ಮಂಗಳವಾರ, ಆಗಸ್ಟ್ 3, 2021
26 °C

ಬಾಡಿಗೆ ಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ನಗರ ಸೇರಿ ಜಿಲ್ಲೆಯಲ್ಲಿರುವ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ ವ್ಯಾಪ್ತಿಯ ಉಪಹಾರ ಗೃಹ, ಎಲ್ಲ ಮಳಿಗೆಗಳ ಬಾಡಿಗೆಯನ್ನು ಮುಂದಿನ ಆರು ತಿಂಗಳವರೆಗೆ ಮನ್ನಾ ಮಾಡುವಂತೆ ಒತ್ತಾಯಿಸಿ ಬಸ್‌ ನಿಲ್ದಾಣದಲ್ಲಿನ ವಾಣಿಜ್ಯ ಮಳಿಗೆಗಳ ಪರವಾನಿಗೆದಾರರು ಗುರುವಾರ ಪ್ರತಿಭಟನೆ ನಡೆಸಿದರು.

ವ್ಯಾಪಾರ ಇಲ್ಲದ ಕಾರಣ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಆದ್ದರಿಂದ ಮಾಸಿಕ ಬಾಡಿಗೆ ಮನ್ನಾ ಮಾಡಿ ಎಂದು ಕೆಎಸ್ಆರ್‌ಟಿಸಿ ಚಿತ್ರದುರ್ಗ ವಿಭಾಗೀಯ ಘಟಕಕ್ಕೆ ಮನವಿ ಸಲ್ಲಿಸಿದರು.

ಲಾಕ್‌ಡೌನ್‌ ಸಡಿಲಗೊಳಿಸಿದ‌ ನಂತರ ಬಸ್‌ ಸಂಚಾರ ಪುನಾ ಆರಂಭವಾಗಿದೆ. ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದೆ. ಇದರಿಂದಾಗಿ ವ್ಯಾಪಾರವೇ ಇಲ್ಲವಾಗಿದೆ. ಹೀಗಿರುವಾಗ ದುಬಾರಿ ಬಾಡಿಗೆ ಕಟ್ಟುವುದಾದರೂ ಹೇಗೆ ಎಂದು ಅಳಲು ತೋಡಿಕೊಂಡರು.

ಶೇ 20ರಷ್ಟು ಬಸ್‌ಗಳು ಜೂನ್ ಬಳಿಕ ಸಂಚಾರ ಆರಂಭಿಸಿದ್ದು, ಶೇ 20ರಷ್ಟು ಮಾಸಿಕ ಶುಲ್ಕ ಭರಿಸಲು ಕೆಎಸ್‌ಆರ್‌ಟಿಸಿ ಸಂಸ್ಥೆ ಸೂಚಿಸಿದೆ. ಆದರೆ, ಅಷ್ಟು ಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರಸ್ಥರಿಗೆ ದಿಕ್ಕೆ ತೋಚದಂತಾಗಿದೆ. ವ್ಯಾಪಾರವಿಲ್ಲದೇ ನಲುಗುತ್ತಿದ್ದೇವೆ. ಸೂಚನೆ ನೀಡಿದ ಮೂರೇ ದಿನದಲ್ಲಿ ಶುಲ್ಕ ಪಾವತಿಸುವುದು ಕಷ್ಟಕರವಾಗಿದೆ ಎಂದು ತಿಳಿಸಿದರು.

ಜುಲೈನಲ್ಲಿ ನಡೆದ ಕಾರ್ಯಾಚರಣೆಗೆ ಅನುಗುಣವಾಗಿ ಮಾಸಿಕ ಶುಲ್ಕ ಪಾವತಿಸಬೇಕು ಎಂಬ ಮತ್ತೊಂದು ಸೂಚನೆಯೂ ನಮಗೆ ಆತಂಕ ಉಂಟುಮಾಡಿದೆ. ಇದರಿಂದಾಗಿ ನಾವುಗಳು ಕಂಗಾಲಾಗಿದ್ದೇವೆ. ಪಾವತಿಸಲು ಸಾಧ್ಯವಾಗದೇ ಮಳಿಗೆ ಖಾಲಿ ಮಾಡಲು ಕೆಲವರು ಸಿದ್ಧರಿದ್ದಾರೆ. ಆದರೆ, ಅದಕ್ಕೂ ಅನುಮತಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳಿಗೆ ತೆರೆಯಲಿ, ತೆರೆಯದಿರಲಿ. ಕಡ್ಡಾಯವಾಗಿ ಬಾಡಿಗೆ ಪಾವತಿಸಬೇಕು ಎಂಬ ನಿಯಮ ಎಷ್ಟು ಸರಿ? ಕೊರೊನಾ ಸೋಂಕು ಮುಂದಿನ ಆರು ತಿಂಗಳಲ್ಲಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಪೂರ್ಣ ಬಾಡಿಗೆ ಮನ್ನಾ ಮಾಡಿ ಎಂದು ಸಂಸ್ಥೆಗೆ ಕೋರಿದರು.

ಫಣಿರಾಜ್ ಅರಸ್, ಕೊಟ್ರೇಶ್‌, ಸಂಪತ್‌ಕುಮಾರ್, ನಜೀರ್ ಅಹ್ಮದ್, ಕೆ. ಗಣೇಶ್, ಕೆ.ಆರ್. ಶ್ರೀನಿವಾಸ್, ಸುಮಿತ್ರಾ, ರಾಘವೇಂದ್ರ, ಚಂದ್ರಶೇಖರ್, ಪಾರ್ಥಲಿಂಗ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.