ಬುಧವಾರ, ಜುಲೈ 28, 2021
28 °C

ರೈಲ್ವೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರೈಲ್ವೆ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಸಿಐಟಿಯು ಕಾರ್ಯಕರ್ತರು ಚಿತ್ರದುರ್ಗ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸ್ವಾತಂತ್ರ್ಯ ಚಳವಳಿಗೂ ಕೊಡುಗೆ ನೀಡಿದ ಭಾರತೀಯ ರೈಲ್ವೆಗೆ ತನ್ನದೇ ಇತಿಹಾಸವಿದೆ. ದೇಶದ ಉದ್ದಗಲಕ್ಕೂ ವಿಸ್ತಾರ ಜಾಲ ಹೊಂದಿದ ರೈಲ್ವೆಯನ್ನು ಜನಸಾಮಾನ್ಯರು ಅವಲಂಬಿಸಿದ್ದಾರೆ. ದೇಶದ ಆರ್ಥಿಕತೆಯ ಜೀವನಾಡಿಯೂ ಆಗಿರುವ ರೈಲ್ವೆಯನ್ನು ಸಾರ್ವಜನಿಕ ಉದ್ಯಮವಾಗಿ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ರೈಲ್ವೆ ಇಲಾಖೆನ್ನು ಖಾಸಗೀಕರಣ ಮಾಡಲು ತೀರ್ಮಾನಿಸಿದ್ದು ತಪ್ಪು ನಿರ್ಧಾರ. ಇದರಿಂದ ದೇಶದ ಪ್ರತಿಷ್ಠಿತ 109 ರೈಲ್ವೆ ನಿಲ್ದಾಣಗಳು ಖಾಸಗಿ ಕಂಪನಿಗಳ ಪಾಲಾಗಲಿವೆ. ಈಗಾಗಲೇ 151 ರೈಲುಗಳನ್ನು ಓಡಿಸಲು ಖಾಸಗಿ ಕಂಪನಿಗಳು ಮುಂದಾಗಿವೆ. ಇದು ದೇಶದ ಆರ್ಥಿಕತೆ ಹಾಗೂ ಸಾಮಾನ್ಯರ ಜನಜೀವನದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಸೋಂಕು ಕಾಣಿಸಿಕೊಂಡ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವಿದೆ. ಇಂತಹ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ರೈಲ್ವೆಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಸಿದೆ. ರೈಲ್ವೆ ಕ್ಷೇತ್ರ ಖಾಸಗೀಕರಣಗೊಂಡರೆ ಜನಸಾಮಾನ್ಯರ ಬದುಕು ಇನ್ನಷ್ಟು ದುರ್ಬರವಾಗುತ್ತದೆ. ರೈಲ್ವೆ ಪ್ರಯಾಣದಲ್ಲಿ ಸಿಗುತ್ತಿದ್ದ ಸಬ್ಸಿಡಿ ಸ್ಥಗಿತಗೊಳ್ಳಲಿದೆ. ಹಣ ಇರುವವರು ಮಾತ್ರ ರೈಲುಗಳಲ್ಲಿ ಪ್ರಯಾಣ ಮಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರೈಲ್ವೆ ಬೋಗಿ, ಗಾಲಿ ಸೇರಿ ಬಿಡಿಭಾಗ ತಯಾರಿಕೆ ಕಾರ್ಖಾನೆಗಳು ಸರ್ಕಾರಿ ಸ್ವಾಮ್ಯದಲ್ಲಿವೆ. ರೈಲ್ವೆ ಭಾಗಶಃ ಖಾಸಗೀಕರಣ ಮಾಡುವುದರಿಂದ ಇಂತಹ ಕಾರ್ಖಾನೆಗಳು ನಷ್ಟದ ಸುಳಿಗೆ ಸಿಲುಕುವ ಸಾಧ್ಯತೆ ಇದೆ. ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಬೀದಿಗೆ ಬೀಳುವ ಸಾಧ್ಯತೆ ಇದೆ. ಕ್ರೀಡಾಪಟು, ಅಂಗವಿಕಲರು, ದಲಿತರು ಹಾಗೂ ಮಹಿಳೆಯರಿಗೆ ಸಿಗುತ್ತಿದ್ದ ಮೀಸಲಾತಿ ಸೌಲಭ್ಯವೂ ಮರೀಚಿಕೆಯಾಗಲಿದೆ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್, ತಾಲ್ಲೂಕು ಸಂಚಾಲಕ ಬಿ.ಸಿ. ನಾಗರಾಜಚಾರಿ, ಶೇಖ್‍ ಕಲೀಂ ಉಲ್ಲಾ, ಸಣ್ಣೀರಪ್ಪ ಪ್ರತಿಭಟನೆಯಲ್ಲಿ ಇದ್ದರು.

ಪರೀಕ್ಷೆ ರದ್ಧತಿಗೆ ಒತ್ತಾಯ

ಪ್ರಥಮ ಹಾಗೂ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕಲ್ಪಿಸಿರುವ ಪರೀಕ್ಷೆ ಇಲ್ಲದೇ ಉತ್ತೀರ್ಣರಾಗುವ ಅವಕಾಶವನ್ನು ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ವಿಸ್ತರಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಸ್ಟೂಡೆಂಟ್ಸ್‌ ಅಸೋಷಿಯೇಶನ್‌ ಶುಕ್ರವಾರ ಪ್ರತಿಭಟನೆ ನಡೆಸಿತು.

ವಿಜ್ಞಾನ ಕಾಲೇಜು ಎದುರು ಜಮಾಯಿಸಿದ ವಿದ್ಯಾರ್ಥಿಗಳು ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಿದರು. ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ದೆಹಲಿ ಸೇರಿ ಹಲವು ರಾಜ್ಯಗಳಲ್ಲಿ ಕಲ್ಪಿಸಿರುವ ಅವಕಾಶವನ್ನು ಕರ್ನಾಟಕದ ವಿದ್ಯಾರ್ಥಿಗಳಿಗೂ ಒದಗಿಸಬೇಕು ಎಂದು ಆಗ್ರಹಿಸಿದರು.

ಪರೀಕ್ಷೆಗೆ ಹಾಜರಾಗಲು ಸರಿಯಾದ ಸಾರಿಗೆ ಸೌಲಭ್ಯವಿಲ್ಲ. 30 ಜನರ ಪ್ರಯಾಣಕ್ಕೆ ಮಾತ್ರ ಅವಕಾಶ ಇರುವುದರಿಂದ ಬಸ್‌ ಅವಲಂಬನೆ ಕಷ್ಟವಾಗುತ್ತದೆ. ಬಹುತೇಕ ಪ್ರದೇಶಗಳು ಕೋವಿಡ್‌ ಕಾರಣಕ್ಕೆ ಸೀಲ್‌ಡೌನ್‌ ಆಗಿದ್ದು, ವಿದ್ಯಾರ್ಥಿಗಳು ಹೊರಬಲು ಅಸಾಧ್ಯವಾಗಿದೆ. ಇಂತಹ ಸ್ಥಿತಿಯಲ್ಲಿ ಪರೀಕ್ಷೆ ನಡೆಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.