ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಈರುಳ್ಳಿಗೆ ಕೊಳೆ ರೋಗದ ಭೀತಿ

Published 31 ಜುಲೈ 2023, 7:18 IST
Last Updated 31 ಜುಲೈ 2023, 7:18 IST
ಅಕ್ಷರ ಗಾತ್ರ

ಜಿ.ಬಿ.ನಾಗರಾಜ್‌

ಚಿತ್ರದುರ್ಗ: ಜಿಲ್ಲೆಯಲ್ಲಿ ಸೋನೆಯಂತೆ ಸುರಿದ ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದಾಗಿ ಈರುಳ್ಳಿಗೆ ಕೊಳೆ ರೋಗದ ಭೀತಿ ಎದುರಾಗಿದೆ. ಶೀತದ ಪ್ರಮಾಣ ಹೆಚ್ಚಾಗಿ ರೈತರು ನಷ್ಟದ ಸುಳಿಗೆ ಸಿಲುಕುವ ಆತಂಕ ಎದುರಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಸಾಮಾನ್ಯವಾಗಿ 95 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ವಾಸ್ತವವಾಗಿ 100 ಮಿ.ಮೀ. ಮೀರಿ ಮಳೆ ಸುರಿದಿದೆ. ಎರಡು ವಾರ ಮೋಡ ಮುಸುಕಿದ ವಾತಾವರಣದಲ್ಲಿ ಸೋನೆಯಂತೆ ಮಳೆ ಸುರಿದಿದ್ದು, ಈರುಳ್ಳಿಗೆ ಮಾರಕವಾಗಿದೆ. ಈಗಷ್ಟೇ ಭೂಮಿಗೆ ಇಳಿಯುತ್ತಿದ್ದ ಬೇರು, ಗೆಡ್ಡೆ ಕೊಳೆಯುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 25,147 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯುವ ಗುರಿ ಹೊಂದಲಾಗಿತ್ತು. ಈ ಪೈಕಿ 14,895 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಚಳ್ಳಕೆರೆ, ಚಿತ್ರದುರ್ಗ ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ಮೇ ತಿಂಗಳಿಂದ ಆಗಸ್ಟ್‌ ಮಧ್ಯಭಾಗದವರೆಗೆ ಈರುಳ್ಳಿ ಬಿತ್ತನೆಗೆ ಕಾಲಾವಕಾಶವಿದೆ. ಮುಂಗಾರು ಸಕಾಲಕ್ಕೆ ಬಾರದಿರುವುದರಿಂದ ಈರುಳ್ಳಿ ಬಿತ್ತನೆಯೂ ವಿಳಂಬವಾಗಿದೆ.

‘ಮುಂಗಾರು ತಡವಾಗಿದ್ದರಿಂದ ಜೂನ್ ಎರಡು, ಮೂರನೇ ವಾರದಲ್ಲಿ ರೈತರು ಈರುಳ್ಳಿ ಬಿತ್ತನೆ ಮಾಡಿದ್ದರು. ಕಳೆ ನಿರ್ವಹಣೆ ಮಾಡಿ ಔಷಧ ಸಿಂಪಡಿಸುವ ಸಂದರ್ಭದಲ್ಲಿ ಮಳೆ ನಿರಂತರವಾಗಿ ಸುರಿಯಲಾರಂಭಿಸಿತು. ಜೂನ್‌ ತಿಂಗಳಲ್ಲಿ ಬಿದ್ದ ಮಳೆಗೆ ಚಳ್ಳಕೆರೆ ತಾಲ್ಲೂಕಿನಲ್ಲಿ 41 ಹೆಕ್ಟೇರ್‌ ಈರುಳ್ಳಿ ನಷ್ಟವಾಗಿದೆ. ಸೋನೆಯಂತೆ ಸುರಿದ ಪುಷ್ಯ ಮಳೆಯ ಪರಿಣಾಮಗಳು ಇನ್ನೂ ಗೊತ್ತಾಗಬೇಕಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಸವಿತಾ ಮಾಹಿತಿ ನೀಡಿದರು.

ಮಳೆ ಬಿದ್ದ ತಕ್ಷಣ ಬೆಳೆ ಹಾಳಾಗುವುದಿಲ್ಲ. ಪುಷ್ಯ ಮಳೆಯ ಪರಿಣಾಮವು ಇನ್ನಷ್ಟೇ ಗೊತ್ತಾಗಬೇಕಿದೆ. ಬೆಳೆ ಸಂರಕ್ಷಣೆಗೆ ರೈತರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.
ಸವಿತಾ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ

ನಾಲ್ಕು ವರ್ಷಗಳಿಂದಲೂ ಈರುಳ್ಳಿ ರೈತರ ಕೈಹಿಡಿದಿಲ್ಲ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ರೈತರು ನಷ್ಟ ಅನುಭವಿಸಿದ್ದರು. ವಾಡಿಕೆ ಮಳೆ ಸುರಿದರೆ ಉತ್ತಮ ಫಸಲು ಸಿಗುತ್ತದೆ. ಇದೇ ನೀರಿಕ್ಷೆಯಲ್ಲಿ ಬಿತ್ತನೆ ಮಾಡಿದ್ದ ರೈತರು ಆತಂಕದಿಂದ ದಿನ ಕಳೆಯುತ್ತಿದ್ದಾರೆ. ಶೀತ ಹಾಗೂ ಸೋನೆ ಮಳೆ ಮುಂದುವರಿದರೆ ಈರುಳ್ಳಿ ಸಂಪೂರ್ಣ ಕೊಳೆತು ಹೋಗುವ ಅಪಾಯವಿದೆ.

ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮೇ ತಿಂಗಳಲ್ಲೇ ರೈತರು ಈರುಳ್ಳಿ ಬಿತ್ತನೆ ಮಾಡಿದ್ದರು. ಮುಂಗಾರು ಸಕಾಲಕ್ಕೆ ಸುರಿಯದೇ ಇದ್ದರೂ ಕೊಳವೆ ಬಾವಿ ನೀರು ಹಾಯಿಸಿ ಈರುಳ್ಳಿ ಹಾಕಿದ್ದರು. ಜೂನ್‌ ತಿಂಗಳಲ್ಲಿಯೂ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿದ್ದರಿಂದ ಬಿತ್ತನೆಗೆ ರೈತರು ಹಿಂದೇಟು ಹಾಕಿದ್ದರು. ಈರುಳ್ಳಿ ಮೊಳಕೆಯೊಡೆಯಲು ತಂಪಾದ ವಾತಾವರಣದ ಅಗತ್ಯ ಇರುವುದರಿಂದ ರೈತರು ಆಗಸದತ್ತ ಮುಖ ಮಾಡಿದ್ದರು.

ಮೇ ತಿಂಗಳಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿ ಗೆಡ್ಡೆ ಕಟ್ಟುವ ಹಂತದಲ್ಲಿದೆ. ಜೂನ್‌ ತಿಂಗಳಲ್ಲಿ ಬಿತ್ತನೆ ಮಾಡಿರುವ ಈರುಳ್ಳಿ ಬೇರು ಇನ್ನೂ ಎಳೆಯದಾಗಿದೆ. ಈ ಎರಡೂ ಹಂತದ ಈರುಳ್ಳಿ ಬೆಳೆಗೂ ಶೀಥದಿಂದ ಕೂಡಿದ ಸೋನೆ ಮಳೆ ಮಾರಕವಾಗಿ ಪರಿಣಮಿಸಿದೆ. ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗಿ ಗಡ್ಡೆ ಕೊಳೆಯುವ ಆತಂಕ ತಂದೊಡ್ಡಿದೆ. ಈ ಅಪಾಯದಿಂದ ಪಾರಾಗಲು ರೈತರು ಶ್ರಮಪಡುತ್ತಿದ್ದಾರೆ. ಈರುಳ್ಳಿ ಬೆಳೆಯಲ್ಲಿ ಯಥೇಚ್ಚವಾಗಿ ಕಳೆ ಬೆಳೆದಿದೆ. ಶನಿವಾರವಷ್ಟೇ ಸೂರ್ಯದೇವನ ದರ್ಶನವಾಗಿದ್ದು, ಕಳೆ ತೆಗೆಯಲು ಮುಂದಾಗಿದ್ದಾರೆ.

ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಈರುಳ್ಳಿ ಪ್ರಮುಖ ಬೆಳೆ. ಹವಾಮಾನ ವೈಪರೀತ್ಯದಿಂದಾಗಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲೂ ಈರುಳ್ಳಿ ಬೆಳೆ ನಷ್ಟ ಉಂಟಾಗಿದೆ. ಮಳೆ ಹೀಗೇ ಮುಂದುವರಿದರೆ ನಿರೀಕ್ಷಿತ ಈರುಳ್ಳಿ ಕೈಸೇರದೇ ಬೆಲೆ ಏರಿಕೆ ಆಗುವ ಸಾಧ್ಯತೆಯೂ ಇದೆ.

ದಾಳಿಂಬೆಗೆ ಚುಕ್ಕೆ ರೋಗ

ಮೋಡ ಮುಸುಕಿದ ವಾತಾವರಣ ಹಾಗೂ ಮಳೆಯು ದಾಳಿಂಬೆ ಬೆಳೆಗಾರರಲ್ಲೂ ಆತಂಕ ಮೂಡಿಸಿದೆ. ದಾಳಿಂಬೆ ಹಣ್ಣು ಚುಕ್ಕೆ ರೋಗಕ್ಕೆ ತುತ್ತಾಗುವ ಅಪಾಯವಿದೆ. ‘ಜಿಲ್ಲೆಯಲ್ಲಿ ಅಂದಾಜು 5000 ಹೆಕ್ಟೇರ್ ದಾಳಿಂಬೆ ಬೆಳೆಯಲಾಗಿದೆ. ಫಲ ಕೊಡುವ ಹಂತದಲ್ಲಿರುವ ದಾಳಿಂಬೆಗೆ ಈ ವಾತಾವರಣದಿಂದ ತೊಂದರೆ ಆಗಿದೆ. ಹಣ್ಣಿನ ಮೇಲೆ ಚುಕ್ಕೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಮೆಕ್ಕೆಜೋಳಕ್ಕೆ ಹೆಚ್ಚಾದ ತೇವಾಂಶ

ಎರಡು ವಾರದಿಂದ ಸೋನೆಯಂತೆ ಸುರಿದ ಮಳೆಗೆ ಮೆಕ್ಕೆಜೋಳಕ್ಕೆ ತೇವಾಂಶ ಹೆಚ್ಚಾಗಿದ್ದು ಬೆಳೆ ಕುಂಠಿತವಾಗುವ ಆತಂಕ ರೈತರನ್ನು ಆವರಿಸಿದೆ. ಹೊಳಲ್ಕೆರೆ ಹೊಸದುರ್ಗ ಹಾಗೂ ಚಿತ್ರದುರ್ಗ ತಾಲ್ಲೂಕಿನಲ್ಲಿ ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಮುಂಗಾರು ವಿಳಂಬವಾಗಿದ್ದರಿಂದ ಮೆಕ್ಕೆಜೋಳ ಬಿತ್ತನೆಯೂ ತಡವಾಗಿದೆ. ಈಗಷ್ಟೇ ಎಡೆಕುಂಟೆ ಹೊಡೆಯುವ ಹಂತಕ್ಕೆ ಬಂದಿರುವ ಮೆಕ್ಕೆಜೋಳಕ್ಕೆ ತೇವಾಂಶ ಹೆಚ್ಚಾಗಿದೆ.

ಚುರುಕುಗೊಂಡ ಶೇಂಗಾ ಬಿತ್ತನೆ ಕಾರ್ಯ

ನಾಯಕನಹಟ್ಟಿ: ಶೇಂಗಾ ಬಯಲುಸೀಮೆಯ ಪ್ರಮುಖ ಮಳೆಯಾಶ್ರಿತ ವಾಣಿಜ್ಯ ಬೆಳೆ. ಇದರ ಬಿತ್ತನೆ ಕಾರ್ಯ ಕಳೆದ ಮೂರ್ನಾಲ್ಕು ದಿನಗಳಿಂದ ಚುಕುರುಗೊಂಡಿದೆ. 15 ದಿನಗಳಿಂದ ನಿರಂತರವಾಗಿ ಮೋಡಕವಿದ ವಾತಾವರಣ ಮತ್ತು ಸಾಧಾರಣವಾಗಿ ಸುರಿದ ಮಳೆಯಿಂದ ಶೇಂಗಾ ಬಿತ್ತನೆ ಕಾರ್ಯ ನಡೆಸಲು ಅಡ್ಡಿಯಾಗಿತ್ತು. ಆದರೆ ಬಿತ್ತನೆಗಾಗಿ ಹಸನು ಮಾಡಿಕೊಂಡಿದ್ದ ಭೂಮಿಯಲ್ಲಿ ಯಥೇಚ್ಛವಾಗಿ ಕಳೆ ಬೆಳೆದಿದೆ. ಈಗ ಬಿತ್ತನೆ ಕಾರ್ಯ ಆರಂಭಿಸಿದರೆ ಮುಂದಿನ ದಿನದಲ್ಲಿ ಕಳೆಯ ಪ್ರಮಾಣ ಕಡಿಮಯಾಗಲಿದೆ. ಉತ್ತಮ ಬೆಳೆ ಕೈಸೇರುತ್ತದೆ ಎಂಬುದು ರೈತರ ನಂಬಿಕೆ.

ಬಯಲು ಸೀಮೆಯ ರೈತರು ಬಿತ್ತನೆಗೆ ವಾರ ತಿಥಿ ಮಳೆ ನಕ್ಷತ್ರಗಳನ್ನು ಸದ್ದಿಲ್ಲದೆ ಅನುಸರಿಸುತ್ತಿದ್ದಾರೆ. ಶೇಂಗಾ ಬಿತ್ತನೆಗೆ ಪುನರ್ವಸು ಪುಷ್ಯ ಆಶ್ಲೇಷ ಮಳೆಗಳು ಸೂಕ್ತ ಎಂಬುದು ರೈತರ ತಿಳಿವಳಿಕೆ. ಈ ವರ್ಷ ಜುಲೈ 6ರಿಂದ 20ವರೆಗೆ ಪುನರ್ವಸು ಮಳೆ ಜುಲೈ 20ರಿಂದ ಆಗಸ್ಟ್ 3ರವರೆಗೆ ಪುಷ್ಯ ಮಳೆ ಆಗಸ್ಟ್ 3ರಿಂದ ಆಗಸ್ಟ್ 17ರವರೆಗೆ ಆಶ್ಲೇಷ ಮಳೆ ಎಂದು ನಿಗದಿಯಾಗಿದೆ. ಬಹುತೇಕ ಶೇಂಗಾ ಬೆಳೆಗಾರರು ಪುನರ್ವಸು ಮತ್ತು ಪುಷ್ಯ ಮಳೆಗೆ ಶೇಂಗಾ ಬಿತ್ತುವುದು ವಾಡಿಕೆ. ಈ ಮಳೆಗೆ ಶೇಂಗಾ ಬಿತ್ತಿದರೆ ಉತ್ತಮ ಇಳುವರಿ ಬರುತ್ತದೆ ಎಂಬ ಲೆಕ್ಕಾಚಾರ ರೈತರದ್ದು. ಆದರೆ 15 ದಿನಗಳಿಂದ ನಿರಂತ ಮೋಡಕವಿದ ವಾತವರಣ ಮತ್ತು ಜಡಿ ಮಳೆಯಿಂದ ಬಿತ್ತನೆ ಕಾರ್ಯ ಸಾಧ್ಯವಾಗಿಲ್ಲ. ಆದರೂ ರೈತರಿಗೆ ಇನ್ನೂ 10ರಿಂದ 15 ದಿನಗಳವರೆಗೂ ಶೇಂಗಾ ಬಿತ್ತನೆಗೆ ಅವಕಾಶವಿದೆ.

ಆಶ್ಲೇಷ ಮಳೆಗೂ ಶೇಂಗಾ ಬಿತ್ತನೆ ಕಾರ್ಯ ನಡೆಸಲಿದ್ದು ಈ ಮಳೆಗೆ ಬಿತ್ತನೆ ಕಾರ್ಯ ನಡೆಸಿದರೆ ಶೇಂಗಾಕಾಯಿ ಇಳುವರಿಯಲ್ಲಿ ಕೊಂಚ ಕಡಿಮೆಯಾದರೂ ಉತ್ತಮ ಗುಣಮಟ್ಟದ ಕಾಯಿಕಟ್ಟುತ್ತದೆ. ಶೇಂಗಾ ಬೆಳೆ 110ರಿಂದ 120ದಿನಗಳ ಅವಧಿಯದ್ದಾಗಿದ್ದು ಪುನರ್ವಸು ಮತ್ತು ಪುಷ್ಯ ಮಳೆಗೆ ಬಿತ್ತನೆಯಾದರೆ ಕಟಾವಿನ ಸಮಯದಲ್ಲಿ ಸ್ವಾತಿ ಮತ್ತು ವಿಶಾಖ ಮಳೆ ಬಾಧಿಸುತ್ತವೆ. ಇದರಿಂದ ರೈತರು ಶೇಂಗಾ ರಕ್ಷಿಸಲು ಹರಸಾಹಸ ಪಡಬೇಕಾಗುತ್ತದೆ. ಹಾಗೇ ಶೇಂಗಾ ಹೊಟ್ಟು(ಮೇವು) ಕೊಳೆಯುತ್ತದೆ.

ಆಶ್ಲೇಷ ಮಳೆಗೆ ಶೇಂಗಾ ಬಿತ್ತಿದರೆ ಬೆಳೆ ಕಾಟಾವಿನ ವೇಳೆಗೆ ಎಲ್ಲ ವಾರ್ಷಿಕ ಮಳೆಗಳು ಮುಕ್ತಾಯವಾಗಿ ಚಳಿಯ ಇಬ್ಬನಿ ಆರಂಭವಾಗಿರುತ್ತದೆ. ಈ ಹಂತದಲ್ಲಿ ರೈತರು ಸಲೀಸಾಗಿ ಶೇಂಗಾ ಒಕ್ಕಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ನಾಯಕನಹಟ್ಟಿ ತಳಕು ಹೋಬಳಿಯಾಧ್ಯಂತ ಮೂರ್ನಾಲ್ಕು ದಿನಗಳಿಂದ ರೈತರು ಶೇಂಗಾ ಬಿತ್ತನೆಗೆ ಮುಂದಾಗಿದ್ದಾರೆ.

ನಾಯಕನಹಟ್ಟಿ ಹೋಬಳಿಯಾದ್ಯಂತ 18000 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯ ಗುರಿಯನ್ನು ಹೊಂದಿದ್ದು ಈಗಾಗಲೇ 7500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮುಂದಿನ 8 ದಿನಗಳಲ್ಲಿ ಮಳೆ ಬಿಡುವುಕೊಟ್ಟರೆ ರೈತರು ಶೇಂಗಾ ಬಿತ್ತನೆಕಾರ್ಯ ಪೂರ್ಣಗೊಳ್ಳಲಿದೆ.

ನಾಯಕನಹಟ್ಟಿ ಹೋಬಳಿಯ ಜಮೀನೊಂದರಲ್ಲಿ ಶೇಂಗಾ ಬಿತ್ತನೆಯಲ್ಲಿ ನಿರತರಾಗಿರುವ ರೈತರು
ನಾಯಕನಹಟ್ಟಿ ಹೋಬಳಿಯ ಜಮೀನೊಂದರಲ್ಲಿ ಶೇಂಗಾ ಬಿತ್ತನೆಯಲ್ಲಿ ನಿರತರಾಗಿರುವ ರೈತರು
ನಾಯಕನಹಟ್ಟಿ ಹೋಬಳಿಯ ಜಮೀನೊಂದರಲ್ಲಿ ಈರುಳ್ಳಿ ಬಿತ್ತನೆಯಾಗಿರುವುದು
ನಾಯಕನಹಟ್ಟಿ ಹೋಬಳಿಯ ಜಮೀನೊಂದರಲ್ಲಿ ಈರುಳ್ಳಿ ಬಿತ್ತನೆಯಾಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT