ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆನಷ್ಟಕ್ಕೆ ಸಚಿವರಿಂದ ಪರಿಹಾರದ ಭರವಸೆ

ಅಕಾಲಿಕ ಮಳೆಗೆ ಹಾನಿಯಾದ ಬೆಳೆ ವೀಕ್ಷಿಸಿದ ಕಂದಾಯ ಸಚಿವ ಆರ್‌.ಅಶೋಕ್‌
Last Updated 12 ಜನವರಿ 2021, 3:28 IST
ಅಕ್ಷರ ಗಾತ್ರ

ಚಿತ್ರದುರ್ಗ/ಹಿರಿಯೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ಹಾನಿಯಾಗಿರುವ ಬೆಳೆಯನ್ನು ಕಂದಾಯ ಸಚಿವ ಆರ್‌.ಅಶೋಕ್‌ ಸೋಮವಾರ ವೀಕ್ಷಣೆ ಮಾಡಿದರು. ರೈತರ ಸಂಕಷ್ಟ ಆಲಿಸಿ ಪರಿಹಾರ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದರು.

ಹಿರಿಯೂರು ತಾಲ್ಲೂಕಿನ ಬಬ್ಬೂರು, ಐಮಂಗಲ ಹೋಬಳಿಯ ತಾಳವಟ್ಟಿ ಹಾಗೂ ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿದರು. ಕಡಲೆ ಹಾಗೂ ಈರುಳ್ಳಿ ಬೆಳೆ ಮಳೆಗೆ ತುತ್ತಾಗಿರುವುದನ್ನು ಕಂಡು ಮರುಕ ವ್ಯಕ್ತಪಡಿಸಿದರು. ಮಳೆ ನೀರು ನಿಂತಿದ್ದರಿಂದ ಹಳದಿ ಬಣ್ಣಕ್ಕೆ ತಿರುಗಿದ ಬೆಳೆ ನೋಡಿ ರೈತರನ್ನು ಸಮಾಧಾನಪಡಿಸಿದರು.

ಹಿರಿಯೂರು ತಾಲ್ಲೂಕಿನಬಬ್ಬೂರು ಗ್ರಾಮದಶಿವಣ್ಣ ಹಾಗೂ ಕಾಂತರಾಜ್ ಅವರ ಜಮೀನಿಗೆ ಕಂದಾಯ ಸಚಿವರು ಭೇಟಿ ನೀಡಿದರು. ಕಡಲೆ ಹೊಲದಲ್ಲಿಯೇ ಅಧಿಕಾರಗಳಿಂದ ಮಾಹಿತಿ ಪಡೆದರು. ಅತಿ ಹೆಚ್ಚು ಮಳೆ ಬಿದ್ದಿದ್ದರಿಂದ ಬೆಳೆಗೆ ಆಗಿರುವ ತೊಂದರೆಯನ್ನು ಕೇಳಿಕೊಂಡರು. ಸಮೀಕ್ಷೆ ನಡೆಸಿ ಶೀಘ್ರ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಿರಿಯೂರುತಾಲ್ಲೂಕಿನಲ್ಲಿ 350 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಮತ್ತು 351 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಹಾಳಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ ಮಾಹಿತಿ ನೀಡಿದರು. ಅಲ್ಲಿಂದ ಐಮಂಗಲ ಹೋಬಳಿಯ ತಾಳವಟ್ಟಿ ಗ್ರಾಮಕ್ಕೆ ಭೇಟಿ ನೀಡಿದರು. ಬಳಿಕ ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿಗೆ ತೆರಳಿ ರೈತ ರೊಂದಿಗೆ ಚರ್ಚೆ ನಡೆಸಿದರು. ಮರದ ಕೆಳಗೆ ಕುಳಿತು ಕಾಫಿ ಸೇವಿಸಿದರು.

‘ಗಾಳಿಯಲ್ಲಿನ ತೇವಾಂಶಕ್ಕೆ ಕಡಲೆ ಬೆಳೆಯುತ್ತದೆ. ಅಕಾಲಿಕವಾಗಿ ಸುರಿದ ಮಳೆಯಿಂದ ನೀರು ನಿಂತಿದ್ದು, ಬೇರು ಸಮೇತ ಕೊಳೆಯುತ್ತಿದೆ. ಒಂದೆರಡು ದಿನದಲ್ಲಿ ಗಿಡಗಳೆಲ್ಲ ಕೊಳೆತು ಹೋಗುತ್ತವೆ. ಹಲವು ವರ್ಷಗಳಲ್ಲಿ ಕಾಣದಂತಹ ರೀತಿ ಕಡಲೆ ಬೆಳೆದಿತ್ತು. ಎಕರೆಗೆ ಸುಮಾರು 8 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆಯಲ್ಲಿದ್ದೆವು. ಈಗ ಖರ್ಚು ಮಾಡಿರುವ ಹಣವೂ ಸಿಗುವುದಿಲ್ಲ’ ಎಂದು ಬಬ್ಬೂರು ಗ್ರಾಮದ ರೈತ ಕಾಂತರಾಜ್ ನೋವು ತೋಡಿಕೊಂಡರು.

‘ಜಿಲ್ಲೆಯಲ್ಲಿ ರಫ್ತು ಗುಣಮಟ್ಟದ ಈರುಳ್ಳಿ ಬೆಳೆಯಲಾಗುತ್ತಿದೆ. ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯಲ್ಲಿ ಈರುಳ್ಳಿ ಬೆಳೆ ಸಂಪೂರ್ಣ ಹಾಳಾಗಿದೆ. ಮಾರುಕಟ್ಟೆ ಯಲ್ಲಿ ಉತ್ತಮ ದರ ಸಿಗುತ್ತಿರುವಾಗ ಅಕಾಲಿಕ ಮಳೆಯಿಂದ ಈರುಳ್ಳಿ ಹಾಳಾಗಿರುವುದು ರೈತರನ್ನು ಕಂಗೆ ಡಿಸಿದೆ. ಸರ್ಕಾರ ವೈಜ್ಞಾನಿಕ ರೀತಿ ಯಲ್ಲಿ ನಷ್ಟದ ಅಂದಾಜು ಮಾಡಿಸಿ ಪರಿಹಾರ ನೀಡಬೇಕು’ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮನವಿ ಮಾಡಿದರು.

ಖರೀದಿ ಕೇಂದ್ರಕ್ಕೆ ಮನವಿ: ‘ತಾಲ್ಲೂಕಿನ ಗುಯಿಲಾಳು, ಮೇಟಿಕುರ್ಕೆ ಸೇರಿ ಹಲವು ಕಡೆ ಕಡಲೆ ಬೆಳೆ ಕಟಾವು ಆರಂಭವಾಗಿದೆ. 10–15 ದಿನಗಳಲ್ಲಿ ಕಟಾವು ಪೂರ್ಣಗೊಳ್ಳಲಿದ್ದು, ಸರ್ಕಾರ ತಕ್ಷಣ ಕಡಲೆ ಖರೀದಿ ಕೇಂದ್ರ ಆರಂಭಿಸಬೇಕು. 2019ರಲ್ಲಿ ವಾಣಿವಿಲಾಸ ಜಲಾಶಯದಲ್ಲಿ ನೀರಿಲ್ಲದೆ ಒಣಗಿ ಹೋಗಿರುವ ಅಡಿಕೆ–ತೆಂಗಿನ ತೋಟಗಳ ರೈತರಿಗೆ ಪರಿಹಾರ ನೀಡಬೇಕು’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನವಿ ಮಾಡಿದರು.

‘ಕೋಲಾರ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿಯೂ ಅಕಾಲಿಕ ಮಳೆಯಿಂದ ಬಹಳಷ್ಟು ಹಾನಿಯಾಗಿದೆ. ಹಾನಿ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸಂತ್ರಸ್ತ ರೈತರಿಗೆ ಪರಿಹಾರ ಕೊಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. 60 ವರ್ಷಗಳಲ್ಲಿ ಬಂದಿರದ ಮಳೆ ಜನವರಿ ತಿಂಗಳಲ್ಲಿ ಈ ಭಾಗದಲ್ಲಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮ ಸರ್ಕಾರ ಯಾವತ್ತೂ ರೈತರ ಪರ ಇರುತ್ತದೆ’ ಎಂದು ಆರ್.ಅಶೋಕ್ ರೈತರಿಗೆ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಉಪ ವಿಭಾಗಾಧಿಕಾರಿ ನಾಗರಾಜ್‌, ತಹಶೀಲ್ದಾರ್ ಜಿ.ಎಚ್.ಸತ್ಯನಾರಾಯಣ, ತಾಲ್ಲೂಕು ಪಂಚಾ ಯಿತಿ ಇಒ ಹನುಮಂತಪ್ಪ ಇದ್ದರು.

ಮಾತಿನಲ್ಲೇ ಶ್ರೀನಿವಾಸ್‌ ತಿವಿದ ಸಚಿವ
ರಾಜ್ಯ ಗೊಲ್ಲರ ಸಂಘದ ಅಧ್ಯಕ್ಷ ಹಾಗೂ ಶಾಸಕಿ ಪೂರ್ಣಿಮಾ ಅವರ ಪತಿ ಡಿ.ಟಿ.ಶ್ರೀನಿವಾಸ್ ಬಗ್ಗೆ ಸಚಿವ ಆರ್‌.ಅಶೋಕ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರವಾಸಿ ಮಂದಿರದ ಕೊಠಡಿಯಲ್ಲಿ ಸಚಿವ ಅಶೋಕ್‌ ಅವರು, ಡಿ.ಟಿ.ಶ್ರೀನಿವಾಸ್ ಅವರಿಗೆ ‘ಏನಪ್ಪಾ, ಎಂಎಲ್‌ಎಗೆ ನೀನೇ ಅಡ್ಡಗಾಲಾಗಿದ್ದೀಯ? ವಿಧಾನ ಪರಿಷತ್ ಚುನಾವಣೆಗೆ ನಿಂತು ತಪ್ಪು ಮಾಡಿದೆ. ನೋಡು ಈಗ ಏನೆಲ್ಲ ಆಗುತ್ತಿದೆ’ ಎಂದು ನಯವಾಗಿ ಕ್ಲಾಸ್ ತೆಗೆದುಕೊಂಡರು.

ಈಚೆಗೆ ನಡೆದ ವಿಧಾನಪರಿಷತ್‌ ಚುನಾವಣೆಯಲ್ಲಿ ಶ್ರೀನಿವಾಸ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡರು. ಪಕ್ಷದ ಸೂಚನೆಯನ್ನು ಮೀರಿ ಚುನಾವಣೆಗೆ ಸ್ಪರ್ಧಿಸಿದ್ದು ಬಿಜೆಪಿ ನಾಯಕರ‌ಲ್ಲಿ ಅಸಮಾಧಾನ ಮೂಡಿಸಿದೆ. ಪೂರ್ಣಿಮಾ ಅವರ ಸಚಿವ ಸ್ಥಾನದ ಆಸೆಗೆ ಇದು ತೊಡಕಾಗುವ ಸಾಧ್ಯತೆ ಇದೆ.

ಜಮೀನಿನಲ್ಲೂ ರಾಜಕಾರಣದ್ದೇ ಮಾತು
ಮಳೆಗೆ ಹಾಳಾಗಿರುವ ಬೆಳೆಯ ವೀಕ್ಷಣೆಗೆ ಬಂದಿದ್ದ ಕಂದಾಯ ಸಚಿವ ಆರ್‌.ಅಶೋಕ್‌, ರಾಜಕಾರಣದಲ್ಲಿಯೇ ತಲ್ಲೀನರಾಗಿದ್ದರು. ಎಡಬಿಡದೇ ಬರುತ್ತಿದ್ದ ದೂರವಾಣಿ ಕರೆಗಳನ್ನು ಸ್ವೀಕರಿಸಿ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಮಾತನಾಡುತ್ತಿದ್ದರು.

ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿಗೆ ಬಂದಾಗ ಮಧ್ಯಾಹ್ನ 2.30 ದಾಟಿತ್ತು. ಜಮೀನಿನಲ್ಲಿ ನಡೆದಾಡಿ ಸುಸ್ತಾದ ಸಚಿವರು ಮರದ ನೆರಳಿನಲ್ಲಿ ಕುಳಿತರು. ದೂರವಾಣಿಯಲ್ಲಿ ಮಾತನಾಡುತ್ತ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಆಪ್ತರೊಂದಿಗೆ ಚರ್ಚೆ ನಡೆಸಿದರು.

ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಸಚಿವರು, ‘ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆ ನಡೆಯುತ್ತಿದೆ. ಆಪ್ತರು ಸಚಿವರಾಗಬೇಕು ಎಂಬ ಅಪೇಕ್ಷೆ ಹೊಂದಿರುತ್ತಾರೆ. ಅವರಿಗೆ ಸ್ಪಂದಿಸಬೇಕಲ್ಲವೇ’ ಎಂದು ಮರು ಪ್ರಶ್ನಿಸಿದರು.

60 ವರ್ಷಗಳಲ್ಲೇ ಹೆಚ್ಚು ಮಳೆ
ಚಿತ್ರದುರ್ಗ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ 60 ವರ್ಷಗಳಲ್ಲೇ ಅತಿ ಹೆಚ್ಚು ಮಳೆ ದಾಖಲಾಗಿದೆ. 1960ರಲ್ಲಿ ಇಂತಹ ಮಳೆ ಬಿದ್ದಿತ್ತು ಎಂಬ ಸಂಗತಿಯನ್ನು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರು ಸಚಿವರ ಗಮನ ಸೆಳೆದರು.

ಜಿಲ್ಲೆಯಲ್ಲಿ ಜ.7, 8 ಹಾಗೂ 9 ರಂದು ಮಳೆಯಾಗಿದೆ. ಅಕಾಲಿಕವಾಗಿ ಸುರಿದ ಮಳೆಗೆ ರೈತರು ಕಂಗಾಲಾಗಿದ್ದಾರೆ. ಒಂದು ಮಿ.ಮೀ. ಗಿಂತ ಕಡಿಮೆ ಮಳೆಯಾಗುವುದು ವಾಡಿಕೆ. ಆದರೆ, ಜಿಲ್ಲೆಯಲ್ಲಿ ಸರಾಸರಿ 31 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 59, ಹಿರಿಯೂರು ತಾಲ್ಲೂಕಿನಲ್ಲಿ 37, ಹೊಳಲ್ಕೆರೆ 28, ಚಳ್ಳಕೆರೆ 23, ಹೊಸದುರ್ಗ 18 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 11 ಮಿ.ಮೀ ಸರಾಸರಿ ಮಳೆಯಾಗಿದೆ. ಹಿರಿಯೂರು ಹಾಗೂ ಚಿತ್ರದುರ್ಗ ತಾಲ್ಲೂಕಿನಲ್ಲಿ ಹೆಚ್ಚು ಬೆಳೆ ನಷ್ಟ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT