ್ಲಿ ಬಳಸುತ್ತಿರುವ ಡಿ.ಜೆ. ಸಂಗೀತ ಮಿತಿಮೀರಿ ಅದರ ಕರ್ಕಶ ಸದ್ದಿನಿಂದಾಗಿ ಮಕ್ಕಳು ಇಳಿವಯಸ್ಸಿನವರು ಅನಾರೋಗ್ಯಪೀಡಿತರು ಜಾನುವಾರುಗಳು ಪಕ್ಷಿ ಸಂಕುಲ ಸಮಸ್ಯೆಗೆ ಸಿಲುಕುವಂತಾಗಿದೆ. ‘ಗ್ರಾಮೀಣ ಭಾಗದಲ್ಲಿ ಡಿ.ಜೆ. ಸದ್ದು ತಲ್ಲಣ ಸೃಷ್ಟಿಸುತ್ತಿದೆ. ಗಣೇಶೋತ್ಸವದ ಧಾರ್ಮಿಕ ಆಚರಣೆಗೆ ಮತ್ತು ಸಂಭ್ರಮಕ್ಕೆ ಸಂಬಂಧವೇ ಇಲ್ಲದ ಯಾವುದೋ ಹಾಡುಗಳನ್ನು ಹಾಕಿಕೊಂಡು ಮೈಮರೆತು ಕುಣಿಯುವುದು ಧಾರ್ಮಿಕ ಹಬ್ಬದ ಉದ್ದೇಶ ಮತ್ತು ಮಹತ್ವಕ್ಕೆ ಧಕ್ಕೆ ತರುತ್ತಿದೆ. ಜಾನಪದ ಕಲಾತಂಡಗಳು ಮೇಳಗಳು ವಾದ್ಯಗಳ ಬಳಕೆ ಉತ್ತಮ’ ಎನ್ನುತ್ತಾರೆ ನಾಗರಿಕರು.
ರಶೀದಿ ಪುಸ್ತಕ ಹಿಡಿದು ರಸ್ತೆಗೆ ಬರುವ ಮಕ್ಕಳು
-ವಿ.ವೀರಣ್ಣ ಧರ್ಮಪುರ
ಧರ್ಮಪುರ: ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಲ್ಲಿ ಪ್ರಾಮುಖ್ಯತೆ ಪಡೆದ ಗಣೇಶ ಚತುರ್ಥಿ ಈಗ ಆಚರಣೆಯ ಹೆಸರಿನಲ್ಲಿ ಬೇರೆಯದೇ ಸ್ವರೂಪ ಪಡೆಯುತ್ತಿದೆ. ಅದರಲ್ಲೂ ಪ್ರಾಥಮಿಕ ಪ್ರೌಢಶಾಲೆ ಹಂತದ ಮಕ್ಕಳೂ ಸಹ ರಶೀದಿ ಪುಸ್ತಕ ಹಿಡಿದು ಮನೆಮನೆಗೆ ಓಡಾಡಿ ಚಂದಾ ಸಂಗ್ರಹಿಸುತ್ತಿರುವುದು ಆತಂಕ ತಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಪೈಪೋಟಿಗೆ ಬಿದ್ದವರಂತೆ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ. ಇದರ ಜತೆಗೆ ಪ್ರತಿನಿತ್ಯ ಪೂಜೆ ಹಾಗೂ ಆರ್ಕೆಸ್ಟ್ರಾ ಮೊದಲಾದ ಕಾರ್ಯಕ್ರಮಗಳು ಅದ್ದೂರಿಯಾಗಿಯೇ ನಡೆಯುತ್ತವೆ. ಈ ಎಲ್ಲದಕ್ಕೂ ಹಣ ಹೊಂದಿಸಲು ಗಣೇಶನ ಹೆಸರಿನಲ್ಲಿ ಬಲವಂತವಾಗಿ ಹಣ ವಸೂಲಿ ಮಾಡಲು ಮುಂದಾಗಿರುವುದು ಶೋಚನೀಯ. ಯುವಕರು ಮತ್ತು ಚಿಕ್ಕಮಕ್ಕಳು ರಸ್ತೆಗೆ ಇಳಿದು ಎರಡು ಕಡೆ ಹಗ್ಗ ಹಿಡಿದು ವಾಹನಗಳನ್ನು ನಿಲ್ಲಿಸಿ ಹಣ ಕೇಳುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಚಂದಾ ಸಂಗ್ರಹಿಸುವ ಭರದಲ್ಲಿ ಚಿಕ್ಕಮಕ್ಕಳು ಅರಿಯದೇ ರಸ್ತೆ ಮಧ್ಯದಲ್ಲಿ ನಿಲ್ಲುತ್ತಾರೆ. ಇದರಿಂದ ಅಪಘಾತಗಳು ಸಂಭವಿಸಿರುವ ಉದಾಹರಣೆಗಳಿವೆ. ಇನ್ನಾದರೂ ಪಾಲಕರು ಎಚ್ಚೆತ್ತು ಮಕ್ಕಳ ಮೇಲೆ ನಿಗಾ ಇರಿಸಬೇಕು ಎನ್ನುತ್ತಾರೆ ಗ್ರಾಮಸ್ಥ ತಿಪ್ಪೇಸ್ವಾಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.