ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರಿಯೂರು: ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ಸೆ 21 ರಂದು ಪಾದಯಾತ್ರೆ

‘ಹಿರಿಯೂರು ತಾಲ್ಲೂಕಿನ ಭರಮಗಿರಿ, ಗೌನಹಳ್ಳಿ, ಭೂತನಹಟ್ಟಿ, ಬೀರೇನಹಳ್ಳಿ, ಕೂನಿಕೆರೆ ನೀರು ಹರಿಸಿ’
Published : 8 ಸೆಪ್ಟೆಂಬರ್ 2024, 15:17 IST
Last Updated : 8 ಸೆಪ್ಟೆಂಬರ್ 2024, 15:17 IST
ಫಾಲೋ ಮಾಡಿ
Comments

ಹಿರಿಯೂರು: ತಾಲ್ಲೂಕಿನ ಭರಮಗಿರಿ, ಗೌನಹಳ್ಳಿ, ಭೂತನಹಟ್ಟಿ, ಬೀರೇನಹಳ್ಳಿ, ಗುಡಿಹಳ್ಳಿ, ಕೂನಿಕೆರೆ ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ಸೆ. 21 ರಂದು ಪಾದಯಾತ್ರೆ ನಡೆಸಲು ಬೀರೇನಹಳ್ಳಿ ಬಸ್ ನಿಲ್ದಾಣದ ವೃತ್ತದಲ್ಲಿ ಭಾನುವಾರ ನಡೆದ ರೈತ ಮುಖಂಡರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆ ಉದ್ದೇಶಿಸಿ ಮಾತನಾಡಿದ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಟಿ. ತಿಪ್ಪೇಸ್ವಾಮಿ, ವಾಣಿವಿಲಾಸ ಜಲಾಶಯದಿಂದ ಕೇವಲ ಎಂಟತ್ತು ಕಿ.ಮೀ. ದೂರದಲ್ಲಿರುವ ಎಲ್ಲಾ ಕೆರೆಗಳಿಗೂ ನೀರು ತುಂಬಿಸಬೇಕು ಎಂದು ಒತ್ತಾಯಿಸಿ ಆ. 21 ರಂದು ವಾಣಿವಿಲಾಸಪುರ ಬಂದ್ ಆಚರಿಸಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಕಾರಣಕ್ಕೆ ಹೋರಾಟ ತೀವ್ರಗೊಳಿಸುವುದು ಅನಿವಾರ್ಯವಾಗಿದೆ ಎಂದರು.

‘ಬಯಲು ಸೀಮೆಯಲ್ಲಿ 30 ಟಿಎಂಸಿ ಅಡಿ ಸಾಮರ್ಥ್ಯದ ನೀರು ಸಂಗ್ರಹ ಶಕ್ತಿ ಇರುವುದು ವಾಣಿವಿಲಾಸ ಜಲಾಶಯಕ್ಕೆ ಮಾತ್ರ. ಎತ್ತಿನಹೊಳೆ ಯೋಜನೆಯಲ್ಲಿ ಇಂತಹದ್ದೊಂದು ಜಲಾಶಯ ನಿರ್ಮಿಸಲು ಆಗದ ಕಾರಣಕ್ಕೆ ತಾತ್ಕಾಲಿಕವಾಗಿ ನೀರನ್ನು ನಮ್ಮ ಜಲಾಶಯಕ್ಕೆ ಹರಿಸುತ್ತಿದ್ದಾರೆ. ನಮ್ಮ ಜಲಾಶಯಕ್ಕೆ ಯಾವುದೇ ರೂಪದಲ್ಲಿ ನೀರು ಬಂದರೂ ನಮಗೆ ಸಂತೋಷ. ಆದರೆ ಜಲಾಶಯಕ್ಕೆ ಸೇರುವ ನೀರನ್ನು ಮೊದಲು ನಮ್ಮ ತಾಲ್ಲೂಕಿನ ರೈತರ ಸಂಕಷ್ಟ ನಿವಾರಣೆಗೆ ಬಳಸಿಕೊಳ್ಳಬೇಕು. ಉಳಿಯುವ ನೀರನ್ನು ಯಾರಿಗೆ ಬೇಕಾದರೂ ಕೊಡಿ. ನಾವು ತಕರಾರು ಮಾಡುವುದಿಲ್ಲ. ಕುಡಿಯುವ ನೀರಿಗೂ ನಮ್ಮಲ್ಲಿ ಅಭಾವವಿದ್ದು, ಸರ್ಕಾರ ನಮ್ಮ ಬೇಡಿಕೆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಿತ್ತು. ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಎರಡನೇ ಹಂತದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಿದ್ದೇವೆ ಎಂದು ಅವರು ಎಚ್ಚರಿಸಿದರು.

‘ವಿವಿ ಪುರದಿಂದ–ಹಿರಿಯೂರು ಚಲೋ ಪಾದಯಾತ್ರೆಯಲ್ಲಿ 200ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳ ಮೂಲಕ ಐದಾರು ಸಾವಿರ ಜನರನ್ನು ಸೇರಿಸಿಕೊಂಡು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕೋಣ. ಪ್ರತಿ ಹಳ್ಳಿಯಿಂದಲೂ ರೈತರು, ರೈತ ಮಹಿಳೆಯರು ತಂಡೋಪತಂಡವಾಗಿ ಹೋರಾಟಕ್ಕೆ ಬರಬೇಕು’ ಎಂದು ತಿಪ್ಪೇಸ್ವಾಮಿ ಮನವಿ ಮಾಡಿದರು.

ರೈತಸಂಘದ ಕಾರ್ಯದರ್ಶಿ ಆಲೂರು ಸಿದ್ರಾಮಣ್ಣ ಮಾತನಾಡಿ, ‘ನಾವು ನೀರು ತುಂಬಿಸಬೇಕು ಎಂದು ಹೋರಾಟ ನಡೆಸುತ್ತಿರುವ ಹಳ್ಳಿಗಳು ತಾಲ್ಲೂಕಿನಲ್ಲಿಯೇ ಅತಿ ಹಿಂದುಳಿದಿದ್ದು, ರೈತರು ಬದುಕು ನಡೆಸುವುದು ದುಸ್ತರವಾಗಿದೆ. ಕೆರೆಗಳು ಬತ್ತಿ ಹೋಗಿರುವ ಕಾರಣ ಅಂತರ್ಜಲ ಕುಸಿದಿದೆ. ಸಾವಿರ ಅಡಿಯವರೆಗೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಹೀಗಾಗಿ ನೀರಿಗಾಗಿ ಬೀದಿಗಿಳಿದು ಹೋರಾಟ ನಡೆಸಬೇಕು’ ಎಂದು ಕರೆ ನೀಡಿದರು.

ಸಭೆಯಲ್ಲಿ ಪಿ.ಜೆ. ತಿಪ್ಪೇಸ್ವಾಮಿ ಮಾತನಾಡಿದರು. ಬೀರೇನಹಳ್ಳಿಯ ಪುಟ್ಟಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶಯ್ಯ, ಪಾಂಡಪ್ಪ, ಪಾರ್ಥೇಶ್, ಎನ್. ರಾಜಪ್ಪ, ಪಾಂಡುರಂಗಪ್ಪ, ಅರುಣ, ಕಿರಣ್, ಕರ್ಣ, ಗೌನಹಳ್ಳಿಯ ಗೌಡರ ಶಿವಣ್ಣ, ತಿಮ್ಮಣ್ಣ, ಭೂತಬೋವಿ, ಹನುಮಣ್ಣ, ಉಗ್ಗಿ ತಿಮ್ಮಣ್ಣ, ಎನ್.ವಿ. ಗೌಡ, ಸಿದ್ದೇಶ್, ಮೂರ್ತಪ್ಪ, ಗೋಪಾಲಪ್ಪ, ರಾಮಣ್ಣ, ಸಿದ್ದಮ್ಮ, ಜನಾರ್ಧನ್, ತಿಮ್ಮರಾಯ, ರಾಜಣ್ಣ, ಚಿಕ್ಕಣ್ಣ, ಶಿವಣ್ಣ, ಲಕ್ಷ್ಮಿಕಾಂತ್, ನರಸಿಂಹಮೂರ್ತಿ, ಮಹೇಶಣ್ಣ, ಪಾಂಡು, ಗಿರೀಶ್ ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT