ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ ಅತ್ಯಾಚಾರ ಘಟನೆ ವಿರುದ್ಧ ವಾಕ್‌ ಮತ್ತು ಶ್ರವಣದೋಷವುಳ್ಳವರ ಪ್ರತಿಭಟನೆ

ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ: ಸಂಜ್ಞೆಯಲ್ಲೇ ಆಕ್ರೋಶ
Last Updated 20 ಸೆಪ್ಟೆಂಬರ್ 2021, 12:52 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ’ ಎಂಬ ಪ್ಲೆಕಾರ್ಡ್‌ ಹಿಡಿದು ಬಿರುಬಿಸಿಲಿನಲ್ಲಿ ನಿಂತಿದ್ದವರ ಮೊಗ ಕೆರಳಿತ್ತು. ಸಂಜ್ಞೆಯಲ್ಲೇ ನಡೆಯುತ್ತಿದ್ದ ಸಂವಹನದಲ್ಲಿ ಆಕ್ರೋಶ ಇಣುಕುತ್ತಿತ್ತು. ಧ್ವನಿಪೆಟ್ಟಿಗೆಯಿಂದ ಹೊರಬರುತ್ತಿದ್ದ ಶಬ್ದ ಆರ್ತನಾದವಾಗಿ ಅನುರಣಿಸಿತು.

ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹೋಬಳಿ ವ್ಯಾಪ್ತಿಯ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ವಾಕ್‌ ಮತ್ತು ಶ್ರವಣದೋಷವುಳ್ಳವರು ನಡೆಸಿದ ಪ್ರತಿಭಟನೆ ಸಾರ್ವಜನಿಕರ ಕಣ್ಣಾಲಿಗಳನ್ನು ತೇವಗೊಳಿಸಿತು. ಅತ್ಯಾಚಾರ ಸಂತ್ರಸ್ತೆ ವಾಕ್‌ ಮತ್ತು ಶ್ರವಣದೋಷ ಹೊಂದಿದ್ದರು ಎಂಬುದು ಇವರನ್ನು ಕೆರಳುವಂತೆ ಮಾಡಿತ್ತು.

ಸೆ.16ರಂದು ರಾತ್ರಿ ಬಸ್‌ ಇಳಿದು ಕಾಲ್ನಡಿಗೆಯಲ್ಲಿ ಮನೆಗೆ ಸಾಗುವಾಗ ಈ ಘಟನೆ ನಡೆದಿದೆ. 200 ಮೀಟರ್‌ ದೂರದ ಮನೆಗೆ ಒಂಟಿಯಾಗಿ ತೆರಳುತ್ತಿದ್ದ ಮಹಿಳೆಯ ಮೇಲೆ ಆರೋಪಿ ನಾಗರಾಜ ಅಲಿಯಾಸ್‌ ನಾಗೇಶ ಎರಗಿದ್ದನು. ಗಂಭೀರವಾಗಿ ಅಸ್ವಸ್ಥಗೊಂಡಿದ್ದರುವ ಮಹಿಳೆ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಾಕ್‌ ಮತ್ತು ಶ್ರವಣದೋಷವುಳ್ಳವರನ್ನು ಈ ಘಟನೆ ಘಾಸಿಗೊಳಿಸಿದೆ. ಕರ್ನಾಟಕ ರಾಜ್ಯ ಶ್ರವಣದೋಷವುಳ್ಳವರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಜಮಾಯಿಸಿದ್ದರು. ರಾಜ್ಯದ ಪ್ರತಿ ಜಿಲ್ಲೆಯಿಂದ ಬಂದಿದ್ದವರು ಒನಕೆ ಓಬವ್ವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಆರಂಭಿಸಿದರು.

‘ಅತ್ಯಾಚಾರ ಆರೋಪಿಯನ್ನು ಗಲ್ಲಿಗೆ ಏರಿಸಬೇಕು’, ‘ಸಂತ್ರಸ್ತ ಮಹಿಳೆಗೆ ನ್ಯಾಯ ಕೊಡಿಸಬೇಕು’ ಎಂದು ಪ್ಲೆಕಾರ್ಡ್‌ ಪ್ರದರ್ಶಿಸಿದರು. ಓಬವ್ವ ವೃತ್ತದಲ್ಲಿ ಜಾಥಾ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಹಾಗೂ ಆರೋಪಿ ಶಿಕ್ಷೆಯಿಂದ ಪಾರಾಗದಂತೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು.

‘ಈ ಘಟನೆ ವಾಕ್‌ ಮತ್ತು ಶ್ರವಣದೋಷವುಳ್ಳ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ. ನಿರ್ಭೀತಿಯಿಂದ ಸಂಚರಿಸುವ ವಾತಾವರಣ ಇಲ್ಲವೇ ಎಂಬ ಅನುಮಾನ ಹುಟ್ಟುಹಾಕಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸೂಕ್ತ ರೀತಿಯ ತನಿಖೆ ನಡೆಸಬೇಕು. ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಸಂಘದ ಅಧ್ಯಕ್ಷ ಕೆ.ಎಚ್‌.ಶಂಕರ್‌ ಆಗ್ರಹಿಸಿದರು.

ಭಾವಚಿತ್ರಕ್ಕೆ ಚಪ್ಪಲಿ ಏಟು

ಆರೋಪಿಯ ಭಾವಚಿತ್ರವನ್ನು ನೆಲಕ್ಕೆ ಹಾಕಿದ ಪ್ರತಿಭಟನಕಾರರು, ಚಪ್ಪಲಿ ಏಟು ನೀಡಿ ಸಿಟ್ಟು ಹೊರಹಾಕಿದರು. ಈ ಭಾವಾವೇಶ ಕಂಡು ಸಾರ್ವಜನಿಕರೂ ಬೆರಗಾದರು.

ಕೋವಿಡ್‌ ಮಾರ್ಗಸೂಚಿ ಪಾಲಿಸಿ ಪ್ರತಿಭಟನೆ ನಡೆಸುತ್ತಿದ್ದವರು ಒಮ್ಮೆ ಕೆರಳಿದರು. ಆರೋಪಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಕೆಳಗೆ ಎಸೆದು ಕಾಲಲ್ಲಿ ತುಳಿದರು. ಯಾವುದೇ ಕಾರಣಕ್ಕೂ ಆರೋಪಿ ಜೈಲಿನಿಂದ ಹೊರಬರದಂತೆ ಪೊಲೀಸರು ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಎಚ್‌.ಎಸ್.ದೇವರಾಜ್‌, ಡಿ.ಅವಿನಾಶ್‌, ಡಿ.ನವೀನಕುಮಾರ್‌, ಆರ್‌.ರಘು, ಭರತ್‌ ಇದ್ದರು.

***

ದುರ್ಬಲರ ಮೇಲೆ ನಡೆದ ದೌರ್ಜನ್ಯ ಖಂಡಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ನಮ್ಮ ಕೂಗು ಸರ್ಕಾರ ಹಾಗೂ ನ್ಯಾಯಾಲಯಕ್ಕೆ ತಲುಪಬೇಕು.

ಕೆ.ಎಚ್‌.ಶಂಕರ್‌, ಅಧ್ಯಕ್ಷ
ಶ್ರವಣದೋಷವುಳ್ಳವರ ಕ್ಷೇಮಾಭಿವೃದ್ಧಿ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT