ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಪುರ: ದಾಳಿಂಬೆ ಬೆಳೆದು ಹಸನಾದ ಬದುಕು

600 ಗ್ರಾಂ ತೂಗುವ ಹಣ್ಣು l ಮಾರುಕಟ್ಟೆಯಲ್ಲಿ ಉತ್ತಮ ದರ
Published 27 ಮಾರ್ಚ್ 2024, 6:28 IST
Last Updated 27 ಮಾರ್ಚ್ 2024, 6:28 IST
ಅಕ್ಷರ ಗಾತ್ರ

ಧರ್ಮಪುರ: ಮೂರು ವರ್ಷಗಳ ಹಿಂದೆ ನಾಟಿ ಮಾಡಿದ್ದ ದಾಳಿಂಬೆ ಈಗ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಧರ್ಮಪುರ ಸಮೀಪದ ಮದ್ದಿಹಳ್ಳಿಯ ರೈತ ಕೆ.ದೊಡ್ಡಯ್ಯ ಮತ್ತು ಅವರ ಪುತ್ರ ಎಂ.ಡಿ. ಪ್ರಸನ್ನಕುಮಾರ ಅವರ ಪರಿಶ್ರಮಕ್ಕೆ ಸಮೃದ್ಧವಾದ ಫಲ ದೊರೆಯುತ್ತಿದೆ.

ಮೂಲಕ ಹಣ್ಣಿನ ಗಿಡ ಬೆಳೆಯಲು ನಿರ್ಧರಿಸಿದ ದೊಡ್ಡಯ್ಯ, 2021ರಲ್ಲಿ 5 ಎಕರೆ ಜಮೀನನ್ನು ಭೋಗ್ಯ‌ಕ್ಕೆ ಪಡೆದು, ಚಟುವಟಿಕೆ ಆರಂಭಿಸಿದರು. ಅಂದಾಜು 3,000 ದಾಳಿಂಬೆ ಸಸಿಗಳನ್ನು ನಾಟಿ ಮಾಡಿ ಪ್ರಯೋಗಕ್ಕೆ ಇಳಿದರು. ತೋಟದಲ್ಲಿನ 10 ಕೊಳವೆಬಾವಿಗಳಲ್ಲಿ ನೀರು ಲಭ್ಯವಿದ್ದು, ಗಿಡಗಳನ್ನು ಪೋಷಿಸಲು ಸಾಧ್ಯವಾಗಿದೆ.‌

ವ್ಯವಸಾಯದಲ್ಲಿ ಅನೇಕ ಬಾರಿ ಕೈ ಸುಟ್ಟುಕೊಂಡರೂ ಛಲ ಬಿಡದೇ ಕೃಷಿ ಮುಂದುವರಿಸಿರುವ ಇವರ ಇಷ್ಟು ವರ್ಷಗಳ ಪರಿಶ್ರಮಕ್ಕೆ ಸಮೃದ್ಧ ದಾಳಿಂಬೆ ತೋಟವೇ ಈಗ ಉತ್ತರ ಹೇಳುತ್ತಿದೆ. 

ಬ್ಯಾಕ್ಟಿರೀಯಾ ಬ್ಲೈಟ್‌ಗೂ ಹೆದರಲಿಲ್ಲ: ಚಿತ್ರದುರ್ಗ ಜಿಲ್ಲೆಯು ತೋಟಗಾರಿಕಾ ಬೆಳೆಗಳಿಗೆ ಉತ್ತಮ ಹವಾಗುಣ ಹೊಂದಿದೆ. ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ರೈತರು ದಾಳಿಂಬೆ, ಸಪೋಟ, ಪಪ್ಪಾಯ, ಸೀಬೆ, ಅಂಜೂರ ಮತ್ತಿತರ ಹಣ್ಣಿನ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾದರು. ಆದರೆ, ಬರಸಿಡಿಲಿನಂತೆ ಎರಗಿದ ಬ್ಯಾಕ್ಟಿರೀಯಾ ಬ್ಲೈಟ್‌ ರೋಗದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಬಹುತೇಕ ರೈತರು ತೋಟಗಾರಿಕಾ ಬೆಳೆಗಳ ಸಹವಾಸವೇ ಬೇಡ ಎಂದು ನಿರ್ಧರಿಸಿದರು. ದಾಳಿಂಬೆ, ಸೀಬೆ ಮತ್ತು ಅಂಜೂರ ತೋಟಗಳನ್ನು ನಾಶ ಮಾಡಿ, ಮತ್ತೆ ಸಾಂಪ್ರದಾಯಿಕ ಬೆಳೆಗಳತ್ತ ಹೊರಳಿದರು. ಇತ್ತ ಕೆ.ದೊಡ್ಡಯ್ಯ ಮತ್ತು ಪ್ರಸನ್ನಕುಮಾರ ಧೃತಿಗೆಡದೆ ದಾಳಿಂಬೆ ಗಿಡ ಉಳಿಸಿಕೊಂಡರು. ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿ, ಸಾವಯವ ಗೊಬ್ಬರ ಬಳಕೆ ಮಾಡಿ ಗಿಡಗಳನ್ನು ಜತನ ಮಾಡಿದರು.

