ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳರ ಬಂಧನ: ₹ 30 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಜಪ್ತಿ

16 ಪ್ರಕರಣ ಭೇದಿಸಿದ ಪೊಲೀಸರು, ಐವರು ಆರೋಪಿಗಳ ಬಂಧನ
Last Updated 8 ಸೆಪ್ಟೆಂಬರ್ 2020, 11:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಮನೆ ಕಳವು, ವಾಹನ ಕಳವು ಹಾಗೂ ಎಟಿಎಂ ವಂಚನೆಗೆ ಸಂಬಂಧಿಸಿದ 16 ಪ್ರಕರಣಗಳನ್ನು ಭೇದಿಸಿರುವ ಜಿಲ್ಲಾ ಪೊಲೀಸರು, ಸುಮಾರು ₹ 30 ಲಕ್ಷ ಮೌಲ್ಯದ ಚಿನ್ನಾಭರಣ, ವಾಹನ ಹಾಗೂ ನಗದು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಧನಂಜಯ (44), ಚಿಕ್ಕಬಳ್ಳಾಪುರದ ಆರೂರು ಗ್ರಾಮದ ಮೋಹನ್‌ (39), ಸೀಬಾರದ ಖಾಸಿಂ ಅಲಿ (23), ಚಿತ್ರದುರ್ಗದ ಜಿಶನ್‌ (23) ಹಾಗೂ ಆಂಧ್ರಪ್ರದೇಶದ ಅನಂತಪುರದ ಕೃಷ್ಣಮೂರ್ತಿ (42) ಬಂಧಿತರು.

ಇಬ್ಬರು ಆಂಧ್ರಪ್ರದೇಶದ ಅಂತರರಾಜ್ಯ ಕಳ್ಳರಿದ್ದು, ಮೂವರು ಕರ್ನಾಟಕದವರು. ಆರೋಪಿಗಳ ಬಂಧನದಿಂದ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ನಡೆದಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ. ಪೊಲೀಸರ ನಾಲ್ಕು ಪ್ರತ್ಯೇಕ ತಂಡಗಳು ನಡೆಸಿದ ಕಾರ್ಯಾಚರಣೆ ಫಲಪ್ರದವಾಗಿದೆ.

ಬೀಗ ಹಾಕಿದ ಮನೆಗೆ ಹೊಂಚು:‘ಅನಂತಪುರ ಜಿಲ್ಲೆಯ ಧನಂಜಯ ಹಾಗೂ ಚಿಕ್ಕಬಳ್ಳಾಪುರದ ಮೋಹನ್‌ ಬಂಧನದಿಂದ 9 ಮನೆ ಕಳವು ಪ್ರಕರಣ ಬೆಳಕಿಗೆ ಬಂದಿವೆ. ತುಮಕೂರು ಜಿಲ್ಲೆಯ ನೊಣವಿನಕೆರೆ ಹಾಗೂ ಕಳ್ಳಂಬೆಳ್ಳ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣ ಕೂಡ ಪತ್ತೆಯಾಗಿವೆ. ಬಂಧಿತರಿಂದ ₹ 18.75 ಲಕ್ಷ ಮೌಲ್ಯದ 372 ಗ್ರಾಂ ಚಿನ್ನ ಹಾಗೂ 210 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕಾರು ಚಾಲಕನಾಗಿದ್ದ ಧನಂಜಯ ಹಾಗೂ ಕ್ಷೌರಿಕ ಕೆಲಸ ಮಾಡಿಕೊಂಡಿದ್ದ ಮೋಹನ್ ಮನೆ ಕಳವಿನಲ್ಲಿ ನಿಷ್ಣಾತರಾಗಿದ್ದರು. ಮನೆ ಬೀಗ ಮುರಿಯುವುದನ್ನು ಕಲಿತಿದ್ದರು. ಬಸ್ಸಿನಲ್ಲಿ ಹಿರಿಯೂರಿಗೆ ಬರುತ್ತಿದ್ದ ಆರೋಪಿಗಳು ಎಲ್ಲೆಡೆ ಓಡಾಡಿ ಒಂಟಿ ಮನೆ ಹಾಗೂ ಬೀಗ ಹಾಕಿದ ಮನೆಗಳನ್ನು ಹುಡುಕಿ ಕಳವು ಮಾಡುತ್ತಿದ್ದರು’ ಎಂದು ವಿವರಿಸಿದರು.

‘ಕೃತ್ಯ ಎಸಗಿದ ಬಳಿಕ ಹೊರ ಜಿಲ್ಲೆಗೆ ಪರಾರಿಯಾಗುತ್ತಿದ್ದರು. ಕಳವು ಮಾಡಿದ ಸ್ಥಳದಲ್ಲಿ ದೊರೆತ ಸಾಕ್ಷ್ಯದ ಆಧಾರದ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆ, ಅಬ್ಬಿನಹೊಳೆ ಠಾಣೆ, ಐಮಂಗಲ ಠಾಣೆಯ ತಲಾ 2 ಹಾಗೂ ಭರಮಸಾಗರ ಠಾಣೆಯ ಒಂದು ಪ್ರಕರಣ ಪತ್ತೆಯಾಗಿವೆ’ ಎಂದು ಮಾಹಿತಿ ನೀಡಿದರು.

ಪಾರ್ಕಿಂಗ್‌ ಸ್ಥಳದಲ್ಲಿ ಬೈಕ್‌ ಕಳವು:‘ಪೇಂಟಿಂಗ್‌ ಕೆಲಸ ಮಾಡುತ್ತಿದ್ದ ಖಾಸಿಂ ಅಲಿ ದ್ವಿಚಕ್ರ ವಾಹನ ಪಾರ್ಕಿಂಗ್‌ ಮಾಡಿದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಹೊಂಚು ಹಾಕುತ್ತಿದ್ದ. ಹಿರಿಯೂರು ನಗರದಲ್ಲಿ 3 ಹಾಗೂ ಚಿತ್ರದುರ್ಗ ನಗರದಲ್ಲಿ 2 ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ. ಆರೋಪಿ ಬಂಧನದಿಂದ ₹ 1.15 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಲಾರಿಗಳಿಗೆ ಗ್ರೀಸ್ ಹಾಕುವ ಕೆಲಸ ಮಾಡಿಕೊಂಡಿದ್ದ ಜಿಶನ್‌ 2019ರಲ್ಲಿ ರಾಯಲ್‌ ಎನ್‌ಫಿಲ್ಡ್‌ ಬೈಕ್‌ ಕಳವು ಮಾಡಿದ್ದ. ₹ 88 ಸಾವಿರ ಮೌಲ್ಯದ ಬೈಕನ್ನು ಪತ್ತೆ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ’ ಎಂದರು.

ಚಿನ್ನದ ನಾಣ್ಯ ಖರೀದಿಸುತ್ತಿದ್ದ ವಂಚಕ:ಎಟಿಎಂನಲ್ಲಿ ಹಣ ಪಡೆಯುವವರಿಗೆ ಸಹಾಯ ಮಾಡುವ ನೆಪದಲ್ಲಿ ಧಾವಿಸಿ ವಂಚಿಸುತ್ತಿದ್ದ ಕೃಷ್ಣಮೂರ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವಂಚಿಸಿದ ಹಣದಲ್ಲಿ ಚಿನ್ನದ ನಾಣ್ಯಗಳನ್ನು ಖರೀದಿಸುತ್ತಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತನಕಲ್‌ ಮಂಡಲ್‌ ನಿವಾಸಿ ಕೃಷ್ಣಮೂರ್ತಿ 8ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾನೆ. ಹೋಟೆಲ್‌ನಲ್ಲಿ ಸರ್ವರ್‌ ಕೆಲಸ ಮಾಡಿಕೊಂಡಿದ್ದ ಈತ ಎಟಿಎಂ ವಂಚನೆಗೆ ಇಳಿದ ಬಳಿಕ ಐಷಾರಾಮಿ ಜೀವನ ನಡೆಸುತ್ತಿದ್ದ.

‘ಎಟಿಎಂ ಬಳಿ ಹೊಂಚುಹಾಕಿ ಕುಳಿತುಕೊಳ್ಳುತ್ತಿದ್ದ ಆರೋಪಿ, ಹಿರಿಯ ನಾಗರಿಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಪ್ರವೇಶಿಸುತ್ತಿದ್ದ. ಎಟಿಎಂ ಪಾಸ್‌ವರ್ಡ್‌ ನೋಡಿಕೊಂಡು ನಕಲಿ ಎಟಿಎಂ ಕೈಗಿಡುತ್ತಿದ್ದ. ಚಿನ್ನಾಭರಣ ಅಂಗಡಿಗೆ ತೆರಳಿ ಚಿನ್ನದ ನಾಣ್ಯ ಖರೀದಿಸಿ ಪರಾರಿಯಾಗುತ್ತಿದ್ದನು. ಎಲ್ಲ ಬ್ಯಾಂಕಿನ ನಕಲಿ ಎಟಿಎಂಗಳನ್ನು ಆರೋಪಿ ಇಟ್ಟುಕೊಂಡಿದ್ದ’ ಎಂದು ಎಸ್‌ಪಿ ರಾಧಿಕಾ ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ಡಿವೈಎಸ್‌ಪಿ ಪಾಂಡುರಂಗ, ಹಿರಿಯೂರು ಡಿವೈಎಸ್‌ಪಿ ಎಸ್.ರೋಷನ್‌ ಜಮೀರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT