ಭಾನುವಾರ, ಆಗಸ್ಟ್ 14, 2022
20 °C
ಸರ್ಕಾರಿ ನೌಕರರ ಜತೆ ಸಂವಾದದಲ್ಲಿ

ಕೇಂದ್ರ ಮಾದರಿಯ ವೇತನ ನಿರೀಕ್ಷೆ: ಸಿ.ಎಸ್. ಷಡಾಕ್ಷರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಮೊಳಕಾಲ್ಮುರು: ರಾಜ್ಯ ಸರ್ಕಾರಿ ನೌಕರರ ಬಹು ವರ್ಷಗಳ ಬೇಡಿಕೆಯಾಗಿರುವ ಕೇಂದ್ರ ಸರ್ಕಾರಿ ನೌಕರರಿಗೆ ತಕ್ಕನಾದ ವೇತನ ಸೌಲಭ್ಯ ಈ ವರ್ಷದ ಅಂತ್ಯಕ್ಕೆ ಸಿಗುವ ಸಾಧ್ಯತೆ ದಟ್ಟವಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘವು ಶನಿವಾರ ಹಮ್ಮಿಕೊಂಡಿದ್ದ ರಾಜ್ಯಾಧ್ಯಕ್ಷರ ಜತೆ ಸಂವಾದ ಮತ್ತು ಪ್ರತಿಭಾ ಪುರಸ್ಕಾರ, ಉತ್ತಮ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಷ್ಕೃತ ವೇತನ ನೀಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ಇದಕ್ಕೆ ಪೂರಕವಾಗಿ ಸಮಿತಿ ನೇಮಕಕ್ಕೆ ಸೂಚಿಸಿದ್ದಾರೆ. ಸಾಧಕ, ಬಾಧಕ ಪರಿಶೀಲಿಸಿ ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನ ನೀಡಲಿದೆ. ದೇಶದಲ್ಲಿ 25 ರಾಜ್ಯಗಳಲ್ಲಿ ಪರಿಷ್ಕೃತ ವೇತನ ಮಂಜೂರು ಮಾಡಲಾಗಿದ್ದು, ಇಲ್ಲಿಯೂ ಶೀಘ್ರ ಪ್ರಕಟವಾಗಲಿದೆ. ಇದಕ್ಕೆ ಸರ್ಕಾರಕ್ಕೆ ಹೆಚ್ಚುವರಿಯಾಗಿ ₹ 10,500 ಕೋಟಿ ಅಗತ್ಯವಿದೆ ಎಂದು ಹೇಳಿದರು.

ಈ ಹಿಂದೆ ಸರ್ಕಾರಿ ನೌಕರರು ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದ ಸರ್ಕಾರ ಭರವಸೆ ನೀಡಿ ನುಣುಚಿಕೊಳ್ಳುತ್ತಿತ್ತು. ಒಂದೊಂದು ಸೌಲಭ್ಯ ಪಡೆಯಲು 4-5 ವರ್ಷಗಳು ಬೇಕಾಗಿತ್ತು. ಆದರೆ, ಈಗ ಸಂಘವು ಸರ್ಕಾರದ ಜತೆ ಸಮನ್ವಯದಿಂದ ಸಾಗುತ್ತಿದೆ. ನಿರಂತರ ಸಂಕರ್ಪ ಇಟ್ಟುಕೊಂಡು ನೌಕರರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕೊಡಿಸಲು ಮುಂದಾಗಿ ಅನೇಕ ವಿಷಯಗಳಲ್ಲಿ ಯಶಸ್ವಿಯಾಗಿದೆ ಎಂದರು.

ಸರ್ಕಾರ ಮತ್ತು ನೌಕರರು ಅಭಿವೃದ್ಧಿ ನಾಣ್ಯದ ಎರಡು ಮುಖಗಳು. ಯಾವುದೇ ಯೋಜನೆಯ ಲಾಭ ಜನರನ್ನು ಮುಟ್ಟುವಲ್ಲಿ ನೌಕರರ ಪಾತ್ರ ಮುಖ್ಯವಾಗಿದೆ. ಇಬ್ಬರೂ ಸಮನ್ವಯ ಸಾಧಿಸಿಕೊಂಡು ಕೆಲಸ ಮಾಡಿದಲ್ಲಿ ಮಾತ್ರ ಒಳ್ಳೆಯ ಹೆಸರು ಬರುತ್ತದೆ ಎಂದು ಸಚಿವ ಶ್ರೀರಾಮುಲು ಹೇಳಿದರು.

ನೌಕರರು ವೃತ್ತಿಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಸರ್ಕಾರಿ ನೌಕರರನ್ನು ಮತ್ತು ಪ್ರತಿಭಾವಂತ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ತಾಲ್ಲೂಕು ಸಂಘದ ಅಧ್ಯಕ್ಷ ಎಸ್. ಈರಣ್ಣ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಸಂಘದ ಜಿಲ್ಲಾ ಅಧ್ಯಕ್ಷ ಕೆ. ಮಂಜುನಾಥ್, ಖಜಾಂಚಿ ವೀರೇಶ್, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಶಿವಾಜಿರಾವ್, ಕಾರ್ಯಾಧ್ಯಕ್ಷ ನರಸಿಂಹರಾಜು, ತಹಶೀಲ್ದಾರ್ ಸುರೇಶ್ ಕುಮಾರ್, ಬಿಇಒ ಸಿ.ಎಸ್. ವೆಂಕಟೇಶಪ್ಪ, ಎಸ್.ಬಿ. ರಾಮಚಂದ್ರಯ್ಯ, ಡಾ. ಮಧುಕುಮಾರ್, ಇ. ಮಲ್ಲೇಶಪ್ಪ, ಎಸ್. ಕರಿಬಸಣ್ಣ, ಟಿ.ಆರ್. ಆಂಜನೇಯ, ಕೆಂಚಲಿಂಗಪ್ಪ, ಮಹೇಶ್, ಸಿ. ಚಂದ್ರಶೇಖರ್, ಎಂ. ಮಲ್ಲಿಕಾರ್ಜುನ್, ಕೇಶವಮೂರ್ತಿ, ಲೀಲಾಬಾಯಿ, ಎಚ್.ಜೆ. ಓಂಕಾರಪ್ಪ ಮತ್ತು ಸಂಘದ ತಾಲ್ಲೂಕು, ಜಿಲ್ಲಾ ಸಂಘದ ಪದಾಧಿಕಾರಿಗಳು ಇದ್ದರು.

ಹಳೆ ಪಿಂಚಣಿ ಜಾರಿಗೆ ಒತ್ತಡ

ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ರದ್ದುಪಡಿಸಿ ಹಳೆ ಪಿಂಚಣಿ ಪದ್ಧತಿ ಜಾರಿಗೆ ತರಬೇಕು ಎಂಬ ನಿಟ್ಟಿನಲ್ಲಿ ಸಂಘವು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಅವರು ಒಲವು ತೋರಿದ್ದು, ಅಧ್ಯಯನ ಮಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಕೋವಿಡ್ ಸಂಕಷ್ಟದಲ್ಲಿ ಸರ್ಕಾರಿ ನೌಕರರ ವೇತನ ಕಡಿತಗೊಳಿಸಲು ಸರ್ಕಾರ ಮುಂದಾಗಿತ್ತು. ಸಂಘವು ವಿರೋಧ ಮಾಡಿ ಪರಿಸ್ಥಿತಿ ಅರ್ಥ ಮಾಡಿಕೊಟ್ಟ ಕಾರಣ ನಿರ್ಧಾರ ಕೈಬಿಟ್ಟಿತು. ಇದರಿಂದ ಪ್ರತಿ ನೌಕರರಿಗೆ ₹ 8 ಲಕ್ಷದಿಂದ ₹ 10 ಲಕ್ಷ ಉಳಿತಾಯವಾಗಿದೆ. ಎಂತಹ ಸಮಯದಲ್ಲೂ ನೌಕರರ ಬೆನ್ನಿಗೆ ಸಂಘವು ನಿಲ್ಲಲಿದೆ ಎಂದು ಸಿ.ಎಸ್. ಷಡಾಕ್ಷರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.