ಶುಕ್ರವಾರ, ಮೇ 27, 2022
30 °C
ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ

ಎನ್‌ಇಪಿ: ಹೊಸ ಸಾಧನೆಗೆ ದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಹೊಸ ಸಾಧನೆಗೂ ಇದು ದಾರಿಯಾಗಲಿದೆ’ ಎಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯ ವಾಲ್ಮೀಕಿ ಸಭಾಂಗಣದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ, ಯಶೋಧರಮ್ಮ ಬೋರಪ್ಪ ಮಹಿಳಾ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ಅರ್ಥಶಾಸ್ತ್ರ ಅಧ್ಯಾಪಕರ ವೇದಿಕೆಯಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಅರ್ಥಶಾಸ್ತ್ರ ಪಠ್ಯಕ್ರಮ ವಿಶ್ಲೇಷಣೆ ಸಂಬಂಧ ಶನಿವಾರ ಆಯೋಜಿಸಿದ್ದ ‘ಒಂದು ದಿನದ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

‘ನಮ್ಮೆಲ್ಲರ ಜೀವನ ಅರ್ಥ ವ್ಯವಸ್ಥೆಯ ಮೇಲೆ ನಿಂತಿದೆ. ದೇಶದ ಭವಿಷ್ಯ, ಬಜೆಟ್‌ ಮಂಡನೆ ಕೂಡ ಇದರ ಮೇಲೆಯೇ ಅವಲಂಬಿತವಾಗಿದೆ. ಪ್ರತ್ಯಕ್ಷ–ಪರೋಕ್ಷವಾಗಿ ಇದರಲ್ಲಿ ನಾವೆಲ್ಲರೂ ಭಾಗಿಯಾಗುತ್ತಿದ್ದೇವೆ. ಆದ್ದರಿಂದ ಅರ್ಥ ವ್ಯವಸ್ಥೆಯ ಸಮತೋಲನ ಕಾಪಾಡುವುದು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಈ ನಿಟ್ಟಿನಲ್ಲಿ ಅರ್ಥಶಾಸ್ತ್ರದ ಕುರಿತು ತಿಳಿದುಕೊಳ್ಳುವ ಅಗತ್ಯವಿದೆ’ ಎಂದರು.

‘ಎನ್‌ಇಪಿ ಜ್ಞಾನಗಳಿಕೆಗೆ ಸೀಮಿತವಲ್ಲ. ಪ್ರಸ್ತುತ ದಿನಗಳಲ್ಲಿ ಕೌಶಲ ಇದ್ದರೆ ಮಾತ್ರ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಅದಕ್ಕಾಗಿ ಕೌಶಲ ಹೆಚ್ಚಿಸಿಕೊಳ್ಳುವ ಹಂಬಲಕ್ಕೂ ಹೆಚ್ಚು ಆದ್ಯತೆ ನೀಡಲಿದೆ. ಈ ವ್ಯವಸ್ಥೆಯಲ್ಲಿ ಕಲಿಕೆಯು ವಿದ್ಯಾರ್ಥಿಗಳ ಆಸಕ್ತಿ, ಸ್ವಾತಂತ್ರ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯನ್ನು ಕೇಂದ್ರೀಕರಿಸಿಕೊಂಡು ರೂಪಿಸಲಾಗಿದೆ’ ಎಂದು ತಿಳಿಸಿದರು.

‘ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯಗಳ ಶಿಕ್ಷಣ ಪರಂಪರೆ, ಸುಸ್ಥಿರ ಅಭಿವೃದ್ಧಿ ಗುರಿಗಳೆಲ್ಲವನ್ನು ಒಟ್ಟುಗೂಡಿಸಿ ಹೊಸ ನೀತಿಯನ್ನು ರೂಪಿಸಲಾಗಿದೆ. ಇದಕ್ಕೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳನ್ನು ಮರುರೂಪಿಸುವ ಸವಾಲು ಸರ್ಕಾರದ ಮುಂದಿದೆ. ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಕಷ್ಟ ಎನಿಸಬಹುದು. ಆದರೆ, ಮುಂದೆ ಇದರಿಂದ ಅನುಕೂಲವಾಗಲಿದೆ. ಅಸಾಧ್ಯ ಎಂಬುದು ಜಗತ್ತಿನಲ್ಲಿ ಯಾವುದು ಇಲ್ಲ. ಹೊಸತನಕ್ಕೆ ಹೊಂದಿಕೊಂಡು ದೇಶ ಮುನ್ನಡೆಸೋಣ’ ಎಂದು ಹೇಳಿದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಯೋಗೀಶ್, ‘ಪ್ರಸ್ತುತ ವಿದ್ಯಾರ್ಥಿಗಳಿಗೆ ಹೊಸ ನೀತಿ ಕಷ್ಟವಾದರೂ ಮುಂದಿನ ಭಾವಿ ಪ್ರಜೆಗಳ, ಮಕ್ಕಳ ಹಿತದೃಷ್ಟಿಯಿಂದ ಎನ್‌ಇಪಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಕಷ್ಟ ಪಡದ ಹೊರತು ಉದ್ಯೋಗ ಎಂಬುದು ಸುಲಭವಾಗಿ ದೊರೆಯುವಂತದ್ದಲ್ಲ’ ಎಂದರು.

‘ಸಂಶೋಧನೆಗೆ ಒತ್ತು ನೀಡುವುದರ ಜತೆಗೆ ಸ್ಥಳೀಯ ಅಗತ್ಯಗಳನ್ನು ಅರಿತು ವಿಶೇಷ ಕೋರ್ಸ್‌ಗಳನ್ನು ರೂಪಿಸುವುದು ಇದರ ಧ್ಯೇಯವಾಗಿದೆ. ಇದರಿಂದ ಶಿಕ್ಷಣ ವಿಕೇಂದ್ರೀಕರಣವಾಗಲಿದೆ. ಹೊಸ ನೀತಿಯಲ್ಲಿ ದೊರೆಯುವ ಶಿಕ್ಷಣ ಬದಲಾಗುವ ಜಾಗತಿಕ, ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿಯೂ ಸಫಲವಾಗುವ ನಿಟ್ಟಿನಲ್ಲಿ ಕ್ರಿಯಾತ್ಮಕ ಶಿಕ್ಷಣ ನೀಡುವ ಉದ್ದೇಶ ಅಡಗಿದೆ’ ಎಂದು ಹೇಳಿದರು.

‘ಉದ್ಯೋಗ, ಉತ್ಪಾದನೆ ಪ್ರಮಾಣ ಹೆಚ್ಚಳ, ಮಾರುಕಟ್ಟೆ, ವಹಿವಾಟು, ಲಾಭ ಎಲ್ಲಾ ಅಂಶಗಳನ್ನು ಒಳಗೊಂಡು ಅರ್ಥಶಾಸ್ತ್ರದಲ್ಲೂ ಅಮೂಲಾಗ್ರ ಬದಲಾವಣೆ ತರುವ ಉದ್ದೇಶವಿದೆ. ಪಾಶ್ಚಿಮಾತ್ಯರಲ್ಲಿನ ಬಹುಶಿಸ್ತೀಯ ಶಿಕ್ಷಣ ನೋಬೆಲ್‌ ವಿದ್ವಾಂಸರನ್ನು ರೂಪಿಸುತ್ತಿದೆ. ಇಲ್ಲಿಯೂ ಕೂಡ ಇದು ಸಾಕಾರವಾಗಬೇಕು ಎಂಬುದು ಎನ್‌ಇಪಿಯ ಉದ್ದೇಶವಾಗಿದೆ’ ಎಂದು ಅವರು ವಿವರಿಸಿದರು.

ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯ ಎಸ್.ಸಂದೀಪ್, ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಕೆ.ಬಿ. ರಂಗಪ್ಪ, ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಎಸ್. ಸುಚಿತ್ರಾ, ಅರ್ಥಶಾಸ್ತ್ರ ವೇದಿಕೆ ಅಧ್ಯಕ್ಷ ಪ್ರೊ. ಭೀಮಣ್ಣ ಸುಣಗಾರ, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್. ಲತಾ ಇದ್ದರು.

‘ಎಲ್ಲಾ ಕೌಶಲ ಒಳಗೊಂಡಿದೆ’
‘ಅರ್ಥಶಾಸ್ತ್ರ ವಿಜ್ಞಾನ ವಿಷಯದಷ್ಟೇ ವಿಶೇಷವಾಗಿದೆ. ಇದು ತೆರೆದ ವಿಶ್ವಕೋಶವಾಗಿದೆ. ಆತ್ಮ ನಿರ್ಭರ ಭಾರತ, ಮೇಕ್‌ ಇನ್ ಇಂಡಿಯಾ, ಮೇಡ್‌ ಇನ್‌ ಇಂಡಿಯಾ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಎಲ್ಲವೂ ಅರ್ಥ ವ್ಯವಸ್ಥೆಯನ್ನು ಒಳಗೊಂಡಿದೆ. ಶಿಕ್ಷಣ ವಲಯವೂ ಇದಕ್ಕೆ ಹೊರತಾಗಿಲ್ಲ. ವಿಫುಲ ಅವಕಾಶ ಕಲ್ಪಿಸುವುದರಲ್ಲಿ ಎನ್‌ಇಪಿ ಬಹುಮುಖ್ಯ ಪಾತ್ರವಹಿಸಲಿದೆ. ಇದನ್ನು ಅರ್ಥಶಾಸ್ತ್ರ ವಿದ್ಯಾರ್ಥಿಗಳು ಒಪ್ಪಿಕೊಂಡು ಸವಾಲಾಗಿ ಸ್ವೀಕರಿಸಿ ಸಾಧಕರಾಗಿ’ ಎಂದು ಪ್ರೊ.ಬಿ.ಪಿ. ವೀರಭದ್ರಪ್ಪ ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.