ದಾಳಿಂಬೆ ಗಿಡಗಳಿಗೆ ಕೋಳಿ ಗೊಬ್ಬರ, ಕುರಿ ಗೊಬ್ಬರದ ಜತೆಗೆ ಸಾವಯವ ಗೊಬ್ಬರ ಬಳಸುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಕಟಾವು ಮಾಡಿರುವ ಅವರ ತೋಟದಲ್ಲಿ ಮೂರನೇ ವರ್ಷಕ್ಕೆ ಗಿಡಗಳು ಚೆನ್ನಾಗಿ ಬಲಿತಿದ್ದು, ಹೆಚ್ಚು ಫಲಸು ಹೊತ್ತು ನಿಂತಿವೆ. ಕಟಾವಿಗೆ ಸಿದ್ಧವಾಗಿವೆ.

‘ಒಂದೊಂದು ಹಣ್ಣು 600ರಿಂದ 700 ಗ್ರಾಂ ತೂಕವಿದೆ. ಒಂದು ಗಿಡಕ್ಕೆ 20ರಿಂದ 30 ಕೆ.ಜಿ ಇಳುವರಿ ಸಿಗುತ್ತಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹ 120ರಿಂದ ₹ 140 ದರವಿದೆ. ಹೀಗಾಗಿ ಉತ್ತಮ ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಜತೆಗೆ ದಾಳಿಂಬೆ ಬೆಳೆಗಾರರಿಗೆ ಸಸಿ ವಿತರಿಸಲು ಆರೋಗ್ಯವಾಗಿರುವ ಗಿಡಗಳಿಗೆ ಗೂಟಿ ಕಟ್ಟಲಾಗಿದೆ’ ಎಂದು ಕೆ.ದೊಡ್ಡಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮೃದ್ಧವಾಗಿ ಬೆಳೆದಿರುವ ದಾಳಿಂಬೆ ಹಣ್ಣು

ಸಮೃದ್ಧವಾಗಿ ಬೆಳೆದಿರುವ ದಾಳಿಂಬೆ ಹಣ್ಣು

ಅಂತರ ಬೆಳೆಯಾಗಿ ಅಡಿಕೆ

ಇದೇ 5 ಎಕರೆ ಜಮೀನಿನಲ್ಲಿ ದಾಳಿಂಬೆ ಗಿಡಗಳ ಮಧ್ಯದಲ್ಲಿ ಅಂತರ ಬೆಳೆಯಾಗಿ ಸುಮಾರು 2,000 ಅಡಿಕೆ ಸಸಿಗಳನ್ನು ನಾಟಿ ಮಾಡಲಾಗಿದೆ. ಅಡಿಕೆ ಗಿಡಗಳೂ ಸಮೃದ್ಧವಾಗಿ ಬೆಳೆದಿವೆ. 

‘ದಾಳಿಂಬೆ ಗಿಡಕ್ಕೆ ಬ್ಯಾಕ್ಟಿರೀಯಾ ಬ್ಲೈಟ್ ಬಂದಿದ್ದರಿಂದ ಅಡಿಕೆ ಅಥವಾ ಏನನ್ನಾದರೂ ಬೆಳೆಯುವುದು ಅನಿವಾರ್ಯವಾಗಿತ್ತು. ‘ದಾಳಿಂಬೆ ಗಿಡಗಳ ನೆರಳು ಇದ್ದುದ್ದರಿಂದ ಅಡಿಕೆ ಗಿಡಗಳು ಉತ್ಕೃಷ್ಟವಾಗಿ ಬೆಳೆಯುತ್ತಿವೆ. ಭೂತಾಯಿ ನಂಬಿ ಕಾಯಕ ಮಾಡಿದಲ್ಲಿ ನಂಬಿದವರನ್ನು ಕೈಬಿಡುವುದಿಲ್ಲ’ ಎಂದು ದೊಡ್ಡಯ್ಯ ಹೇಳುತ್ತಾರೆ.

ದಾಳಿಂಬೆ ಉತ್ತಮ ಬೆಳೆಯಾಗಿದ್ದು, ಬೇರೆ ಯಾವುದೇ ಸಾಂಪ್ರದಾಯಿಕ ತೋಟದ ಬೆಳೆಯಲ್ಲಿ ಇಷ್ಟೊಂದು ಆದಾಯ ಸಿಗುವುದಿಲ್ಲ. ಜತೆಗೆ ಕಷ್ಟ ಕಾಲದಲ್ಲಿ ಸರ್ಕಾರ ಬೆಳೆಗಾರರಿಗೆ ಸಹಾಯಧನ ನೀಡಬೇಕು. ತೋಟಗಾರಿಕಾ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯವನ್ನು ಇಲ್ಲಿಯೇ ಒದಗಿಸಿದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದು ದೊಡ್ಡಯ್ಯ ಅವರ ಮಗ ಎಂ.ಡಿ.ಪ್ರಸನ್ನಕುಮಾರ ‘ಪ್ರಜಾವಾಣಿ’ಗೆ ವಿವರಿಸಿದರು. ಅವರ ಸಂಪರ್ಕಕ್ಕೆ ಮೊಬೈಲ್ ನಂಬರ್: 9643277726

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT