ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಹೊಸ ಮದ್ಯದಂಗಡಿ ತೆರೆಯುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 6 ಅಕ್ಟೋಬರ್ 2023, 9:20 IST
Last Updated 6 ಅಕ್ಟೋಬರ್ 2023, 9:20 IST
ಅಕ್ಷರ ಗಾತ್ರ

ಚಿತ್ರದುರ್ಗ:‘ರಾಜ್ಯದಲ್ಲಿ ಸದ್ಯ ಇರುವ ಮದ್ಯದ ಅಂಗಡಿ ಹೊರತುಪಡಿಸಿ ಹೊಸ ಮದ್ಯದಂಗಡಿ ತೆರೆಯುವ ಪ್ರಸ್ತಾವ ಸರ್ಕಾರದ ಎದುರು ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೊಸ ಮದ್ಯದಂಗಡಿ ತೆರೆಯುವ ಚಿಂತನೆ ಇದೆ ಎಂಬ ಬಗ್ಗೆ ಅಬಕಾರಿ ಸಚಿವರು ಹೇಳಿದ್ದರು. ಆದರೆ, ಸರ್ಕಾರ ಯಾವುದೇ ಕಾರಣಕ್ಕೂ ಹೊಸ ಮದ್ಯದ ಅಂಗಡಿ ತೆರೆಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ಐದು ಗ್ಯಾರಂಟಿ ಯೋಜನೆಗಳಿಗೂ ಹಣಕಾಸಿನ ಸಮಸ್ಯೆ ಇಲ್ಲ. ಕ್ಷೇತ್ರಗಳ ಅಭಿವೃದ್ಧಿಗೆ ಇನ್ನೂ ಹೆಚ್ವಿನ ಅನುದಾನ ಬೇಕು ಎಂಬುದು ಕಾಂಗ್ರೆಸ್ ಶಾಸಕರ ಕೋರಿಕೆ. ಹೆಚ್ಚುವರಿ ಅನುದಾನ ಕೊಡುವ ವ್ಯವಸ್ಥೆ ಮಾಡಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಶಿವಮೊಗ್ಗದಲ್ಲಿ ಮುಸ್ಲಿಂ ಸಮುದಾಯದ ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿದವರು ಯಾವ ಸಮುದಾಯದವರೇ ಆಗಿರಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಅಲ್ಲಿ ಬಿಜೆಪಿಯವರು ಏನು ಸತ್ಯ ಶೋಧನೆ ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

ಕಲುಷಿತ ನೀರಿಗೆ ಅಧಿಕಾರಿಯೇ ಹೊಣೆ:

‘ರಾಜ್ಯದಲ್ಲಿ ಎಲ್ಲೇ ಆಗಲಿ, ಕಲುಷಿತ ನೀರು ಪೂರೈಕೆ ಮಾಡಿದರೆ ಸಂಬಂಧಿಸಿದ ಅಧಿಕಾರಿ ವಿರುದ್ಧವೇ ಶಿಸ್ತು ಕ್ರಮ ಜರುಗಿಸಲಾಗುವುದು. ಈ ಸಂಬಂಧ ರಾಜಿ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಕಲುಷಿತ ನೀರು ಕುಡಿದು ಆರು ಜನರು ಮೃತಪಟ್ಟಿರುವ 17ನೇ ವಾರ್ಡ್ ವ್ಯಾಪ್ತಿಯ ಕವಾಡಿಗರಹಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಭೇಟಿ ನೀಡಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

‘ಮೃತರ ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಸರ್ಕಾರದಿಂದ ಉದ್ಯೋಗ ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ಮೂರು ಎಕರೆಯಲ್ಲಿ ಬಡಾವಣೆ ಅಭಿವೃದ್ಧಿಪಡಿಸಿ ನಿವೇಶನ ಹಾಗೂ ಮನೆ ನೀಡಲಾಗುವುದು. ದುರಂತದಲ್ಲಿ ಸಂಕಷ್ಟ ಎದುರಿಸಿದ ಕುಟುಂಬದ ಜೊತೆ ಸರ್ಕಾರ ಇದೆ’ ಎಂದು ಧೈರ್ಯ ತುಂಬಿದರು.

‘ಹಳ್ಳಿ ಹಳ್ಳಿಯಲ್ಲಿ ಬಾರ್‌ ತೆರೆಯುವುದಿಲ್ಲ’

ಮಾಗಡಿ (ರಾಮನಗರ): ಹಳ್ಳಿ, ಹಳ್ಳಿಯಲ್ಲಿ ಬಾರ್ ತೆರೆಯುವುದಿಲ್ಲ. ಜನರು ಕುಡಿಯುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಶುಕ್ರವಾರ ಕುದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಆರ್ಥಿಕ ಇಲಾಖೆ ನಿರ್ಧಾರ ಕೂಡ. ಈ ಕುರಿತು ಮುಖ್ಯಮಂತ್ರಿ ಎಲ್ಲರ ಜೊತೆ ಚರ್ಚಿಸಿ, ಸೂಕ್ತ ತೀರ್ಮಾನ ಮಾಡುತ್ತಾರೆ ಎಂದರು.

ಹೆಚ್ಚಿನ ಜನರಿಗೆ ಉದ್ಯೋಗ ಸೃಷ್ಟಿಸುವ ಸವಾಲು ಸರ್ಕಾರದ ಮುಂದಿದೆ. ಎಲ್ಲಿ ಮದ್ಯದಂಗಡಿ ತೆರೆಯಬೇಕು ಎಂದು ಚರ್ಚೆ ಮಾಡುತ್ತೇವೆ ಎಂದರು.

ಮೂವತ್ತು ವರ್ಷಗಳಿಂದ ಮದ್ಯದಂಗಡಿ ತೆರೆಯಲು ಅಬಕಾರಿ ಲೈಸೆನ್ಸ್ ನೀಡಿಲ್ಲ. ಹಾಗಾಗಿ ಎಲ್ಲರೊಂದಿಗೂ ಚರ್ಚಿಸಿ ಸೂಕ್ತ ಸ್ಥಳಗಳಲ್ಲಿ ಹೊಸದಾಗಿ ಮದ್ಯದಂಗಡಿ ತೆರೆಯಲು ಪರವಾನಗಿ ನೀಡುತ್ತೇವೆ.
ಡಿ.ಕೆ. ಶಿವಕುಮಾರ್,ಉಪಮುಖ್ಯಮಂತ್ರಿ

ವಿ.ವಿ. ಸಾಗರಕ್ಕೆ ಎತ್ತಿನಹೊಳೆ ನೀರು: ಸಿದ್ದರಾಮಯ್ಯ

‘ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ನೀರು ಹರಿದುಬರುತ್ತಿದೆ. ಎತ್ತಿನಹೊಳೆ ಯೋಜನೆಯಿಂದ ಪ್ರತಿವರ್ಷ ಮೂರು ಟಿಎಂಸಿ ಅಡಿ ನೀರು ಹರಿಸುವಂತೆ ಕೃಷಿಕ ಸಮಾಜ ಕೋರಿದೆ. ನೀರು ಹರಿಸುವ ಕಾರ್ಯಸಾಧ್ಯತೆಯ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದರು.

ಹಿರಿಯೂರು ಸಮೀಪದ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ನಿರ್ಮಾಣಗೊಂಡ ಜಲಾಶಯ 12,000 ಎಕರೆಗೆ ನೀರುಣಿಸುತ್ತಿತ್ತು. ಈಗ ಇದರ ವ್ಯಾಪ್ತಿ 45,000 ಎಕರೆಗೆ ವಿಸ್ತರಣೆಗೊಂಡಿದೆ. ಹೆಚ್ಚುವರಿ
ನೀರಿನ ಅಗತ್ಯದ ಕುರಿತು ಜನಪ್ರತಿನಿಧಿಗಳು ಗಮನ ಸೆಳೆದಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಲಿದೆ. ಚಿತ್ರದುರ್ಗ ಜಿಲ್ಲೆಗೆ ನೀರು ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT