ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: 268 ಗ್ರಾಮಗಳಲ್ಲಿ ನೀರಿಗೆ ಬವಣೆ ಸಾಧ್ಯತೆ

Last Updated 1 ಮೇ 2022, 4:37 IST
ಅಕ್ಷರ ಗಾತ್ರ

ಚಿತ್ರದುರ್ಗ: ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವ 268 ಗ್ರಾಮಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗುರುತಿಸಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿಯೇ ಇಂತಹ ಗ್ರಾಮಗಳು ಹೆಚ್ಚಾಗಿ ಕಂಡುಬಂದಿವೆ.

ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ಪೂರೈಕೆ ಮಾಡುವಷ್ಟು ಸಮಸ್ಯೆ ಇನ್ನೂ ಎದುರಾಗಿಲ್ಲ. ಟ್ಯಾಂಕರ್‌ ನೀರು ಪೂರೈಕೆ ಮಾಡುವ ಪರಿಸ್ಥಿತಿ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಸೃಷ್ಟಿಯಾಗಿಲ್ಲ. ನೀರಿನ ಸಮಸ್ಯೆ ಇರುವ ಹಳ್ಳಿಗಳ ಪಟ್ಟಿ ಮಾತ್ರ ಸಿದ್ಧಪಡಿಸಿಕೊಳ್ಳಲಾಗಿದೆ. ಸಮಸ್ಯೆ ಎದುರಾದರೆ ಖಾಸಗಿ ಕೊಳವೆ ಬಾವಿ ವಶಕ್ಕೆ ಪಡೆಯಲು, ಕೊಳವೆ ಬಾವಿ ಕೊರೆಸಲು ಹಾಗೂ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ.

ಬರಪೀಡಿತ ಪ್ರದೇಶವಾಗಿರುವ ಚಿತ್ರದುರ್ಗದಲ್ಲಿ ಮಳೆ ಪ್ರಮಾಣ ಕಡಿಮೆ. ಕುಡಿಯುವ ನೀರಿಗೆ ಸುಸ್ಥಿರ ನೀರಿನ ಮೂಲಗಳು ವಿರಳ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಕೊಳವೆಬಾವಿಗಳೇ ಆಸರೆ. ಕೊಳವೆಬಾವಿಗಳು ಬೇಸಿಗೆ ಸಂದರ್ಭದಲ್ಲಿ ಬತ್ತಿ ನೀರಿಗೆ ತತ್ವಾರ ಉಂಟಾಗುವ ಸಂಭವ ಇಲ್ಲಿ ಹೆಚ್ಚು. ಪ್ರತಿ ವರ್ಷದಂತಹ ಭೀಕರ ಪರಿಸ್ಥಿತಿ ಪ್ರಸಕ್ತ ಬೇಸಿಗೆಯಲ್ಲಿಲ್ಲ. ಆದರೂ, ನೀರು ಪೂರೈಕೆ, ಹಂಚಿಕೆ ಹಾಗೂ ಆಡಳಿತ ವ್ಯವಸ್ಥೆಯಲ್ಲಿನ ಲೋಪದಿಂದಾಗಿ ಹಲವೆಡೆ ನೀರು ನಿಯಮಿತವಾಗಿ ಲಭ್ಯವಾಗುತ್ತಿಲ್ಲ.

ವಿ.ವಿ. ಸಾಗರ ಜಲಾಶಯದಿಂದ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ನಗರ ಹಾಗೂ ತಾಲ್ಲೂಕಿನ ಕೆಲ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ವ್ಯವಸ್ಥೆ ಇದೆ. ದಾವಣಗೆರೆ ಜಿಲ್ಲೆಯ ಶಾಂತಿಸಾಗರ ಕೆರೆಯಿಂದಲೂ ನೀರು ಸರಬರಾಜು ಮಾಡಲಾಗುತ್ತಿದೆ. ವಿ.ವಿ.ಸಾಗರ ಹಾಗೂ ಶಾಂತಿಸಾಗರದಲ್ಲಿ ಈ ವರ್ಷ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ. ಜಲಮೂಲಗಳು ಭರ್ತಿಯಾಗಿರುವುದರಿಂದ ನಗರ ವ್ಯಾಪ್ತಿಯ ನೀರು ಸರಬರಾಜಿನಲ್ಲಿ ಅಷ್ಟು ತೊಂದರೆ ಕಂಡುಬಂದಿಲ್ಲ.

‘ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ನೀರಿನ ಬವಣೆಯ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಲಾಗಿದೆ. ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಭೆ ನಡೆಸಿ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ತಾಲ್ಲೂಕು ಮಟ್ಟದ ಟಾಸ್ಕ್‌ ಫೋರ್ಸ್‌ಗೆ ಅನುದಾನವೂ ಲಭ್ಯವಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಮಹಾಂತಪ್ಪ ಜಿ. ಕನ್ನೂರು ತಿಳಿಸಿದರು.

ಮುಂಗಾರು ಹಾಗೂ ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿದಿದೆ. ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿಯೂ ನಿರೀಕ್ಷೆ ಮೀರಿ ಮಳೆ ಬಂದಿದೆ. ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಕೊಳವೆಬಾವಿಯಲ್ಲಿ ನೀರು ಲಭ್ಯವಾಗುತ್ತಿದೆ. ಪೂರ್ವ ಮುಂಗಾರು ಮಳೆ ಆರಂಭವಾಗಿರುವುದರಿಂದ ನೀರಿಗೆ ತತ್ವಾರ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಅಂದಾಜಿಸಲಾಗಿದೆ.

ಶುದ್ಧ ನೀರಿನ ಘಟಕ ತೊಂದರೆ

ಕುಡಿಯುವ ನೀರಿನ ಪೂರೈಕೆಯ ಉದ್ದೇಶದಿಂದ ಜಿಲ್ಲೆಯಲ್ಲಿ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕ (ಆರ್‌ಒ) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಿರ್ವಹಣೆಯ ಕೊರತೆಯಿಂದ ಗ್ರಾಮೀಣ ಪ್ರದೇಶದ ಹಲವೆಡೆ ತೊಂದರೆ ಉಂಟಾಗಿದೆ.

ಈ ಘಟಕಗಳ ನಿರ್ವಹಣೆಯಲ್ಲಿ ಇನ್ನೂ ಸುಧಾರಣೆ ಕಾಣುತ್ತಿಲ್ಲ. ಆಗಾಗ ದುರಸ್ತಿಗೆ ಬರುವ ಈ ಘಟಕಗಳನ್ನು ಸರಿಯಾಗಿ ದುರಸ್ತಿ ಮಾಡುತ್ತಿಲ್ಲ. ಯಂತ್ರಗಳು ಹಾಳಾಗಿ ಹಲವು ದಿನಗಳಾದರೂ ದುರಸ್ತಿ ಮಾಡಿಸುವುದಿಲ್ಲವೆಂದು ಗ್ರಾಮೀಣ ಪ್ರದೇಶದ ಜನರು ದೂರುತ್ತಾರೆ.

***

ಕಳೆದ ವರ್ಷ ಉತ್ತಮ ಮಳೆಯಾಗಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿದೆ. ಹೀಗಾಗಿ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ.

- ಮಹಾಂತಪ್ಪ ಜಿ. ಕನ್ನೂರು, ಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT