ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಪುರ: ಬೆಲೆ ಕುಸಿತ, ಸಾರ್ವಜನಿಕರಿಗೆ ಈರುಳ್ಳಿ ಕೀಳಲು ಬಿಟ್ಟುಕೊಟ್ಟ ರೈತ

3 ಎಕರೆ ಜಮೀನಿನಲ್ಲಿ 5 ಕೆ.ಜಿ. ಈರುಳ್ಳಿ ಬೀಜ ನಾಟಿ ಮಾಡಿದ್ದ ದೇವರಕೊಟ್ಟ ಗ್ರಾಮದ ಕೃಷಿಕ ತಿಮ್ಮಣ್ಣ
Last Updated 27 ಏಪ್ರಿಲ್ 2022, 4:12 IST
ಅಕ್ಷರ ಗಾತ್ರ

ಧರ್ಮಪುರ: ದಿನೇ ದಿನೇ ಕುಸಿಯುತ್ತಿರುವ ದರದಿಂದ ಬೇಸತ್ತ ದೇವರಕೊಟ್ಟ ಗ್ರಾಮದ ರೈತ ತಿಮ್ಮಣ್ಣ ಈರುಳ್ಳಿಯನ್ನು ಕಿತ್ತು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೇ ಸಾರ್ವಜನಿಕರಿಗೆ ಕಿತ್ತುಕೊಳ್ಳಲು ಬಿಟ್ಟುಕೊಟ್ಟಿದ್ದಾರೆ.

ರೈತ ತಿಮ್ಮಣ್ಣ ಅವರು ತಮ್ಮ 3 ಎಕರೆ ಜಮೀನಿನಲ್ಲಿ 5 ಕೆ.ಜಿ. ಈರುಳ್ಳಿ ಬೀಜ ನಾಟಿ ಮಾಡಿದ್ದರು. ಉತ್ತಮ ಫಸಲು ಸಹ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ದಿನೇ ದಿನೇ ಈರುಳ್ಳಿ ದರ ಕುಸಿತ ಆಗುತ್ತಿರುವುದರಿಂದ ಕಂಗಾಲಾದ ಅವರು ಈರುಳ್ಳಿ ಕೀಳುವ ಗೊಡವೆಗೆ ಹೋಗದೇ ಸುಮ್ಮನಾಗಿದ್ದಾರೆ.

ಒಂದು ಕೆ.ಜಿ. ಈರುಳ್ಳಿ ಬೀಜಕ್ಕೆ ₹ 2,800ನಂತೆ ಒಟ್ಟು 5 ಕೆ.ಜಿ. ತಂದು ಬಿತ್ತನೆ ಮಾಡಿದ್ದರು. ಹೆಣ್ಣಾಳು ಕೂಲಿ ಒಬ್ಬರಿಗೆ ₹ 300, ಗಂಡಾಳು ₹ 500, ಔಷಧ, ಗೊಬ್ಬರಕ್ಕೆ ₹ 30 ಸಾವಿರ ಖರ್ಚು ಮಾಡಿದ್ದಾರೆ. ಈರುಳ್ಳಿ ತುಂಬುವ ಖಾಲಿ ಚೀಲ ಒಂದಕ್ಕೆ ₹ 30. ಬೆಂಗಳೂರಿಗೆ ಸಾಗಿಸಲು ಲಾರಿ ಬಾಡಿಗೆ ಒಂದು ಚೀಲಕ್ಕೆ ₹ 80 ಇದೆ. ಈಗ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ 50 ಕೆ.ಜಿ. ತೂಕದ ಒಂದು ಚೀಲ ಈರುಳ್ಳಿಗೆ ₹ 300 ಇದೆ. 5 ಕೆ.ಜಿ. ಬೀಜ ನಾಟಿ ಮಾಡಿದರೆ ಅಂದಾಜು 300 ಚೀಲಗಳಷ್ಟು ಈರುಳ್ಳಿ ಸಿಗುತ್ತದೆ ಎಂಬ ಲೆಕ್ಕಾಚಾರ ಹಾಕಿದರೆ ಕೇವಲ ₹ 15,000 ಆದಾಯವಾಗಬಹುದು. ಹೀಗಾಗಿ ಈರುಳ್ಳಿ ಕೀಳದೇ ಹಾಗೆಯೇ ಬಿಟ್ಟಿದ್ದಾರೆ. ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಗ್ರಾಮದವರು ಬಂದು ಕಿತ್ತುಕೊಂಡು ಹೋಗುತ್ತಿದ್ದಾರೆ. ಈ ಸ್ಥಿತಿ ಯಾವ ರೈತರಿಗೂ ಬರಬಾರದು’ ಎಂದು ತಿಮ್ಮಣ್ಣ ನೋವು ತೋಡಿಕೊಂಡರು.

‘ತಾಲ್ಲೂಕಿನಲ್ಲಿ ಸಾಕಷ್ಟು ರೈತರು ಈರುಳ್ಳಿ ಬೆಳೆದು ಕೈಸುಟ್ಟುಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ. ಕೃಷಿ ಸಚಿವರು ಗ್ರಾಮೀಣ ಪ್ರದೇಶದ ರೈತರ ಹೊಲಗಳಿಗೆ ಭೇಟಿ ಕೊಟ್ಟು ಬೆಳೆ ವೀಕ್ಷಣೆ ಮಾಡಬೇಕು. ಆ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು. ಬರೀ ವೇದಿಕೆಗೆ ಸೀಮಿತವಾಗಬಾರದು’ ಎಂದು ಮಾಜಿ ಸಚಿವ ಡಿ. ಸುಧಾಕರ್ ಒತ್ತಾಯಿಸಿದ್ದಾರೆ.

‘ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಒಣ ಬೇಸಾಯವೇ ಹೆಚ್ಚಿದ್ದು, ಒಂದು ಸಾವಿರ ಅಡಿಯವರೆಗೂ ಕೊಳವೆಬಾವಿ ಕೊರೆಸಿ ಸಿಕ್ಕ ಅಲ್ಪ ನೀರಿನಲ್ಲಿ ತುಂತುರು ಹನಿ ನೀರಾವರಿ ಮೂಲಕ ಬೇಸಾಯ ಮಾಡುತ್ತಿರುವ ರೈತರಿಗೆ ಈ ಪರಿಸ್ಥಿತಿ ಬಂದರೆ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಯೇ ನಿಂತು ಹೋಗಬಹುದು. ಅದಕ್ಕಾಗಿ ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್ ಒತ್ತಾಯಿಸಿದ್ದಾರೆ.

ಈರುಳ್ಳಿ ಸಂಗ್ರಹ ಮಾಡಿ, ನಂತರ ಮಾರಾಟ ಮಾಡಿ
ಈರುಳ್ಳಿ ಈಗ ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತಿದೆ. ಅದರಿಂದ ಬೆಲೆ ಕುಸಿತವಾಗಿದೆ. ರೈತರು ಆತಂಕಕ್ಕೆ ಒಳಗಾಗದೇ ಸ್ವಲ್ಪ ದಿನಗಳವರೆಗೆ ಸಂಗ್ರಹ ಮಾಡಿಕೊಂಡರೆ ಮುಂದೆ ಒಳ್ಳೆಯ ಬೆಲೆ ಸಿಗುತ್ತದೆ. ಮಳೆಗಾಲ ಸಮೀಪಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ದರ ಸಿಗಲಿದೆ.
– ಲೋಕೇಶ್, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT