ಗುರುವಾರ , ಅಕ್ಟೋಬರ್ 6, 2022
22 °C
ಸಾಕ್ಷ್ಯ ನಾಶಕ್ಕೆ ಅವಕಾಶ: ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಆರೋಪ

‘ಪೋಕ್ಸೊ: ಕಾನೂನು ಪಾಲನೆ ತಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದ ಕೂಡಲೇ ಆರೋಪಿಯನ್ನು ಬಂಧಿಸಬೇಕಿತ್ತು. ಚಿತ್ರದುರ್ಗದ ಪ್ರಕರಣದಲ್ಲಿ ಕಾನೂನು ಪಾಲನೆ ತಡವಾಗಿದೆ’ ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಬೇಸರ ವ್ಯಕ್ತಪಡಿಸಿದರು. 

ನಗರದ ಮಾನಸ ಗಂಗೋತ್ರಿಯಲ್ಲಿ ‘ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ’ವು ಗುರುವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ‘ಎಫ್‌ಐಆರ್‌ ದಾಖಲಾಗಿ ನಾಲ್ಕು ದಿನವಾದರೂ ಆರೋಪಿ ಬಂಧನವಾಗಿರಲಿಲ್ಲ. ಸಾಕ್ಷ್ಯಗಳ ನಾಶಕ್ಕೆ ಅವಕಾಶ ಮಾಡಿಕೊಡಲಾಗಿದೆ’
ಎಂದು ಆರೋಪಿಸಿದರು.  

‘ಬುಡಕಟ್ಟು ಸಮುದಾಯದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಗೊತ್ತಿಲ್ಲದೆ ವಿವಾಹವಾದರೆ ಅವರ ವಿರುದ್ಧ ಪ್ರಕರಣ ದಾಖಲಾಗಿ ಬಂಧನವಾಗುತ್ತದೆ. ಆದರೆ, ಚಿತ್ರದುರ್ಗ ಪ್ರಕರಣದಲ್ಲಿ ಎಲ್ಲವೂ ನಿಧಾನ’ ಎಂದರು. 

‘ಅನ್ಯಾಯಕ್ಕೊಳಗಾದ ನೂರಾರು ಹೆಣ್ಣುಮಕ್ಕಳ ಧ್ವನಿಯಾಗಿದ್ದ ಆ ಇಬ್ಬರು ಮಕ್ಕಳು ನೋವನ್ನು ಹೇಳಿಕೊಂಡಾಗ ಅವರಿಗೆ ನ್ಯಾಯ ಕೊಡಿಸುವುದೇ ಸಂಸ್ಥೆಯ ಗುರಿಯಾಗಿತ್ತು. ಸಂಸ್ಥೆಯು ಮಕ್ಕಳ ಪರವಾಗಿ ಹೋರಾಟ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಾರು ಬೆದರಿಕೆ ಕರೆಗಳು ಬಂದಿವೆ’ ಎಂದು ಹೇಳಿದರು. 

ಸಂಸ್ಥೆಯ ಎಂ.ಎಲ್.ಪರಶುರಾಂ ಮಾತನಾಡಿ, ‘ಮಕ್ಕಳ ಹಕ್ಕುಗಳ ಪರವಾಗಿ ಹೋರಾಟ ನಡೆಸುವಾಗೆಲ್ಲ ಸಂಸ್ಥೆಯ ವಿರುದ್ಧ ಕೆಲವರು ಚಿತಾವಣೆ ನಡೆಸುತ್ತಿದ್ದಾರೆ. ಕ್ರೈಸ್ತರ ಷಡ್ಯಂತ್ರ, ಮತಾಂತರ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಬೇಕಾದರೆ ಕೇಂದ್ರ ತನಿಖಾ ತಂಡದಿಂದಲೂ ತನಿಖೆಗೆ ನಡೆಸಲಿ. ಸಂಸ್ಥೆಯು ಯಾವುದೇ ಧರ್ಮ, ಜಾತಿಯ ವಿರೋಧಿಯಲ್ಲ. ನೊಂದ ಮಕ್ಕಳ ಪರವಷ್ಟೇ’ ಎಂದು ಸ್ಪಷ್ಟಪಡಿಸಿದರು. 

ಲೇಖಕ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ‘ಸಮಾಜದಲ್ಲಿ ಒಳ್ಳೆಯದನ್ನು ಬಯಸುವ ಮನಸ್ಸುಗಳು ‌ಒಡನಾಡಿ ಸಂಸ್ಥೆ ಪರ ನಿಲ್ಲಲಿವೆ. ಅವರ ಜೊತೆಗೆ ಎಲ್ಲರೂ ಇದ್ದೇವೆ’ ಎಂದರು. 

ರಂಗಕರ್ಮಿ ಜನಾರ್ಧನ್, ಸಂಶೋಧಕರ ಸಂಘದ ಅಧ್ಯಕ್ಷ ನಟರಾಜ್ ಶಿವಣ್ಣ, ಮಹೇಶ್ ಸೋಸಲೆ, ಉಪಾಧ್ಯಕ್ಷ ಕಲ್ಲಹಳ್ಳಿ ಕುಮಾರ್, ರಘು, ಬಸವರಾಜು ಸಿ.ಜೆಟ್ಟಿಹುಂಡಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು